ಹಾಸನ, ಆಗಸ್ಟ್ 21: ಮೈತ್ರಿ ಧರ್ಮ ಪಾಲಿಸುವುದು 2 ಪಕ್ಷಗಳ ಜವಾಬ್ದಾರಿ ಆಗಿರುತ್ತದೆ. ನಮ್ಮ ಪಕ್ಷದ ಸೂಚನೆಯಂತೆ ನಾವು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಆದರೆ ಬಿಜೆಪಿ ಉಪಾಧ್ಯಕ್ಷರಾಗಿ ಯಾರಿಗೆ ವಿಪ್ ನೀಡಲಾಗಿತ್ತೊ ಅವರಿಗೆ ಮತ ನೀಡಿಲ್ಲ. ಹೀಗಾಗಿ ಮೈತ್ರಿ ಧರ್ಮ ಪಾಲಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಮಿತ್ರ ಪಕ್ಷದ ನಡೆಗೆ ಮಾಜಿ ಶಾಸಕ ಪ್ರೀತಂಗೌಡ (Preetham Gowda) ಕೆಂಡಾಮಂಡಲರಾಗಿದ್ದಾರೆ.
ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಬಳಿಕ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಧರ್ಮಕ್ಕೆ ಚ್ಯುತಿ ಬಾರದಂತೆ ನಡೆಯಬೇಕೆಂದು ಸೂಚನೆ ಇತ್ತು. ಹಾಗಾಗಿ ನಮ್ಮ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ನಡೆದುಕೊಂಡಿದ್ದೆವು ಎಂದರು.
ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಪಕ್ಷವನ್ನು ನಂಬಿದ್ದ ಬಿಜೆಪಿಗೆ ಮುಖಭಂಗ, ಪ್ರೀತಂಗೌಡಗೆ ಚುರುಕು ಮುಟ್ಟಿಸಿದ ಜೆಡಿಎಸ್
ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಾ.ಅಶ್ವತ್ಥ್ ನಾರಾಯಣ, ನಮ್ಮ ಶಾಸಕ ಸಿಮೆಂಟ್ ಮಂಜು ಚರ್ಚೆ ನಡೆಸಿ ನಿರ್ಧರಿಸಿದ್ದರು. 10 ತಿಂಗಳ ಅವಧಿಯಂತೆ ಅಧಿಕಾರ ಹಂಚಿಕೆಗೆ ತೀರ್ಮಾನಿಸಿದ್ದರು. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲು ನಮ್ಮ ಸ್ಥಳೀಯ ನಾಯಕರು ತೀರ್ಮಾನ ಮಾಡಿದಾರೆ ಎಂದು ತಿಳಿಸಿದ್ದಾರೆ.
ನಮ್ಮಿಂದ ವೀರಶೈವ ಮಹಿಳೆ ಉಪಾಧ್ಯಕ್ಷ ಮಾಡಲು ತೀರ್ಮಾನ ಮಾಡಲಾಗಿತ್ತು. ಮತ ಮಾತ್ರ ಎಲ್ಲರದ್ದು ಬೇಕು. ಅಧಿಕಾರ ಒಂದೇ ಸಮುದಾಯದಕ್ಕೆ ಸಿಗಬಾರದು ಎನ್ನೊ ಕಾರಣಕ್ಕೆ ತೀರ್ಮಾನ ಮಾಡಲಾಗಿತ್ತು. ಆದರೆ ಇವತ್ತು ಮೈತ್ರಿ ಪಕ್ಷ ಮಾಡಿರುವ ತೀರ್ಮಾನ ನಮಗೆ ಅಚ್ಚರಿ ಮೂಡಿಸಿದೆ. ಈ ಬಾರಿಯೂ ಮನಸ್ಸು ಮಾಡಿದ್ದರೆ ಅಧ್ಯಕ್ಷ-ಉಪಾಧ್ಯಕ್ಷ ಆಗಬಹುದಾಗಿತ್ತು. ಆದರೆ ಯಾವುದೇ ಬೆಳವಣಿಗೆಗೆ ಅವಕಾಶ ನೀಡದೆ ಪಕ್ಷದ ಸೂಚನೆಯಂತೆ ಚೌಕಟ್ಟು ದಾಟಿಲ್ಲ. ಇದನ್ನ ರಾಜ್ಯ, ರಾಷ್ಟ್ರೀಯ ನಾಯಕರು ಗಮನಿಸುತ್ತಾರೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಕಿಡಿಕಾರಿದ್ದಾರೆ.
ನನ್ನ ಮಾತಿನ ಮೇಲೆ ಗೌರವ ಇಟ್ಟು ನಮ್ಮ ಸದಸ್ಯರು ನಡೆದುಕೊಂಡರು. ಆದರೆ ಇದರಿಂದ ನಡವಳಿಕೆ ನಮಗೆ ಅಚ್ಚರಿ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ. ಜನರು ಹಾಗೂ ವೀರಶೈವ ಸಮಾಜದ ಮುಖಂಡರು ಫೋನ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೆ ಯಡಿಯೂರಪ್ಪ ಅವರಿಗೂ ಹೀಗಾಗಿತ್ತು. ಈಗ ಹಾಸನದಲ್ಲಿ ಹೀಗಾಗಿದೆ ಎಂದು ಜನ ಹೇಳ್ತಿದ್ದಾರೆ. ಇಂದು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಸದಸ್ಯೆಗೆ ಪಾಪ ಏನು ಮಾಹಿತಿ ಇಲ್ಲ. ಅವರಿಗಿಂತ ಪ್ರೀತಂಗೌಡ ಚೆನ್ನಾಗಿ ಮ್ಯಾನ್ಯುಪ್ಲೇಟ್ ಮಾಡುತ್ತಾನೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಮೈತ್ರಿ ಎಂದು ಹೇಳಿ ಕೇವಲ ಅನುಕೂಲ ಸಿಂಧು ಆಗಬಾರದು. ಕೊಂಡುಕೊಳ್ಳುವಿಕೆ ಇರಬೇಕು ಆದರೆ ಇದನ್ನ ಹಿರಿಯರು ಗಮನಿಸುತ್ತಾರೆ ಎಂದಿದ್ದಾರೆ.
ಪ್ರೀತಂಗೌಡಗೆ ಹಿನ್ನಡೆ ಆದರೆ ಮುಂದೆ ಮುನ್ನಡೆ ಆಗೋದು. ಬ್ಯಾಕ್ ಸ್ಟೆಪ್ ಇಟ್ಟರೆ ಸಿಕ್ಸ್ ಹೊಡೆಯುವುದಕ್ಕೆ ಆಗೋದು. ನಾನು ಮೈತ್ರಿ ವಿರುದ್ಧ ಮಾತನಾಡುತ್ತಿಲ್ಲ. ಜೆಡಿಎಸ್ ಪಕ್ಷದ ಧೊರಣೆಯ ವಿರುದ್ಧ ಮಾತನಾಡಿದ್ದೇನೆ. ನಾನು ಜೆಡಿಎಸ್ ಸದಸ್ಯರ ಓಟು ಹಾಕಿಸಿಕೊಳ್ಳಬಹುದಾಗಿತ್ತು. ನಾನೇನು ಅಸಹಾಯಕನಲ್ಲ, ನನಗೂ ಶಕ್ತಿ ಇತ್ತು. ಇದು ಸಾರ್ವಜನಿಕರಲ್ಲಿ ಬೇಸರ ತರುವ ಸಂಗತಿ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ: ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಪ್ರೀತಂಗೌಡ ಟಾಂಗ್
ಮೈತ್ರಿ ಎಂದರೆ ಪರಸ್ಪರ ಒಡಂಬಡಿಕೆ, ಒಂದು ಕಡೆಯ ತೀರ್ಮಾನ ಅಲ್ಲ. ಮೈತ್ರಿ ಧರ್ಮವನ್ನು ಬಿಜೆಪಿ ವರಿಷ್ಠರ ಸೂಚನೆ ಪಾಲಿಸಿದೆ. ಸಾಂದರ್ಭಿಕ ಶಾಸಕರಿಗೆ ಸಾಂದರ್ಭಿಕವಾಗಿ ಏನು ನಡೆಯುತ್ತಿದೆ ಅಂತ ಗೊತ್ತಿರಲ್ಲ. ಅವರ ಯೋಚನೆಗೆ ಮೀರಿದ ವಿಚಾರ ಇದು. ಶಾಸಕರನ್ನು ಕೇಳಿ ಮೈತ್ರಿ ಮಾಡಿಕೊಳ್ಳಲ್ಲ. ಇದು ಶಾಸಕರ ಮಾಡುವ ತೀರ್ಮಾನ ಅಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.