ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸಿಎಂಗೆ ಸೋಮಣ್ಣ ಪತ್ರ
ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ದೆಹಲಿಯ ಸಂಸತ್ ಭವನದ ಆವರಣದಲ್ಲಿ ಇಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಮತ್ತು ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ವಿ.ಸೋಮಣ್ಣ, ಬೈಲಹೊಂಗಲದ ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಸೇರಿದಂತೆ ಕೆಲ ಬೇಡಿಕೆ ಈಡೇರಿಗೆ ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 23: ಕೇಂದ್ರ ಸಚಿವ ವಿ.ಸೋಮಣ್ಣ (V. Somanna) ನೇತೃತ್ವದಲ್ಲಿ ನವದೆಹಲಿಯ ಸಂಸತ್ ಭವನದ ಆವರಣದ ಪ್ರೇರಣಾ ಸ್ಥಳದಲ್ಲಿ ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚೆನ್ನಮ್ಮನವರ 247ನೇ ಜಯಂತ್ಯೋತ್ಸವ ಮತ್ತು 201ನೇ ವಿಜಯೋತ್ಸವನ್ನು ಆಚರಿಸಲಾಗಿದೆ. ಇನ್ನು ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿಯನ್ನು ಅಭಿವೃದ್ಧಿ ಪಡಿಸಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿದ್ದಾರೆ.
ಸಚಿವ ವಿ.ಸೋಮಣ್ಣ ಹೇಳಿದ್ದಿಷ್ಟು
ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿರುವ ಸಚಿವ ವಿ.ಸೋಮಣ್ಣ, ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿಯನ್ನು ಅಭಿವೃದ್ಧಿ ಪಡಿಸಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೆರವು ಕೊಡಬೇಕು ಎಂದರು.
ಸಚಿವ ವಿ.ಸೋಮಣ್ಣ ಟ್ವೀಟ್
Paid floral tributes to the statue of Kittur Rani Chennamma at the Prerana Sthal in the Parliament Complex, New Delhi, marking her 247th birth anniversary and 201st vijayotsava celebrations.
The event was attended by Paramapujya Sri Sri Basava Jaya Mrutyunjaya Swamiji and… pic.twitter.com/mhjeFveBOH
— V. Somanna (@VSOMANNA_BJP) October 23, 2025
ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲುಗಳ ಸಮರ್ಪಕ ನಿರ್ವಹಣೆ ಮಾಡಬೇಕಿದೆ. ಚೆನ್ನಮ್ಮನ ಜೀವನ ಮತ್ತು ಯಶೋಗಾಥೆಯನ್ನು ಎಲ್ಲ ಭಾಷೆಯಲ್ಲಿ ಪುಸ್ತಕ ಹೊರ ತರಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.
ಸಚಿವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲೇನಿದೆ?
ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕಿತ್ತೂರು ಸಂಸ್ಥಾನದ ಸ್ವಾಭಿಮಾನ ಮತ್ತು ಕನ್ನಡ ನಾಡಿನ ಹೆಮ್ಮೆಯ ಸಂಕೇತವಾದ ಕಿತ್ತೂರು ರಾಣಿ ಚೆನ್ನಮ್ಮನವರು ನಾಡು-ನುಡಿ ಮತ್ತು ದೇಶಕ್ಕೆ ನೀಡಿದ ಕೊಡುಗೆ ತಮಗೆ ತಿಳಿದ ವಿಚಾರವಾಗಿದೆ.
ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಇಂದು ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಪರಮಪೂಜ್ಯ ಸ್ವಾಮಿಗಳು, ಜನಪ್ರತಿನಿಧಿಗಳು, ದೆಹಲಿ ಕನ್ನಡಿಗರು ಭಾಗಿಯಾಗಿ ರಾಣಿ ಚೆನ್ನಮ್ಮನವರ ವಿಜಯೋತ್ಸವದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆಂದು ಅತ್ಯಂತ ಹೆಮ್ಮೆಯಿಂದ ತಿಳಿಸಬಯಸುತ್ತೇನೆ.
ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಸಂಗ್ರಾಮಕ್ಕೆ 200 ವರ್ಷ: ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ನಿರ್ಧಾರ
ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ.
ಬೈಲಹೊಂಗಲದಲ್ಲಿರುವ ರಾಣಿ ಚೆನ್ನಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ನಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕು ಎಂದಿದ್ದಾರೆ.
ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಮೋದಿಗೆ ಸಿದ್ದರಾಮಯ್ಯ ಪತ್ರ
ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಕ್ರಮ ತೆಗದುಕೊಳ್ಳವಂತೆ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದುದರಿಂದ ರಾಣಿ ಚೆನ್ನಮ್ಮನವರ ಬಗ್ಗೆ ಗೌರವ ಮತ್ತು ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಾಜ್ಯದ ಮುಖ್ಯಮಂತ್ರಿಯಾದ ತಾವು ದಯಮಾಡಿ ಈ ವಿಷಯದ ಮೇಲೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಚಿವ ವಿ.ಸೋಮಣ್ಣ ಕೋರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



