ಯಶವಂತಪುರ ಬಿಜೆಪಿ ಅಭ್ಯರ್ಥಿ ಘೋಷಿಸಿದ ಬಿಎಸ್ ವೈ, ಸಿಡಿದೆದ್ದ ಮಿತ್ರ ಪಕ್ಷ ಜೆಡಿಎಸ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊನ್ನೆ ಬೆಂಗಳೂರಿಗೆ ಬಂದು ಹೋದ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೂ ಘೋಷಿಸಿದ್ದು, ಇದು ಮಿತ್ರ ಪಕ್ಷ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದರೊಂದಿಗೆ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಬೆಂಗಳೂರು, (ಜುಲೈ 28): ಹಾಲಿ ಯಶವಂತಪುರ (Yasvanthpur) ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಇನ್ನೂ 23 ತಿಂಗಳು ಸಮಯ ಇದೆ. ಆದ್ರೆ, ಅದಕ್ಕೂ ಮುಂಚೆಯೂ ಮಾಜಿ ಸಿಎಂ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್ ಯಡೊಯೂರಪ್ಪ (BS Yediyurappa) ಅವರು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರೈತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಅವರನ್ನು ಘೋಷಣೆ ಮಾಡಿದ್ದಾರೆ. ಇದು ಮಿತ್ರ ಪಕ್ಷ ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದ್ದು, ಮೈತ್ರಿಯಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಸಿದೆ.
ರುದ್ರೇಶ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಅವರ ನಿವಾಸಕ್ಕೆ ಶುಭ ಕೋರಲು ಯಡಿಯೂರಪ್ಪ ತೆರಳಿದ್ದರು. ಆ ವೇಳೆ, ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ.ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ರುದ್ರೇಶ್ ಅವರಿಗೆ ಜನರ ಆಶೀರ್ವಾದವೂ ಸಿಗುವಂತೆ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಅವರ ಆಯ್ಕೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರು ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಒಂದು ವಾರದಿಂದ ಡಿಸಿಎಂ ಟೆಂಪಲ್ ರನ್: ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ರಾ ಡಿಕೆ ಶಿವಕುಮಾರ್?
ತಂದೆ ಹೇಳಿಕೆಗೆ ಸಮಜಾಯಿಷಿ ನೀಡಿದ ಮಗ
ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಬೆಂಬಲಿತ ಪೇಜ್ ಗಳು ಬಿಎಸ್ ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿದ್ದು, ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಯಡಿಯೂರಪ್ನವರಪ ಪುತ್ರ, ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ, ಯಾರು ಅಭ್ಯರ್ಥಿ ಆಗಬೇಕು ಎಂದು ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಅಗುತ್ತದೆ.ಯಶವಂತಪುರ ಮಾತ್ರ ಅಲ್ಲ. ಶಿಕಾರಿಪುರ ಸೇರಿದಂತೆ ಯಾವುದೇ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಕೋರ್ ಕಮಿಟಿಯಲ್ಲಿ ಚರ್ಚೆ ಆಗಿ ವರಿಷ್ಠರು ತೀರ್ಮಾನ ಮಾಡಬೇಕಾಗುತ್ತದೆ . ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ರುದ್ರೇಶ್ ಮೇಲಿನ ಅಭಿಮಾನದಿಂದ ಯಡಿಯೂರಪ್ಪನವರು ಹೇಳಿರಬಹುದು. ಯಡಿಯೂರಪ್ಪನವರು ಹಿರಿಯರು, ಪಕ್ಷದ ಸಂಸದೀಯ ಮಂಡಳಿ ಸದಸ್ಯರು ಎಂದು ಸ್ಪಷ್ಟಪಡಿಸಿದರು.
ಬಿಎಸ್ ವೈ ಘೋಷಣೆಗೆ ರುದ್ರೇಶ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಸ್ವತಃ ಬಿಜೆಪಿ ರೈತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಮಾತನಾಡಿ, ಯಡಿಯೂರಪ್ಪ ಅವರು ನನ್ನ ಮೇಲಿನ ಪ್ರೀತಿಗೆ ಹೇಳಿದ್ದು. ಎನ್‌ಡಿಎ ಮೈತ್ರಿಕೂಟ ಇದೆ. ಅವರೆಲ್ಲರೂ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಹುಮ್ಮಸ್ಸಿನಿಂದ ಕೆಲಸ ಮಾಡಲಿ ಎಂದು ಹೀಗೆ ಹೇಳಿದ್ದಾರೆ. ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ನಾನೂ ಕೂಡ ಯಶವಂತಪುರ ಕ್ಷೇತ್ರದಲ್ಲೇ ಇರುವುದು. ಜವರಾಯಿಗೌಡರೂ ಇದ್ದಾರೆ. ನಾವೂ ಇದ್ದೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರಬೇಕು. ರಾಜ್ಯದಲ್ಲಿ ಎಲ್ಲಿ ಟಿಕೆಟ್ ಕೊಟ್ಟರೂ ಆ ಜಾಗದಲ್ಲಿ ನಿಲ್ಲಲು ನಾನು ಸಿದ್ಧ. ಯಡಿಯೂರಪ್ಪ ಅವರು ಹೇಳಿದಾಗ ಜವರಾಯಿಗೌಡರು ಕೂಡಾ ಜೊತೆಯಲ್ಲೇ ಇದ್ದರು. ಅವರೂ ಕೂಡ ಖುಷಿ ಪಟ್ಟಿದ್ದಾರೆ. ನಾನು ಕೂಡಾ ಯಶವಂತಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಸ್ಪಷ್ಟನೆ ನೀಡಿದರು. ಈ ಮೂಲಕ ಮೈತ್ರಿ ಜೆಡಿಎಸ್ ನಾಯಕರ ಸಿಟ್ಟು ಶಮನಗೊಳಿಸುವ ಪ್ರಯತ್ನಮಾಡಿದರು.
ಮೊದಲೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಕೆಲ ವಿಚಾರಕ್ಕೆ ಮುಸುಕಿನ ಗುದ್ದಾಟಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಕೆಲಸ ಮಾಡಿ ಮೇಲಿಂದ ಟಿಕೆಟ್ ತರುವುದು ನನ್ನ ಜವಾಬ್ದಾರಿ ಎಂದು ಸ್ವತಃ ಕೇಂದ್ರ ಸಚಿವರ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ನಾಯಕರಿಗೆ ಕರೆ ನೀಡಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಮಾಡಬೇಕೆಂಬ ಕೂಗುಗಳು ಸಹ ಕೇಳಿಬರುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಯಡಿಯೂರಪ್ಪ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಂದು ತಮ್ಮ ಆಪ್ತನ ಹೆಸರು ಘೋಷಣೆ ಮಾಡಿದ್ದು, ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಮುಂದೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಎಂದು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




