AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಡಿಯಾರ ಕನಸಿನ ಕೂಸು IIWC ಭವ್ಯ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

1945ರಲ್ಲಿ ಸ್ಥಾಪನೆಯಾದ ಬಿ.ಪಿ. ವಾಡಿಯಾರ ಕನಸಿನ ಕೂಸು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆ ಕಳೆದ 8 ದಶಕಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ನೃತ್ಯ, ಸಂಗೀತ, ಕಲಾ ಪ್ರದರ್ಶನ, ವಿಚಾರಗೋಷ್ಠಿ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಐಐಡಬ್ಲ್ಯುಸಿ ನಿರಂತರವಾಗಿ ವೇದಿಕೆ ಕಲ್ಪಿಸುತ್ತಿದೆ.

ವಾಡಿಯಾರ ಕನಸಿನ ಕೂಸು IIWC ಭವ್ಯ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ
Indian Institute Of World Culture
ಪ್ರಸನ್ನ ಹೆಗಡೆ
|

Updated on:Oct 23, 2025 | 5:09 PM

Share

ಬೆಂಗಳೂರು, ಅಕ್ಟೋಬರ್​ 23: ಅಪ್ಪಟ ದೇಶೀಯ ಸಾಹಿತ್ಯ-ಸಾಂಸ್ಕೃತಿಗೆ ನೆಲೆಯಾಗಿದ್ದ ಬಸವನಗುಡಿಯ ವಾತಾವರಣಕ್ಕೆ ವಿದೇಶಿ ಟಚ್‌ ನೀಡಿದರೆ ಉತ್ತಮ ಮೌಲ್ಯ ಕಲ್ಪಿಸಿದಂತಾಗುತ್ತದೆ. ವಿದೇಶಗಳ ಮೌಲಿಕ ಸಾಹಿತ್ಯ-ಸಂಸ್ಕೃತಿ ಅಧ್ಯಯನಕ್ಕೆ ಇಲ್ಲಿ ಅವಕಾಶ ಮಾಡಿಕೊಡಬೇಕು. ಅದರಿಂದ ದೇಶ- ವಿದೇಶಗಳ ಸಾಹಿತ್ಯ-ಸಂಸ್ಕೃತಿ ಪರಸ್ಪರ ಬೆಳೆಯಬಲ್ಲದು ಎಂಬ ಉದಾತ್ತ ಆಲೋಚನೆ ಬಂದಿದ್ದೇ ತಡ ಬದುಕಿನ ಸಂಧ್ಯಾಕಾಲದಲ್ಲಿ ಹರಸಾಹಸಕ್ಕೆ ಕೈಹಾಕಿದವರು ಬಿ.ಪಿ. ವಾಡಿಯಾ (BP Wadia).  ಅವರ ಕನಸಿನ ಕೂಸೇ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ Indian Institute of World Culture (IIWC).

1945ರಲ್ಲಿ ಸ್ಥಾಪನೆಯಾದ ಐಐಡಬ್ಲ್ಯುಸಿ ಸಂಸ್ಥೆ ಕಳೆದ 8 ದಶಕಗಳಲ್ಲಿ ಹೆಮ್ಮರವಾಗಿ ಬೆಳೆದಿದೆ.ನೃತ್ಯ, ಸಂಗೀತ, ಕಲಾ ಪ್ರದರ್ಶನ, ವಿಚಾರಗೋಷ್ಠಿ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (ಐಐಡಬ್ಲ್ಯುಸಿ) ನಿರಂತರವಾಗಿ ವೇದಿಕೆ ಕಲ್ಪಿಸುತ್ತಿದೆ. ವಾಡಿಯಾ ಅವರು ತಮ್ಮ 58ನೇ ವಯಸ್ಸಿನಲ್ಲಿ ಸಂಸ್ಥೆಯನ್ನು ಕಟ್ಟಿ, ಸುಮಾರು 15 ವರ್ಷ ಕಾಲ ಇದಕ್ಕೆ ಆಸರೆಯಾಗಿದ್ದರು. ತಮ್ಮ 78 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಬಸವನಗುಡಿಯ ತಂಪಾದ ಹಸಿರು ವಾತಾವರಣದಲ್ಲಿ ಜನ್ಮ ತಳೆದ ಸಂಸ್ಥೆಯು, ಮೊದಲ ನಾಲ್ಕು ವರ್ಷ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯಚಟುವಟಿಕೆ ನಡೆಸಿ 1948ರಲ್ಲಿ ಸ್ವಂತ ಜಾಗವನ್ನು ಖರೀದಿಸಿತು. ಅಂದಿನಿಂದ ಇಂದಿನವರೆಗೂ ಈ ಸಾಂಸ್ಕೃತಿಕ ಕೇಂದ್ರವು ದೇಶ-ವಿದೇಶಗಳ ಕಲೆ ಮತ್ತು ಸಂಸ್ಕೃತಿಯ ಸೊಬಗನ್ನು ಪರಸ್ಪರ ಹಂಚಿಕೊಳ್ಳುತ್ತಾ ಬೆಳೆದುಬಂದಿದೆ. ವಿಶ್ವಮಟ್ಟದಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ಕಲ್ಪಿಸುತ್ತಿದೆ. ಇತ್ತೀಚೆಗಷ್ಟೇ ಸುಮಾರು 17 ದೇಶಗಳ 30 ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಿದೆವು ಎನ್ನುತ್ತಾರೆ ಸಂಸ್ಥೆಯ ಈಗಿನ ಗೌರವ ಕಾರ್ಯದರ್ಶಿ ಅರಕಲಿ ವೆಂಕಟೇಶ್‌ ಪ್ರಸಾದ್‌.

ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸಿಎಂಗೆ ಸೋಮಣ್ಣ ಪತ್ರ

ಆಗಷ್ಟೇ ಎರಡನೇ ಮಹಾಯುದ್ಧ ಮುಗಿದಿತ್ತು. ಅದಾದ ಎರಡನೆಯ ದಿನಕ್ಕೆ ಬಿ.ಪಿ. ವಾಡಿಯಾ ಅವರು ಐಐಡಬ್ಲ್ಯುಸಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದರು. ಅವರದು ಥಿಯಾಸಫಿ ಆದರೂ ನಾವೆಲ್ಲರೂ ಒಂದೇ, ವಿಶ್ವಮಾನವರು ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. ವ್ಯಕ್ತಿಯನ್ನು ಕಲ್ಚರ್ಡ್‌ ಪರ್ಸನ್‌ ಮಾಡಬೇಕು. ಇಲ್ಲಿರುವ ಜನಕ್ಕೆ ವಿವಿಧ ದೇಶಗಳ ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂಬುದನ್ನು ಮನಗಂಡಿದ್ದವರು. ಅದಕ್ಕೋಸ್ಕರವೇ ವರ್ಲ್ಡ್ ಕಲ್ಚರ್ ಅಂತಾನೇ ಸಂಸ್ಥೆಗೆ ಹೆಸರಿಟ್ಟರು. ಜನ ಸ್ವತಂತ್ರರಾಗಿರಬೇಕು ಎಂದು ಬಯಸಿದ್ದ ವಾಡಿಯಾ ಅವರು ಬ್ರಿಟೀಷರ ವಿರುದ್ಧ ಹೋರಾಡಿದವರು. ಎರಡು ವರ್ಷ ಸೆರೆವಾಸವನ್ನೂ ಅನುಭವಿಸಿದ್ದರು. ತಮ್ಮನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡರಾದರೂ, ಹೆಚ್ಚಾಗಿ ನಾಡಿನ ಸಂಸ್ಕೃತಿಗೆ ತಮ್ಮನ್ನು ಮೀಸಲಿಟ್ಟುಕೊಂಡವರು.

ಹತ್ತಾರು ನೊಬೆಲ್‌ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್, ತಿರುವನಂತಪುರದ ರಾಜ ಮಾರ್ತಾಂಡ ವರ್ಮ, ವಿಜ್ಞಾನಿಗಳಾದ ಹೋಮಿ ಜೆ.ಬಾಬಾ, ವಿಕ್ರಮ್ ಸಾರಾಭಾಯಿ, ಸಿ. ರಾಜಗೋಪಾಲಚಾರಿ, ವಿವಿ ಗಿರಿ, ರಾಜೇಂದ್ರ ಪ್ರಸಾದ್‌, ಸರ್ ಮಿರ್ಜಾ ಇಸ್ಮಾಯಿಲ್ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಅಲ್ಲದೆ ಅಸಂಖ್ಯಾತ ಸಂಗೀತಗಾರರು, ಸಾಹಿತಿಗಳು, ನೃತ್ಯಪಟುಗಳು, ನಾಟಕಕಾರರು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಸಂಖ್ಯಾತ ಜ್ಞಾನಿಗಳು ಇಲ್ಲಿ ಉಪನ್ಯಾಸ ಮಾಲಿಕೆಗಳನ್ನು ನಡೆಸಿಕೊಟ್ಟಿದ್ದಾರೆ.

ಬಹಮಂಜಿ ಪೆಸ್ಟೊಂಜಿ ವಾಡಿಯಾ 1881ರ ಅಕ್ಟೋಬರ್ 8ರಂದು ಬಾಂಬೆಯ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಯುವಕರಿದ್ದಾಗ ಮನೆ ಬಿಟ್ಟವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಆ ಕಾಲದಲ್ಲಿ ಸಿಕ್ಕಾಪಟ್ಟೆ ಶ್ರೀಮಂತ ಕುಟುಂಬದಿಂದ ಬಂದವರಾದರೂ ಕಾರ್ಮಿಕ ವರ್ಗದ ಬಗ್ಗೆ ಸಿಕ್ಕಾಪಟ್ಟೆ ಒಲವು ಹೊಂದಿದ್ದ ಹೃದಯ ಶ್ರೀಮಂತರು ಅವರಾಗಿದ್ದರು. ತಂದೆಯವರು ನಡೆಸುತ್ತಿದ್ದ ಜವಳಿ ಉದ್ಯಮದ ಜವಾಬ್ದಾರಿ ಅವರ ಕಾಲಾನಂತರ ತಮ್ಮ ಹೆಗಲ ಮೇಲೆ ಹಾಕಿಕೊಂಡರು. ಆದರೆ ಅವರು ಉದ್ಯಮಿಯಾಗಲು ಬಯಸಲಿಲ್ಲ. ಬದಲಿಗೆ ಬ್ರಿಟಿಷ್ ಸಮಾಜವಾದಿ ಅನಿಬೆಸೆಂಟ್ ಸೇರಿದಂತೆ ಸುಪ್ರಸಿದ್ಧ ಬುದ್ಧಿಜೀವಿಗಳ ಒಡನಾಟ ಸಂಪಾದಿಸಿದರು. ನೆಹರೂ, ಮಾಹಾತ್ಮ ಗಾಂಧಿ ಅವರ ವೈಯಕ್ತಿಕ ಪರಿಚಯವಿತ್ತು.

ಅದಾಗಲೇ ಸೀನಿಯರ್‌ ಸಿಟಿಜನ್‌ ಆಗಿದ್ದ 65 ವರ್ಷ ವಯಸ್ಸಿನ ಬಿ.ಪಿ. ವಾಡಿಯಾ ಅವರು ತಮ್ಮ ಮನಸನ್ನು ವಿಶ್ರಾಂತ ಜೀವನಕ್ಕೆ ಒಗ್ಗಿಸಲಿಲ್ಲ. ಬದಲಿಗೆ ಮಹೋನ್ನತ ಆಲೋಚನೆಗಳೊಂದಿಗೆ ದೇಶ ಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟರು. ಸ್ವತಃ ಹತ್ತಾರು ಪುಸ್ತಕಗಳನ್ನು ಬರೆದಿದ್ದ ವಾಡಿಯಾ ಅವರು ಸಂಸ್ಥೆಯ ಆವರಣದಲ್ಲಿ ಬೃಹದಾದ ಲೈಬ್ರರಿಯನ್ನು ಸ್ಥಾಪಿಸಿದರು. ತಮ್ಮ ಸ್ವಂತ ಹಣದ ಜೊತೆಗೆ ದಾನಿಗಳಿಂದ ದೇಣಿಗೆ ಪಡೆದು ವಿಶಾಲ ಸಾರ್ವಜನಿಕ ಸಭಾಂಗಣ ಮತ್ತು ಗ್ರಂಥಾಲಯದ ಕಟ್ಟಡ ನಿರ್ಮಿಸಿದ್ದರು. ಎಲ್ಲ ವಯೋಮಾನದವರಿಗಾಗಿ ದೊಡ್ಡ ಪುಸ್ತಕ ಭಂಡಾರವೇ ಇಲ್ಲಿದ್ದು, 1947ರಲ್ಲಿ ಪ್ರಾರಂಭವಾದ ಗ್ರಂಥಾಲಯವು ದಾನಿಗಳ ನೆರವಿನಿಂದ ನಡೆಯುತ್ತಿದೆ. 1951ರಲ್ಲಿ ವಾಡಿಯಾ ಭವನದ ಮೇಲ್ಭಾಗದಲ್ಲಿ ಗ್ರಂಥಾಲಯಕ್ಕೆ ವಿಶಾಲ ಭವನವನ್ನು ನಿರ್ಮಿಸಲಾಯಿತು. ಈ ಗ್ರಂಥಾಲಯವು ಈಗ ದೇಶದಲ್ಲಿಯೇ ಅತಿ ದೊಡ್ಡ ಖಾಸಗಿ ಗ್ರಂಥಾಲಯವೆಂದು ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ದೊರೆಯುತ್ತವೆ. ಮಕ್ಕಳಿಗಾಗಿಯೂ ಪ್ರತ್ಯೇಕ ಗ್ರಂಥಾಲಯವಿದ್ದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಿದ್ದು, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಂದ ವರ್ಷಕ್ಕೆ 200 ರೂಪಾಯಿ ಶುಲ್ಕ ಪಡೆಯಲಾಗುತ್ತಿದೆ. ಈ ಸಂಸ್ಥೆಯು ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಕಲಾ ಪ್ರದರ್ಶನಕ್ಕಾಗಿ ಎರಡು ಸುಸಜ್ಜಿತ ಸಭಾಂಗಣಗಳನ್ನು ಹೊಂದಿದೆ. ಸಂಸ್ಥೆಯು 1945ರಿಂದ ಈವರೆಗೆ ಆರು ಅಧ್ಯಕ್ಷರನ್ನು ಕಂಡಿದ್ದು, 3,702 ಖಾಯಂ ಸದಸ್ಯರಿದ್ದಾರೆ.

Indian Institute Of World Culture 1

ಸುಸಜ್ಜಿತ ಗ್ರಂಥಾಲಯ

ಶಾಂತಿಕೇಂದ್ರ ಸ್ಥಾಪಿಸಬೇಕೆಂದು ಬಯಸಿದ್ದ ವಾಡಿಯಾ ಅವರು, ಎರಡನೆಯ ಮಹಾಯುದ್ಧ ಮುಗಿದ ಮರು ದಿನವೇ ಅಂದರೆ 1945 ಆಗಸ್ಟ್‌ 11ರಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಅನ್ನು ಸ್ವಂತ ದುಡ್ಡಿನಿಂದ ಕಟ್ಟಿದರು. ಸರ್ಕಾರೇತರ ಸಂಸ್ಥೆಯಾಗಿ ಚಾಲ್ತಿಗೆ ಬಂದ ಸಂಸ್ಥೆಗೆ ಅನೇಕ ಹಿರಿಯ ಬುದ್ಧಿಜೀವಿಗಳು ಅವರಿಗೆ ನೆರವಾದರು. ಸಮಾಜಮುಖಿ ಸ್ವಯಂ ಸೇವಾ ಸಂಸ್ಥೆಯ ಏಳಿಗೆಗಾಗಿ ಆಯಾ ಕಾಲಘಟ್ಟದಲ್ಲಿ ಅನೇಕ ಮಹನೀಯರು ಸ್ವಯಂಪ್ರೇರಿತವಾಗಿ ದುಡಿಯುತ್ತಾ ಬಂದಿದ್ದಾರೆ. ಈ 80 ವರ್ಷಗಳಲ್ಲಿ ಎಂದಿಗೂ ವಿವಾದಕ್ಕೆ ಸಿಲುಕಿದ್ದಾಗಲಿ ಅಥವಾ ಏಳುಬೀಳುಗಳನ್ನು ಕಂಡಿದ್ದಾಗಲಿ ಘಟಿಸಿಲ್ಲ.ಮುಂದೆಯೂ ಅದಕ್ಕೆ ಅವಕಾಶವಿಲ್ಲದಂತೆ ಸಂಸ್ಥೆ ಸಮಾಜಮುಖಿಯಾಗಿ ಸಾಗುತ್ತದೆ ಎಂಬ ದೃಢ ಆಶಯ ವ್ಯಕ್ತಪಡಿಸುತ್ತಾರೆ ಅರಕಲಿ ವೆಂಕಟೇಶ್‌ ಪ್ರಸಾದ್‌.

ಒಟ್ಟಿನಲ್ಲಿ ಇದೊಂದು ಸರಳ, ಸಜ್ಜನಿಕೆಯ, ಸಾಮಾನ್ಯ ಸಂಸ್ಥೆಯಾಗಿದೆ. ಆದರೆ ಅಸಾಮಾನ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ವಾಡಿಯಾ ಆಶೋತ್ತರಗಳಿಗೆ ಸದಾ ನೀರೆರೆಯುತ್ತಾ ಬಂದಿದೆ. ಪದ್ಮ ಭೂಷಣಪ್ರಾಯರು, ಹಿರಿಯ ಐಎಎಸ್‌ ಅಧಿಕಾರಿಗಳು, ಜಸ್ಟೀಸ್‌ಗಳು, ಶಿಕ್ಷಣ ತಜ್ಞರು ಮುಂತಾದ ವರ್ಚಸ್ವೀ ವ್ಯಕ್ತಿಗಳು ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. ಇಲ್ಲಿನ ಆಡಳಿತ ಮಂಡಳಿಗೆ ಆಯ್ಕೆಯಾಗುವ ಈಗಿನ ಪೀಳಿಗೆಯವರು, ಹಿರಿಯರು ಸಲ್ಲಿಸಿರುವ ಸೇವೆಯನ್ನು ಆದರ್ಶವಾಗಿಟ್ಟುಕೊಂಡು ಸಂಸ್ಥೆಯನ್ನು ಮುನ್ನಡೆಸಬಯಸುತ್ತಾರೆ. ಸಂಸ್ಥೆಯನ್ನು ಬೆಳೆಸಬೇಕು ಎಂಬುದಕ್ಕಿಂತ, ಮೊದಲು ಸಮಾಜವನ್ನು ಬೆಳೆಸಬೇಕು ಎಂಬ ಸೇವಾಮನೋಭಾವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಂಸ್ಥೆಯದ್ದಾಗಿದೆ. ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಸೇರಿದಂತೆ ನೂರಾರು ಸಂಸ್ಥೆಗಳ ಜೊತೆ ಕೈಜೋಡಿಸಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವೂ ಇದೆ ಎಂದು ಅರಕಲಿ ವೆಂಕಟೇಶ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬೃಹದಾದ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವ ಅಲೋಚನೆ ವಾಡಿಯಾ ಅವರಿಗಿತ್ತು. ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು. ಸಮೀಪದ ಯಡಿಯೂರಿನ ಆಚೆಗೆ 28 ಎಕರೆಯಲ್ಲಿ ಯೂನಿವರ್ಸಿಟಿ ಸ್ಥಾಪನೆಗೆ ಲೆಕ್ಕಾಚಾರ ನಡೆದಿತ್ತು. ಸರ್ಕಾರ ಜಾಗವನ್ನು ಮಂಜೂರು ಮಾಡಿತ್ತಾದರೂ ಎರಡೇ ವರ್ಷದಲ್ಲಿ ಅದನ್ನು ವಾಪಸ್‌ ಪಡೆಯಿತು. ಮುಂದೆ ಅದು ಜಯನಗರ ಬಡಾವಣೆಯಾಗಿ ಮಾರ್ಪಾಡಾಯಿತು. ಅಲ್ಲಿಗೆ ವಿಶ್ವವಿದ್ಯಾಲಯ ಸ್ಥಾಪಿಸುವ ಕನಸು ಕಮರಿತ್ತು. ಸ್ಥಳೀಯ ಮದ್ರಾಸ್ ಗಿರಣಿಗಳಲ್ಲಿನ ಜವಳಿ ಕಾರ್ಮಿಕರ ದುಃಸ್ಥಿತಿಯನ್ನು ವಾಡಿಯಾ ನಿಕಟವಾಗಿ ಕಂಡಿದ್ದರು. ದೇಶದಲ್ಲಿ ಮೊದಲ ಕಾರ್ಮಿಕ ಸಂಘವನ್ನು, ಅಂದರೆ ಮದ್ರಾಸ್ ಜವಳಿ ಕಾರ್ಮಿಕರ ಸಂಘವನ್ನು ಪ್ರಾರಂಭಿಸಲು ವಾಡಿಯಾ ಕಾರಣರಾಗಿದ್ದರು. ಅಂದು ಶೋಷಿತ ಕಾರ್ಮಿಕರಿಗಾಗಿ ನಿರ್ಮಿಸಿದ ಕಟ್ಟಡವನ್ನು ಇಂದಿಗೂ “ವಾಡಿಯಾ ಹೌಸ್” ಎಂದು ಕರೆಯಲಾಗುತ್ತದೆ. 1919ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಲೀಗ್ ಆಫ್ ನೇಷನ್ಸ್ ಅಡಿಯಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಲು ಭಾರತ ಸರ್ಕಾರವು ಅವರನ್ನು ಪ್ರತಿನಿಧಿಯಾಗಿ ನೇಮಿಸಿತ್ತು.

ಸ್ವಯಂ ಸೇವಕರು, ದಾನಿಗಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಯು ಅಮೃತ ಮಹೋತ್ಸವ ಆಚರಿಸಿ, ಮುನ್ನಡೆಯುತ್ತಿದೆ. ಈ ಪಯಣದಲ್ಲಿ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ವಾಡಿಯಾ ಸಂಸ್ಥೆಯ ಯೋಜನೆಗಳಿಗೆ ಕೈಜೋಡಿಸುತ್ತಿವೆ. ಸಂಸ್ಥೆಯಲ್ಲಿ ಪ್ರತ್ಯೇಕ ಕಲಾ ವಿಭಾಗವಿದ್ದು, ದೇಶ-ವಿದೇಶದ ಪ್ರಮುಖ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನ ಕಂಡಿವೆ. ಭಾನುವಾರಗಳಂದು ಸಾಹಿತ್ಯಿಕ ಹಬ್ಬದ ವಾತಾವರಣ ಇಲ್ಲಿ ನಿರ್ಮಾಣವಾಗುತ್ತದೆ. ಏಕೆಂದರೆ ವಾಡಿಯಾ ಲೈಬ್ರರಿ ಇದುವರೆಗೂ ಸಾವಿರಾರು ಪುಸ್ತಕಗಳ ಬಿಡುಗಡೆಗೆ ಸಾಕ್ಷಿಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:00 pm, Thu, 23 October 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ