ಚಾಮರಾಜನಗರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ. ಕೊರೊನಾ ವೇಳೆಯಲ್ಲಿ ಕಾರ್ಮಿಕರಿಗೆ ಅನುಕೂಲವಾಗಲಿ, ಅವರಿಗೆ ಉದ್ಯೋಗ ಸಿಕ್ಕಿ ಹೊಟ್ಟೆ ತುಂಬಿಸಿಕೊಳ್ಳಲಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಿದ ಕೋಟಿ ಕೋಟಿ ಹಣ ಬಡವರ ಬದಲಾಗಿ ಅಧಿಕಾರಿಗಳು ಮತ್ತು ಶ್ರೀಮಂತರ ಪಾಲಾಗಿದೆ.
ಪ್ರತಿ ಕುಟುಂಬಕ್ಕೆ 150 ದಿನಗಳ ಕಾಲ ಕೆಲಸ
ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲಿ ಏಪ್ರಿಲ್ನಿಂದ ಲಾಕ್ಡೌನ್ ಜಾರಿಯಾಗಿತ್ತು. ಹಾಗಾಗಿ ಬಡವರು, ವಲಸೆ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದರು. ಈ ವೇಳೆ ಅನುಕೂಲವಾಗಲಿ ಎಂದು ಮನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 150 ದಿನಗಳ ಕಾಲ ಕೆಲಸ ಕೊಡಲು ನಿರ್ಧರಿಸಿದ ಸರ್ಕಾರ, ದಿನಕ್ಕೆ 275 ರೂ. ಕೂಲಿ ನಿಗದಿ ಮಾಡಿತ್ತು. ಇದರಿಂದ ಗ್ರಾಮೀಣ ಭಾಗದ ಕಾರ್ಮಿಕರೂ ಖುಷಿಯಲ್ಲಿದ್ದರು.
ಬರೀ ಸುಳ್ಳು
ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಲಿ ಕಾರ್ಮಿಕರ ಭರವಸೆಯನ್ನು ಹುಸಿಯಾಗಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾ ಪಂ ವ್ಯಾಪ್ತಿಯ ಬೆಳಚವಾಡಿ ಗ್ರಾಮದ ಮೂಗಕೆರೆ ಹೊಳೆತ್ತುವಲ್ಲಿ ರೂ. 8 ಲಕ್ಷದ ಅಕ್ರಮ ನಡೆದಿದೆ. ಹಾಗೇ, ಕಾಳನಹುಂಡಿ ಗ್ರಾಮದ ಊರಮುಂದಲ ಕರೆಯ ಹೂಳು ಎತ್ತುವ ಯೋಜನೆಯಲ್ಲಿ 3 ಲಕ್ಷ ರೂ. ವೆಚ್ಚವಾಗಿದೆ ಎಂದು ವರದಿ ನೀಡಿ, ಹಣವನ್ನೂ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ.
ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಸ್ಟರ್ ರೂಲ್ಸ್ ಪ್ರಕಾರ 5.16 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆದಿದೆ ಎಂಬ ವರದಿಯನ್ನಾಧರಿಸಿಯೂ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಅಲ್ಲೆಲ್ಲ ಕಾಮಗಾರಿಗಳೇ ನಡೆದಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತಿ ಒಂಬುಡ್ಸ್ಮನ್ ವರದಿಯಲ್ಲಿ ದಾಖಲಾಗಿವೆ.
ಜನಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳು ದರ್ಬಾರ್ ಮಾಡಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಮೊದಲು ಎಂಆರ್ ಪ್ರತಿ ತಯಾರು ಮಾಡಬೇಕು. ಅದಾದ ಬಳಿಕ ಕಾರ್ಮಿಕರನ್ನು ಗುರುತಿಸಿ, ಕೆಲಸ ಕೊಡಬೇಕು. ಪ್ರತಿಯೊಬ್ಬ ಕಾರ್ಮಿಕರ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನರೇಗಾ ಎಂದರೆ ಕೂಲಿ ಕಾರ್ಮಿಕರು ಮಾಡುವ ಕೆಲಸ. ಆದರೆ ಹಲವು ಕಡೆಗಳಲ್ಲಿ ಯಂತ್ರಗಳ ಮೂಲಕ ಮಾಡಿಸಿ, ಆ ಹಣವನ್ನೂ ಗುಳುಂ ಮಾಡಿದ್ದಾರೆ. ಏನಿಲ್ಲವೆಂದರೂ 80 ಲಕ್ಷ ರೂ. ದುರುಪಯೋಗ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕಾರಿಗಳು ಒಪ್ಪುತ್ತಿಲ್ಲ
ಆದರೆ ಈ ಆರೋಪವನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಒಪ್ಪುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಕೆಲವು ಕಾಮಗಾರಿಗಳಿಗೆ ಮಾಸ್ಟರ್ ರೂಲ್ಸ್ ಮಾಡಿಲ್ಲ. ಕಾರ್ಮಿಕರಿಗೆ ಕೆಲಸ ಕೊಡುವಾಗ ಕೆಲವು ಲೋಪಗಳು ಆಗಿವೆ. ಆದರೆ ಅಕ್ರಮಗಳು ನಡೆದಿಲ್ಲ. ಈಗಾಗಲೇ ಅಕ್ರಮದ ಬಗ್ಗೆ ತನಿಖೆ, ವಿಚಾರಣೆ ನಡೆಯುತ್ತಿದೆ. ಶೀಘ್ರವಾಗಿ ಆರೋಪ ಮುಕ್ತವಾಗುತ್ತೇವೆ ಎನ್ನುತ್ತಿದ್ದಾರೆ.
Published On - 5:53 pm, Thu, 7 January 21