ಹುಬ್ಬಳ್ಳಿ: ಗೋಮೂತ್ರದಿಂದ ಈದ್ಗಾ ಮೈದಾನ ಶುಚಿಗೊಳಿಸಿ ಕನಕ ಜಯಂತಿ ಆಚರಣೆ

ಹುಬ್ಬಳ್ಳಿ ಈದ್ಗಾ ಮೈದಾನವನ್ನು ಗೋಮೂತ್ರದಿಂದ ಶುಚಿಗೊಳಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಬಳಿಕ ಕನಕದಾಸ ಜಯಂತಿಯನ್ನು ಆಚರಿಸಿದ್ದಾರೆ.

ಹುಬ್ಬಳ್ಳಿ: ಗೋಮೂತ್ರದಿಂದ ಈದ್ಗಾ ಮೈದಾನ ಶುಚಿಗೊಳಿಸಿ ಕನಕ ಜಯಂತಿ ಆಚರಣೆ
ಗೋಮೂತ್ರದಿಂದ ಹುಬ್ಬಳ್ಳಿ ಈದ್ಗಾ ಮೈದಾನ ಶುಚಿಗೊಳಿಸಿ ಕನಕ ಜಯಂತಿ ಆಚರಣೆ
Follow us
TV9 Web
| Updated By: Rakesh Nayak Manchi

Updated on: Nov 11, 2022 | 2:46 PM

ಹುಬ್ಬಳ್ಳಿ: ಗೋಮೂತ್ರದಿಂದ ಈದ್ಗಾ ಮೈದಾನ (Hubbli Idgah Maidan) ಶುಚಿಗೊಳಿಸಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಕಾರ್ಯಕರ್ತರು ಕನಕದಾಸ ಜಯಂತಿ (Kanakadasa Jayanti) ಆಚರಣೆ ಮಾಡಿದರು. ನಿನ್ನೆ ಇದೇ ಮೈದಾನದಲ್ಲಿ ಎಐಎಂಐಎಂ ಕಾರ್ಯಕರ್ತರು ಟಿಪ್ಪು ಜಯಂತಿ (Tipu Jayanti) ಯನ್ನು ಆಚರಿಸಿದ್ದರು. ಇದೇ ಕಾರಣಕ್ಕೆ ಗೋಮುತ್ರ ಸಿಂಪಡಿಸುವ ಮೂಲಕ ಈದ್ಗಾ ಮೈದಾನ ಶುಚಿಗೊಳಿಸಲಾಯಿತು. ಅಶುದ್ಧವಾದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುಚಿಗೊಳಿಸುವ ಹಿಂದೂ ಧರ್ಮದ ಸಂಪ್ರದಾಯವಾಗಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದ ಹಿನ್ನಲೆ ಮೈದಾನ ಅಪವಿತ್ರವಾಗಿದೆ ಎಂದ ಪ್ರಮೋದ್ ಮುತಾಲಿಕ್, ಕಾರ್ಯಕರ್ತರೊಂದಿಗೆ ಸೇರಿಕೊಂಡು ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಿದರು. ಇದೇ ವೇಳೆ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ್ದು ದೊಡ್ಡ ತಪ್ಪು, ಟಿಪ್ಪು ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದ್ದು, ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು. ಅಲ್ಲದೆ, ಟಿಪ್ಪು ಒಬ್ಬ ಮತಾಂಧ, ಕನ್ನಡ ದ್ರೋಹಿ, ಸಾವಿರಾರು ದೇವಸ್ಥಾನ ಭಗ್ನ ಮಾಡಿದ ವ್ಯಕ್ತಿ. ಇಂತಹ ವ್ಯಕ್ತಿಯ ಜಯಂತಿ ಆಚರಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ ನಾವು ಮೈದಾನವನ್ನು ಶುದ್ಧೀಕರಣ ಮಾಡಿ ಕನಕದಾಸ ಜಯಂತಿ ಆಚರಣೆ ಮಾಡಿದ್ದೇವೆ ಎಂದರು.

ಕನಕದಾಸ ಸಮಾನತೆಯನ್ನ ಹೇಳಿದ ವಿಚಾರ ಇಂದಿಗೂ ಪ್ರಸ್ತುತ. ಇವತ್ತಿಗೂ ಜಾತಿ ಜಾತಿಗಳ ನಡುವೆ ಮತ್ತೆ ಒಡಕಿದೆ. ಎಲ್ಲರೂ ಕನಕದಾಸರ ವಿಚಾರವನ್ನು ಅನುಸರಿಸಬೇಕು, ಹೀಗಾಗಿ ಕನಕದಾಸ ಜಯಂತಿ ಆಚರಣೆ ಮಾಡಿದ್ದೇವೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ವಿಫಲವಾಗಿದೆ. ಹುಬ್ಬಳ್ಳಿಯಲ್ಲಿಯೇ ಟಿಪ್ಪು ಜಯಂತಿ ಆಚರಣೆಯಲ್ಲಿ ಒಡಕಿದೆ. ಹೀಗಾಗಿ ಅದು ವಿಫಲವಾಗಿದೆ ಎಂದರು.

ಮೈಸೂರಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಕರ್ನಾಟಕದ ಕಳಂಕ. ಅಲ್ಲಿ‌ ಮೂರ್ತಿ ಕೂರಿಸಿದರೆ ನಾವ ಒಡೆದು ಹಾಕುತ್ತೇವೆ. 100 ಅಡಿ ಮೂರ್ತಿ ಕೂರಿಸಲು ನಮ್ಮ ವಿರೋಧ ಇದೆ. ಇಂತಹ ಕೆಟ್ಟ ಕೆಲಸ ತನ್ವೀರ್ ಸೇಠ್ ಮಾಡಬಾರದು. ಟಿಪ್ಪು ಬದಲಾಗಿ ಉತ್ತಮ ಮುಸ್ಲಿಂ‌ ಹೋರಾಟಗಾರರ ಮೂರ್ತಿ ಕೂರಿಸಿ. ಟಿಪ್ಪು ಮೂರ್ತಿ ಕೂರಿಸಿದರೆ ನಾವು ಬಾಬ್ರಿ ಮಸೀದಿ ಒಡೆದು ಹಾಕಿದ ಮಾದರಿಯಲ್ಲಿ ಒಡೆದು ಹಾಕುತ್ತೇವೆ ಎಂದರು.

ನಾನು ಚುನಾವಣೆಗೆ ನಿಲ್ಲುವುದು ನಿಶ್ಚಿತ

ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ, ಈ ಬಗ್ಗೆ ಸರ್ವೆ ನಡೆಯುತ್ತಿದೆ ಎಂದ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ, ಪುತ್ತೂರ, ಉಡುಪಿ ಉತ್ತರ ಕರ್ನಾಟಕದಲ್ಲಿ‌ ಜಮಖಂಡಿ ತೇರದಾಳ, ಧಾರವಾಡದಲ್ಲಿ ಸರ್ವೆ ನಡೆಯುತ್ತಿದೆ. ಯಾವುದೇ ಪಕ್ಷದಲ್ಲಿ ಅಲ್ಲ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದರು.

ಬಿಜೆಪಿಗೆ ನಮ್ಮಂತಹ ಹಿಂದೂಗಳು ಬೇಕಿಲ್ಲ. ಧರ್ಮ ಜೋಡಿಸುವ ಕೆಲಸ ಹಿಂದೂಗಳು ಮಾಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ದೇಶ ಇಬ್ಭಾಗ ಆಗಿದೆ. ಒಂದೇ ದೇಶದಲ್ಲಿ ಎರಡು ಧರ್ಮ ಇರಲು ಆಗಲ್ಲ ಎಂದು ಜಿನ್ನಾ ಪಾಕಿಸ್ತಾನ ನಿರ್ಮಾಣ ಮಾಡಿದ್ದರು. ಪಾಕಿಸ್ತಾನ ನಿರ್ಮಾಣ ಆಗಿರುವುದು ಧರ್ಮದ ಆಧಾರದ ಮೇಲೆ. ಆದರೆ ಗಾಂಧೀಜಿ‌ ಮಾಡಿದ ಅಪರಾಧದಿಂದ ಮುಸ್ಲಿಮರು ಭಾರತದಲ್ಲಿ ಇರಬೇಕಾಯ್ತು. ಭಾರತದಲ್ಲಿದ್ದ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಕಳಿಸಿದ್ದಿದ್ದರೆ ಇವತ್ತು ಈದ್ಗಾ ವಿವಾದ ಆಗುತ್ತಿರಲಿಲ್ಲ. ನಮ್ಮ ದೇಶ ಬಹಳ ಸಂತೋಷದಿಂದ ಇರುತ್ತಿತ್ತು ಎಂದರು.

ಹಿಂದೂಗಳು ಸಿಡಿದೆದ್ದರೆ ಕಾಂಗ್ರೆಸ್​ನವರು, ಬುದ್ಧಿ ಜೀವಿಗಳು ಎಲ್ಲಿ ಹೋಗುತ್ತಾರೆ ಗೊತ್ತಾಗಲ್ಲ ಎಂದು ಕಾಂಗ್ರೆಸ್ ಬುದ್ದಿ ಜೀವಿಗಳ ವಿರುದ್ದ ಗರಂ ಆದ ಮುತಾಲಿಕ್, ಹಿಂದೂಗಳು ಬಹಳ ತಾಳ್ಮೆಯಿಂದ ಇದ್ದಾರೆ. ಕಾಂಗ್ರಸ್​​ ಮತ್ತು ಬುದ್ಧಿ ಜೀವಿಗಳು ಹಿಂದೂಗಳನ್ನ ಕೆಣಕುವ ಪ್ರಯತ್ನ ಪದೇ ಪದೇ ಮಾಡುತ್ತಿದ್ದಾರೆ. ಇವರು ಮುಸ್ಲಿಂ, ಕ್ರಿಶ್ಚಿಯನ್ನರ ಬಗ್ಗೆ ಮಾತಾಡಲ್ಲ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಲ್ಲಿ ಮೌಢ್ಯ ಇಲ್ವಾ ಎಂದು ಪ್ರಶ್ನಿಸಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ