ದೇವೇಗೌಡೋತ್ಸವ: ಜೆಡಿಎಸ್ನಿಂದ ಶೀಘ್ರದಲ್ಲೇ ಬೃಹತ್ ಸಮಾವೇಶಕ್ಕೆ ನಿರ್ಧಾರ
ಹಳೆ ಮೈಸೂರು ಭಾಗದಲ್ಲಿ ಮತ್ತೆ ಪ್ರಾಬಲ್ಯ ಗಟ್ಟಿಗೊಳಿಸುವುದು, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ಇರುವ ಪಕ್ಷಾತೀತ ವರ್ಚಸ್ಸನ್ನು ಬಳಸಿಕೊಂಡು ಪಕ್ಷದ ನೆಲೆಯನ್ನು ಗಟ್ಟಿಗೊಳಿಸುವ ತಂತ್ರಗಾರಿಕೆಯ ಭಾಗವಾಗಿ ಶೀಘ್ರದಲ್ಲೇ ಬೃಹತ್ ಸಮಾವೇಶ ಆಯೋಜಿಸಲು ಜೆಡಿಎಸ್ ನಿರ್ಧರಿಸಿದೆ. ದೇವೇಗೌಡರ ಜನ್ಮದಿನದ ಸಂದರ್ಭದಲ್ಲಿ ‘ದೇವೇಗೌಡೋತ್ಸವ’ ಹೆಸರಿನಲ್ಲಿ ಸಮಾವೇಶ ನಡೆಯಲಿದೆ.

ಬೆಂಗಳೂರು, ಫೆಬ್ರವರಿ 17: ಜೆಡಿಎಸ್ ಪಕ್ಷವು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಜನ್ಮದಿನದ ಸಂದರ್ಭದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಿದೆ. ಈ ಸಮಾವೇಶವನ್ನು ಹಾಸನ ಅಥವಾ ಮೈಸೂರಿನಲ್ಲಿ ನಡೆಸುವ ಯೋಜನೆ ಇದೆ. ಲಕ್ಷಾಂತರ ಜನರನ್ನು ಸೇರಿಸಿ ‘ದೇವೇಗೌಡೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ. ಇದು ಹಾಸನದಲ್ಲಿ ಕಾಂಗ್ರೆಸ್ ಪಕ್ಷವು ನಡೆಸಿದ ಸಮಾವೇಶಕ್ಕಿಂತ ದೊಡ್ಡದಾಗಿರಲಿದೆ.
ಸಮಾವೇಶಕ್ಕೆ ಸಮುದಾಯದ ಪ್ರಮುಖ ನಾಯಕರು ಮತ್ತು ದೇವೇಗೌಡರ ಅಭಿಮಾನಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಲು ಯೋಜಿಸಲಾಗಿದೆ. ಇದರಿಂದ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶ ಪಕ್ಷದ್ದಾಗಿದೆ.
ಹಳೆ ಮೈಸೂರು ಭಾಗದಲ್ಲಿ ನೆಲೆ ಗಟ್ಟಿಗೊಳಿಸಲು ತಂತ್ರ
ಚನ್ನಪಟ್ಟಣ ಉಪಚುನಾವಣೆಯ ನಂತರ ಹಳೆ ಮೈಸೂರು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಜೆಡಿಎಸ್ ಹಿಡಿತ ತಪ್ಪಿದೆ. ‘ದೇವೇಗೌಡೋತ್ಸವ’ ಬೃಹತ್ ಸಮಾವೇಶದ ಮೂಲಕ ಶಕ್ತಿಯನ್ನು ಪ್ರದರ್ಶಿಸುವುದರ ಜತೆಗೆ, ಹಳೆ ಮೈಸೂರು ಪ್ರದೇಶದಲ್ಲಿ ನೆಲೆಯಲ್ಲಿ ಗಟ್ಟಿಗೊಳಿಸುವುದು ಪಕ್ಷದ ನಾಯಕರ ಉದ್ದೇಶವಾಗಿದೆ.
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಜನ್ಮದಿನದಂದು ಬೃಹತ್ ಸಮಾವೇಶ ಆಯೋಜಿಸಲು ಜೆಡಿಎಸ್ ಸಿದ್ಧತೆ ನಡೆಸಿತ್ತು. ಆ ಮೂಲಕ, ಕಾಂಗ್ರೆಸ್ ಪಕ್ಷವು ಹಾಸನದಲ್ಲಿ ನಡೆಸಿದ ಸಮಾವೇಶಕ್ಕೆ ಟಕ್ಕರ್ ಕೊಡುವುದು ಜನತಾದಳದ ಉದ್ದೇಶವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಮಾವೇಶ ರದ್ದಾಗಿತ್ತು. ದೇವೇಗೌಡರ ಜನ್ಮದಿನದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಸಮಾವೇಶ ಆಯೋಜಿಸುವುದು ಜೆಡಿಎಸ್ ಪ್ಲಾನ್ ಆಗಿದೆ.
ಮತ್ತೊಂದೆಡೆ, ಫೆಬ್ರವರಿ 16 ರಂದು ಮಾತನಾಡಿದ್ದ ದೇವೇಗೌಡರು, ಇನ್ನೂ ನಾಲ್ಕೈದು ವರ್ಷ ಬದುಕಿರುತ್ತೇನೆ. ಕೊನೆ ಉಸಿರು ಇರುವವರೆಗೂ ರಾಜ್ಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಪಕ್ಷಭೇದ ಮೀರಿ ನಾವೆಲ್ಲರೂ ಹೋರಾಟ ಮಾಡಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ದೇವೇಗೌಡರು ಕರೆ ನೀಡಿದ್ದರು.
ಇದನ್ನೂ ಓದಿ: ನಾಲ್ಕೈದು ವರ್ಷ ಬದುಕಿರುತ್ತೇನೆ: ಅಲ್ಲಿಯವರೆಗೂ ಕರ್ನಾಟಕದ ನೀರಾವರಿಗಾಗಿ ಹೋರಾಟ ಎಂದ ದೇವೇಗೌಡ
ಇದೀಗ ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ದೇವೇಗೌಡೋತ್ಸವ ಹಮ್ಮಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಆ ಮೂಲಕ ನೆಲೆಗಟ್ಟಿ ಮಾಡಿಕೊಳ್ಳುವುದು ಪಕ್ಷದ ತಂತ್ರಗಾರಿಕೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Mon, 17 February 25