ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್ ಧೂಳಿಪಟ, ಇತಿಹಾಸ ನಿರ್ಮಿಸಿದ ಮೈತ್ರಿ ಅಭ್ಯರ್ಥಿ
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಹೀನಾಯ ಸೋಲನುಭವಿಸಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಮೈಸೂರು ಲೋಕಸಭೆ ಬೆನ್ನಲ್ಲೇ ಇದೀಗ ದಕ್ಷಿಣ ಶಿಕ್ಷಕರ ಚುನಾವಣೆಯಲ್ಲೂ ಸಿದ್ದರಾಮಯ್ಯಗೆ ತೀವ್ರ ಮುಖಭಂಗವಾಗಿದೆ.
ಮೈಸೂರು, (ಜೂನ್ 06): ತೀವ್ರ ಕುತೂಹಲ ಮೂಡಿಸಿದ್ದ ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ (South Teachers Constituency Election Result) ಪ್ರಕಟವಾಗಿದ್ದು, ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ಧ ವಿವೇಕಾನಂದ ಅವರು ಬರೋಬ್ಬರಿ 4622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆದ್ದ ವಿವೇಕಾನಂದ ಹೊಸ ದಾಖಲೆ ಬರೆದಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಒಟ್ಟು 10823 ಮತಗಳು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತಗಳು ಸಿಕ್ಕಿವೆ. ಇನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು 84 ಮತಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಬರೋಬ್ಬರಿ 4622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಯಾರ್ಯಾರು? ಇಲ್ಲಿದೆ ಪಟ್ಟಿ
ಈ ಮೂಲಕ ಮರಿತಿಬ್ಬೇಗೌಡ ಅವರ ಗೆಲುವಿನ ನಾಗಾಲೋಟಕ್ಕೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಬ್ರೇಕ್ ಹಾಕಿದ್ದಾರೆ. ಕಳೆದ ಬಾರಿ ಮರಿತಿಬ್ಬೇಗೌಡ ಅವರು ಜೆಡಿಎಸ್‌ನಿಂದ ಗೆದ್ದು ನಂತರದ ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದಾರೆ.
ಇನ್ನು 1049 ಶಿಕ್ಷಕರ ಮತಗಳು ಕುಲಗೆಟ್ಟಿರುವುದು ವಿಪರ್ಯಾಸ. ಯಾಕಂದ್ರೆ, ಶಿಕ್ಷಕರು ವಿದ್ಯಾವಂತರು. ಮಕ್ಕಳಿಗೆ ಪಾಠ ಹೇಳಿಕೊಡುವಂತವರು. ಅವರಿಗೇ ಚುನಾವಣೆಯಲ್ಲಿ ಮತದಾನ ಮಾಡಲು ಬಂದಿಲ್ಲ. ಹೀಗಾಗಿ ಶಿಕ್ಷಕರು ಚಲಾಯಿಸಿದ್ದ 1049 ಮತಗಳು ತಿರಸ್ಕೃತಗೊಂಡಿವೆ.
ಸಿದ್ದರಾಮಯ್ಯಗೆ ಮುಖಭಂಗ
ಈ ಫಲಿತಾಂಶದದೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ 2 ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ, ಬಿಜೆಪಿ ಯದವೀರ್ ಒಡೆಯರ್ ವಿರುದ್ಧ ಸೋಲುಕಂಡಿದ್ದರು. ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಮರಿತಿಬ್ಬೇಗೌಡ ಪರಾಭವಗೊಂಡಿದ್ದಾರೆ. ಇದರೊಂದಿಗೆ ಸಿಎಂ ತವರಿನಲ್ಲಿ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಈ ಮೂಲಕ ಸಿದ್ದರಾಮಯ್ಯಗೆ ತೀವ್ರ ಮುಖಭಂಗವಾದಂತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ