ನೌಕರರ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಐರಿಸ್‌ ಸ್ಕ್ಯಾನಿಂಗ್ ವ್ಯವಸ್ಥೆ

ಐರಿಸ್‌ ಸ್ಕ್ಯಾನರ್‌ ಯಂತ್ರದ ಎದುರು ನಿಂತರೆ ಸಾಕು ಕಣ್ಣಿನ ಗೆರೆ ಗುರುತಿಸುತ್ತದೆ. ಯಂತ್ರಕ್ಕೆ ಶಾರೀರಿಕ ಸಂಪರ್ಕದ ಅವಶ್ಯಕತೆ ಬೀಳುವುದಿಲ್ಲ. ಯಾವುದೇ ಸ್ಪರ್ಶ ಇಲ್ಲದೇ ಹಾಜರಾತಿ ನೀಡಬಹುದಾಗಿದೆ.

ನೌಕರರ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಐರಿಸ್‌ ಸ್ಕ್ಯಾನಿಂಗ್ ವ್ಯವಸ್ಥೆ
ಕೊರೊನಾ ಭೀತಿಗೆ ಐರಿಸ್‌ ಸ್ಕ್ಯಾನಿಂಗ್‌ ಪರಿಹಾರ
preethi shettigar

| Edited By: ganapathi bhat

Apr 05, 2021 | 8:20 PM


ಕಲಬುರಗಿ: ಪ್ರತಿನಿತ್ಯ ನಗರವನ್ನು ಸ್ವಚ್ಚಗೊಳಿಸುವ ಮಹತ್ತರವಾದ ಕೆಲಸ ಮಾಡುತ್ತಿರುವವರು ಪೌರ ಕಾರ್ಮಿಕರು. ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಕೂಡ ಕಲಬುರಗಿ ನಗರದಲ್ಲಿ ಪೌರ ಕಾರ್ಮಿಕರು ತಮ್ಮ ಕೆಲಸಕ್ಕೆ ಚಕ್ಕರ್ ಹಾಕದೇ, ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡಿದ್ದಾರೆ. ಆದರೆ ಅದೇ ನೌಕರರು ಕೆಲಸ ಮಾಡಿದರು ಕೂಡ ಹಾಜರಾತಿಯ ತೊಂದರೆ ಅನುಭವಿಸಬೇಕಿತ್ತು. ಇದರ ಜೊತೆಗೆ ಬಯೋಮೆಟ್ರಿಕ್ ಹಾಜರಾತಿಯಿಂದ ಕೊರೊನಾ ಹರಡುವ ಆತಂಕ ಕೂಡ ಹೆಚ್ಚಾಗಿತ್ತು. ಇದೀಗ ಈ ಸಮಸ್ಯೆಗೆ ಬ್ರೇಕ್ ಹಾಕಲು ಕಲಬುರಗಿ ಮಹಾನಗರ ಪಾಲಿಕೆ ಹೊಸದೊಂದು ಯೋಜನೆ ಮಾಡಿದೆ.

ನೌಕರರ ಕಾರ್ಯಕ್ಷಮತೆ ಕಾಯ್ದುಕೊಳ್ಳುವ ಸಲುವಾಗಿ ಕಲಬುರಗಿ ಮಹಾನಗರ ಪಾಲಿಕೆ ಬಯೋಮೆಟ್ರಿಕ್‌ ಜತೆಗೆ ಐರಿಸ್‌ ಸ್ಕ್ಯಾನಿಂಗ್ (ಕಣ್ಣಿನ ದೃಷ್ಟಿ ಗುರುತಿಸುವಿಕೆ) ವ್ಯವಸ್ಥೆ ಜಾರಿಗೆ ತಂದಿದೆ. ಇದು ಮೈಗಳ್ಳ ಸಿಬ್ಬಂದಿಯನ್ನು ಸರಿ ದಾರಿಗೆ ತರುವುದರೊಂದಿಗೆ ಅವರ ಸುರಕ್ಷತೆ ಮತ್ತು ಹಾಜರಾತಿಗೂ ಅಭಯ ನೀಡಲಿದೆ.

ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಬಯೋಮೆಟ್ರಿಕ್‌ (ಬೆರಳಚ್ಚು) ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಕೊರೊನಾ ಕಾರಣ ಕಳೆದ ಒಂದು ವರ್ಷದಿಂದ ಬಯೋಮೆಟ್ರಿಕ್‌ ಸ್ಥಗಿತಗೊಳಿಸಲಾಗಿದೆ. ಮಷಿನ್‌ ಮೇಲೆ ಎಲ್ಲರೂ ಬೆರಳಿಟ್ಟು ಬಳಕೆ ಮಾಡುವುದರಿಂದ ಸೋಂಕು ಹರಡುವ ಭೀತಿಯಿಂದ ಇದನ್ನು ರದ್ದು ಮಾಡಲಾಗಿದೆ. ಈಗ ಮತ್ತೆ ಬಯೋಮೆಟ್ರಿಕ್‌ ಹಾಜರಾತಿ ಪುನಾರಂಭಿಸಲಾಗುತ್ತಿದೆ. ಇದರ ಜತೆಗೆ ನೂತನವಾದ ಐರಿಸ್‌ ಸ್ಕ್ಯಾನರ್‌ಗಳನ್ನು ಅಳವಡಿಸಿದೆ.

ಯಾಕೆ ಈ ಐರಿಸ್​ ಹಾಜರಾತಿ?
ಮಹಾ ನಗರವನ್ನು ಸುಂದರ ಮತ್ತು ಸ್ವಚ್ಛವಾಗಿ ನೋಡಿಕೊಳ್ಳುವುದು ಪಾಲಿಕೆ ಹೊಣೆ. ಈ ಹೊಣೆಯನ್ನು ಬಹುಪಾಲು ನಿಭಾಯಿಸುವುದೇ ಪೌರ ಕಾರ್ಮಿಕರು. ನಿತ್ಯ ನಗರ ಸ್ವತ್ಛತೆಗೆ ಪೌರ ಕಾರ್ಮಿಕರು ತಮ್ಮ ಕೈಗಳನ್ನು ಸವೆಸುತ್ತಾರೆ. ಹೀಗೆ ದಿನ ಸವೆಯುವ ಕೈಗಳಲ್ಲಿ ಗೆರೆಗಳು ಮಾಸುತ್ತಾ ಹೋಗುತ್ತದೆ. ಇದರಿಂದ ಬಯೋಮೆಟ್ರಿಕ್‌ ಹಾಜರಾತಿ ನೀಡಲು ಪಡಿಪಾಟಲು ಪಡಬೇಕಾಗುತ್ತದೆ.

Iris Scanning System

ಐರಿಸ್‌ ಸ್ಕ್ಯಾನಿಂಗ್‌ ವ್ಯವಸ್ಥೆಯು ಪೌರ ಕಾರ್ಮಿಕರಿಗೆ ಹಾಜರಾತಿ ಅಭಯ ನೀಡಲಿದೆ

ಕೆಲವೊಮ್ಮೆ ಯಂತ್ರದಲ್ಲಿ ಬೆರಳಚ್ಚು ಬೀಳದೆ ಕೆಲಸ ಮಾಡಿದರೂ ಗೈರು ಎಂದು ದಾಖಲಾಗಿದ್ದು ಇದೆ. ಇಂತಹ ತಾಪತ್ರಯವನ್ನೂ ಐರಿಸ್‌ ಸ್ಕ್ಯಾನಿಂಗ್‌ ವ್ಯವಸ್ಥೆ ತಪ್ಪಿಸಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಅನಗತ್ಯ, ಅನಧಿಕೃತ ರಜೆಗಳನ್ನು ತಪ್ಪಿಸಲು ಆಧುನಿಕ ಹಾಜರಾತಿ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಬಯೋಮೆಟ್ರಿಕ್‌ ಜತೆಗೆ ಐರಿಸ್‌ ಸ್ಕ್ಯಾನಿಂಗ್‌ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದೆ.

ನಿತ್ಯದ ಹಾಜರಾತಿಗೆ ಬೆರಳಚ್ಚು ನೀಡಲು ಸಾಧ್ಯವಾಗದ ನೌಕರರು ಮತ್ತು ಸಿಬ್ಬಂದಿ ಐರಿಸ್‌ ಬಳಸಬಹುದು. ಮುಖ್ಯವಾಗಿ ಈ ಐರಿಸ್‌ ಸ್ಕ್ಯಾನಿಂಗ್‌ ವ್ಯವಸ್ಥೆಯು ಪೌರ ಕಾರ್ಮಿಕರಿಗೆ ಹಾಜರಾತಿ ಅಭಯ ನೀಡಲಿದೆ.

ಕೊರೊನಾ ಭೀತಿಗೆ ಐರಿಸ್​ ಪರಿಹಾರ
ಬಯೋಮೆಟ್ರಿಕ್‌ ಹಾಜರಾತಿ ಕೊಡುವಾಗ ಯಂತ್ರದ ಮೇಲೆ ಬೆರಳಿನ ಸ್ಪರ್ಶ ಆಗಿಯೇ ಆಗುತ್ತದೆ. ಸ್ಪರ್ಶ ಮಾಡದೆ ಹಾಜರಿಯೇ ಬೀಳುವುದಿಲ್ಲ. ಈ ವ್ಯವಸ್ಥೆಯಿಂದ ಕೊರೊನಾ ಹರಡುವ ಸಂಭವ ಹೆಚ್ಚು. ಇದೇ ಕಾರಣಕ್ಕಾಗಿ ಬಯೋಮೆಟ್ರಿಕ್‌ ಹಾಜರಾತಿ ಬಂದ್‌ ಮಾಡಲಾಗಿತ್ತು. ಆದರೆ, ಐರಿಸ್‌ ವ್ಯವಸ್ಥೆ ಇಂತಹ ಯಾವ ಭೀತಿಗೆ ಆಸ್ಪದ ಕೊಡುವುದಿಲ್ಲ. ಐರಿಸ್‌ ಸ್ಕ್ಯಾನರ್‌ ಯಂತ್ರದ ಎದುರು ನಿಂತರೆ ಸಾಕು ಕಣ್ಣಿನ ಗೆರೆ ಗುರುತಿಸುತ್ತದೆ. ಯಂತ್ರಕ್ಕೆ ಶಾರೀರಿಕ ಸಂಪರ್ಕದ ಅವಶ್ಯಕತೆ ಬೀಳುವುದಿಲ್ಲ. ಯಾವುದೇ ಸ್ಪರ್ಶ ಇಲ್ಲದೇ ಹಾಜರಾತಿ ನೀಡಬಹುದಾಗಿದೆ. ದೂರದಿಂದಲೇ ಕಣ್ಣಿನ ಸ್ಕ್ಯಾನ್‌ ಮಾಡುವ ಮೂಲಕವೇ ನೌಕರರ ಹಾಜರಿ ದಾಖಲಾಗುತ್ತದೆ. ಇದು ಹಾಜರಿ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸುತ್ತದೆ.

ಪೌರ ಕಾರ್ಮಿಕರ ಹಿತದೃಷ್ಟಿಯಿಂದಲೇ ಐರಿಸ್‌ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದೆ. ಪೌರ ಕಾರ್ಮಿಕರ ಹಾಜರಾತಿಯಿಂದ ವಂಚಿತರಾಗಬಾರದು ಜೊತೆಗೆ ಮೈಗಳ್ಳ ಕಾರ್ಮಿಕರು ಕೂಡ ಕೆಲಸ ಮಾಡದೇ ಪಾಲಿಕೆಗೆ ಮೋಸ ಮಾಡಬಾರದು ಎನ್ನುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಸ್ನೇಹಾಲ್ ಲೋಖಂಡೆ ಹೇಳಿದ್ದಾರೆ.

ಬಯೋಮೆಟ್ರಿಕ್ ಸಂದರ್ಭದಲ್ಲಿ ಬೆರಳಚ್ಚು ನೀಡಬೇಕಿತ್ತು. ಆದರೆ ಕೈಗಳಲ್ಲಿನ ಗೆರೆಗಳನ್ನು ಸರಿಯಾಗಿ ಗುರುತಿಸದೇ ಇದ್ದಿದ್ದರಿಂದ ಕೆಲಸ ಮಾಡಿದರು, ಹಾಜರಾತಿ ಬೀಳುತ್ತಿರಲಿಲ್ಲ. ಜೊತೆಗೆ ಕೊರೊನಾದ ಭಯ ಕೂಡ ಹೆಚ್ಚಾಗಿತ್ತು. ಇದೀಗ ಐರಿಶ್ ಹಾಜರಾತಿಯಿಂದಾಗಿ ಕೊರೊನಾದ ಭಯವಿಲ್ಲ. ಜೊತೆಗೆ ಹಾಜರಾತಿ ಸಮಸ್ಯೆಗೆ ಕೂಡ ಪರಿಹಾರ ಸಿಕ್ಕಿದೆ ಎಂದು ಪೌರ ಕಾರ್ಮಿಕ ಮಹಿಳೆ ಬಸಮ್ಮ ತಿಳಿಸಿದ್ದಾರೆ.

(ವರದಿ: ಸಂಜಯ್ ಚಿಕ್ಕಮಠ- 9980510149)

ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಸ್ಮಾರ್ಟ್ ಯೋಜನೆ; ನಗರದಲ್ಲಿ ಹೆಚ್​ಡಿಪಿಇ ಮೂತ್ರಿ ಅಳವಡಿಸಲು ನಿರ್ಧಾರ

(Iris Scanning System has been Implemented in Kalaburagi City Corporation to maintain performance of employees)


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada