ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ: ಗ್ರಾಹಕರ ಸಂಖ್ಯೆ ಇಳಿಕೆ ಆತಂಕ

ಮಧ್ಯಪ್ರಾಚ್ಯ ಯುದ್ಧದ ನಂತರ ಮೂರನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೋಟೆಲ್ ಉದ್ಯಮ ಈಗಾಗಲೇ ಸಂಕಷ್ಟದಲ್ಲಿದ್ದು, ಬೆಲೆ ಏರಿಕೆಯಿಂದ ಮತ್ತಷ್ಟು ತೊಂದರೆ ಉಂಟಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ: ಗ್ರಾಹಕರ ಸಂಖ್ಯೆ ಇಳಿಕೆ ಆತಂಕ
ವಾಣಿಜ್ಯ ಸಿಲಿಂಡರ್
Image Credit source: tv9 kannada

Updated on: May 01, 2026 | 3:23 PM

ಬೆಂಗಳೂರು, ಮೇ 01: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭಗೊಂಡ ಬಳಿಕ 3ನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ (Commercial LPG price hike) ಮಾಡಲಾಗಿದೆ. ಮಾರ್ಚ್‌ನಲ್ಲಿ 144 ರೂ, ಏಪ್ರಿಲ್‌ನಲ್ಲಿ 200 ರೂ ಹಾಗೂ ಇದೀಗ ಮೂರನೇ ಬಾರಿಗೆ 993 ರೂ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಎಲ್ಲೆಡೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ರಾಜ್ಯದಲ್ಲಿ ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯ ಎಫೆಕ್ಟ್ ತಟ್ಟಿದ್ದು, ಹೋಟೆಲ್ ಮಾಲೀಕರಿಂದ ವಿರೋಧ ವ್ಯಕ್ತವಾಗಿದ್ದು, ಮೊದಲಿನ ದರ ಮುಂದುವರೆಸುವಂತೆ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಗೆ ಬೆಂಗಳೂರಿನಲ್ಲಿ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿ ಬೆಲೆ ಏರಿಕೆ ಮಾಡುತ್ತಿರುವುದು ತಪ್ಪು. ಬ್ಲಾಕ್ ಮಾರ್ಕೆಟ್​ನಲ್ಲಿ ಆಗುತ್ತಿರುವ ಮಾರಾಟಕ್ಕೆ ಮೊದಲು ಬ್ರೇಕ್ ಹಾಕಬೇಕು ಎಂದು ಈಶಾ ದೋಸೆ ಪಾಯಿಂಟ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ

ಭರಣಿ ಕೆಫೆ ಹೋಟೆಲ್ ಮಾಲೀಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.​​ ಸಿಲಿಂಡರ್ ಅಭಾವ ಇನ್ನು ಕೂಡ ಸರಿಯಾಗಿಲ್ಲ. ಇದರ ಮಧ್ಯೆ ಏಕಾಏಕಿ ಈ ರೀತಿ ದರ ಏರಿಕೆ ಮಾಡಿದ್ದು ಸರಿಯಲ್ಲ. ಮತ್ತೆ ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ ಬರುತ್ತೆ ಎಂದಿದ್ದಾರೆ.

ದರ ಏರಿಕೆ ಮಾಡಿದರೆ ಜನ ಪ್ರಶ್ನಿಸುತ್ತಾರೆ: ಪ್ರಸಾದಂ ಹೋಟೆಲ್ ಮಾಲೀಕ ದೀಪು

ಇನ್ನು ಈ ಬಗ್ಗೆ ಚಿತ್ರದುರ್ಗ ಪ್ರಸಾದಂ ಹೋಟೆಲ್ ಮಾಲೀಕ ದೀಪು ಅವರು ಕಿಡಿಕಾರಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ತಿಳಿದು ಆಘಾತ ಆಗಿದೆ. ಏಕಾಏಕಿ ಶೇ.45-50ರಷ್ಟು ದರ ಏರಿಕೆ ಮಾಡಲಾಗಿದೆ. ನಾವು ಉಪಹಾರದ ದರ ಏರಿಸಿದರೆ ಜನ ಪ್ರಶ್ನಿಸುತ್ತಾರೆ. ಹೋಟೆಲ್​ಗೆ ಬರುವ ಗ್ರಾಹಕರ ಸಂಖ್ಯೆ ಕ್ಷೀಣಿಸುತ್ತದೆ. ರಾಜ್ಯಮಟ್ಟದಲ್ಲಿ ಹೋಟೆಲ್ ಮಾಲೀಕರು ಸೇರಿ ಈ ಬಗ್ಗೆ ಚರ್ಚಿಸುತ್ತೇವೆ. ಈ ಮೊದಲಿನ ದರ ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಿಷ್ಟು 

ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯಿಸಿದ್ದು, ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳಿಗೆ ಆರ್ಥಿಕ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಆಹಾರ ಬೆಲೆಗಳ ಏರಿಕೆ ಮಾಡಬೇಕಾದ ಭೀತಿ ಶುರುವಾಗಿದೆ. ಈಗಾಗಲೇ ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆ ಶುರುವಾಗಿದೆ. ಒಮ್ಮೆಲೆ ಈ ರೀತಿಯಾಗಿ ಬೆಲೆ ಏರಿಕೆ ಮಾಡಿದರೆ ಗ್ರಾಹಕರಿಗೂ ಹೊರೆಯಾಗುತ್ತದೆ. ಗ್ಯಾಸ್ ಲಭ್ಯತೆಯೇ ಸಮರ್ಪಕವಾಗಿ ಇಲ್ಲ, ಈಗ ಬೆಲೆ ಏರಿಕೆ ಮಾಡಿರುವುದು ಉದ್ಯಮಿಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us