‘ಕಾಂತಾರ’ ಚಿತ್ರದ ಮತ್ತೋರ್ವ ಕಲಾವಿದ ನಿಧನ; ಹೃದಯಘಾತದಿಂದ ಕೊನೆಯುಸಿರು
Kantara: Chapter 1 Junior Artist Death: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರದ ಜೂನಿಯರ್ ಆರ್ಟಿಸ್ಟ್ ಒಬ್ಬರು ಮೃತಪಟ್ಟಿದ್ದಾರೆ. ಮೃತನನ್ನು ವಿಜು ವಿಕೆ ಎಂದು ಗುರುತಿಸಲಾಗಿದೆ. ಇದಕ್ಕೂ ಮೊದಲು ಇಬ್ಬರು ಕಲಾವಿದರು ನಿಧನರಾಗಿದ್ದರು. ಈ ದುರ್ಘಟನೆ ಚಿತ್ರರಂಗಕ್ಕೆ ಆಘಾತ ತಂದಿದೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗ ಸಾಕಷ್ಟು ಸುದ್ದಿಯಲ್ಲಿ ಇದೆ. ಇದಕ್ಕೆ ಕಾರಣ ಚಿತ್ರದಲ್ಲಿ ನಟಿಸಿದ ಒಬ್ಬೊಬ್ಬರೇ ಕಲಾವಿದರು ಮೃತಪಡುತ್ತಿರುವುದು. ಈ ಮೊದಲ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ನಿಧನ ಹೊಂದಿದ್ದರು. ಇದಾದ ಬಳಿಕ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಮೃತಪಟ್ಟರು. ಈಗ ಸಿನಿಮಾದ ಮತ್ತೋರ್ವ ಜೂನಿಯರ್ ಕಲಾವಿದ ಕೊನೆಯುಸಿರು ಎಳೆದಿದ್ದಾರೆ. ಈ ಮೂಲಕ ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಮೃತಪಟ್ಟಂತೆ ಆಗಿದೆ.
ವಿಜು ವಿಕೆ ಎಂಬುವವರು ಮೃತ ದುರ್ಧೈವಿ. ಇವರು ಕೇರಳದ ತ್ರಿಶೂರ್ನವರು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟ್ಗಾಗಿ ಅವರು ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ. ಕೇರಳದಿಂದ ಕುಟುಂಬಸ್ಥರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.

ವಿಜು ವಿಕೆ
ಕಪಿಲ್ ನಿಧನ
ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವವರು ನಿಧನ ಹೊಂದಿದ್ದರು. ಶೂಟಿಂಗ್ ಮುಗಿಸಿದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಅವರು ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಮೇ 6ರಂದು ಈ ಘಟನೆ ನಡೆದಿತ್ತು.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಹಲವು ಅಡ್ಡಿ-ಆತಂಕ; ಆದರೂ ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
ರಾಕೇಶ್ ಪೂಜಾರಿ
ಆ ಬಳಿಕ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಕೂಡ ಮೃತಪಟ್ಟರು. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಇವರು ಪ್ರಮುಖ ಪಾತ್ರ ಮಾಡುತ್ತಿದ್ದರು. ಅವರು ಗೆಳೆಯನ ಮದುವೆಯಲ್ಲಿ ಭಾಗಿಯಾದಾಗ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ದರು. ಆ ಬಳಿಕ ಕುಸಿದು ಬಿದ್ದರು. ಅವರು ಕೂಡ ಹೃದಯಘಾತದಿಂದ ಮೃತಪಟ್ಟಿದ್ದರು.
ತಂಡದ ಬಗ್ಗೆ
‘ಕಾಂತಾರ: ಚಾಪ್ಟರ್ 1’ ಇದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿತು. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ನಟಿಸುತ್ತಿದ್ದಾರೆ. ಚಿತ್ರದ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಘಟನೆ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Thu, 12 June 25




