ಒಂದು ವಾರದಿಂದ ಡಿಸಿಎಂ ಟೆಂಪಲ್ ರನ್: ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ರಾ ಡಿಕೆ ಶಿವಕುಮಾರ್?
ಮುಖ್ಯಮಂತ್ರಿ ಗದ್ದುಗೆ ಏರಲು ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮುಂದುವರೆಸಿದ್ದಾರೆ. ಯಾರು ಏನೇ ಅಂದರೂ ನನ್ನ ಪ್ರಾರ್ಥನೆ ನನಗೆ ಬಿಟ್ಟಿದ್ದು ಎಂದು ಹೇಳುತ್ತಾ, ಹಾಸನ ಜಿಲ್ಲೆಯಲ್ಲಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಬೆಂಬಲಿಗರಿದ ಡಿಕೆ ಸಿಎಂ ಆಗಲಿದೆ ಎಂಬ ಘೋಷಣೆ ಮೊಳಗಿದೆ. ಇನ್ನು ರಹಸ್ಯ ಪೂಜೆಗೆ ಮಾಡಿದ್ದಕ್ಕಾಗಿ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

ಬೆಂಗಳೂರು/ಹಾಸನ, (ಜುಲೈ 27): ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಟೆಂಪಲ್ ರನ್ ಮುಂದುವರಿಸಿದ್ದಾರೆ. ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ (Karnataka CM Post aspirant) ಡಿಕೆ ಶಿವಕುಮಾರ್, ಯಾರು ಏನೇ ಮಾತಾಡಿದರೂ, ಯಾರೇ ಕ್ರಾಂತಿಯ ಬಗ್ಗೆ ಮಾತನಾಡಿದರೂ ನಾನು ನನ್ನ ಪ್ರಾರ್ಥನೆ ಮಾಡುತ್ತೇನೆ ಎಂದು ದೇಗುಲ ಯಾತ್ರೆ ಮಾಡುತ್ತಿದ್ದಾರೆ. ಬಿಜಿ ಕಾರ್ಯಕ್ರಮಗಳಿಂದ ಬಳಲಿದ್ದ ಡಿಕೆಶಿ, ಕಳೆದ ನಾಲ್ಕೈದು ದಿನಗಳಿಂದ ವಿಶ್ರಾಂತಿ ನೆಪದಲ್ಲಿ ಸಮಯವನ್ನು ದೇಗುಲ ಪ್ರವಾಸಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಸಿಎಂ ಗದ್ದುಗೆ ಹಿಡಿಯುವ ಆಕಾಂಕ್ಷೆಯೊಂದಿಗೆ ದೇಗುಲಗಳತ್ತ ಮುಖ ಮಾಡಿದ್ದಾರೆ. ಯಾರು ಏನೇ ಹೇಳಲಿ, ತಮ್ಮ ಪ್ರಾರ್ಥನೆ ತಮಗೆ ಬಿಟ್ಟಿದ್ದು ಅಂತಿದ್ದಾರೆ.
ಒಂದು ವಾರದಿಂದ ಡಿಕೆಶಿ ಟೆಂಪಲ್ ಜರ್ನಿ
ಪ್ರಾರ್ಥನೆ ಮೇಲೆ ನಂಬಿಕೆ ಇಟ್ಟಿರುವ ಡಿಕೆ ಕಳೆದೊಂದು ವಾರದಿಂದ ಟೆಂಪಲ್ ರನ್ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಹಾಸನ ಜಿಲ್ಲೆಯ ಕೋಡಿ ಮಠಕ್ಕೆ ಭೇಟಿ ನೀಡಿದ್ದಾರೆ. ಕೋಡಿ ಮಠದಲ್ಲಿ ನೀಲಮಜ್ಜಯ್ಯ ಹಾಗೂ ಶಿವಲಿಂಗಜ್ಜಯ್ಯರ ಗದ್ದುಗೆಗಳಿಗೆ ನಮಿಸಿ, ತಮ್ಮ ಆಪ್ತರೊಂದಿಗೆ ದೇಗುಲ ದರ್ಶನ ಮಾಡಿದ್ದಾರೆ. ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಕೋಡಿ ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ; ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದ ಬೆಂಬಲಿಗರು, ಸಿಟ್ಟಾದ ಸಿದ್ದರಾಮಯ್ಯ: ಡಿಕೆಶಿ ಏನಂದ್ರು ನೋಡಿ!
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಸನ್ನಿಧಿಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ ಎಂದು ಹೇಳಿರುವ ಅವರು, ಸರ್ಕಾರದ ಕಾರ್ಯಕ್ರಮದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ನಮನ ಅರ್ಪಿಸಿ ಪ್ರಾರಂಭ ಮಾಡಿದ್ದೇವೆ. ಒಳ್ಳೆಯ ಮಳೆ, ಬೆಳೆ, ಅಭಿವೃದ್ಧಿ ಕೆಲಸಗಳು ಕೂಡ ಆಗಿವೆ. ದೇವರ ದರ್ಶನ ಮಾಡುವ ಭಾಗ್ಯ ನನಗೆ ಸಿಕ್ಕಿದೆ, ಮತ್ತೆ ನಾನು ಬರುತ್ತೇನೆ ಎಂದಿದ್ದಾರೆ. ತಮ್ಮ ಕಾರ್ಯಕರ್ತರು ಮತ್ತು ಮುಖಂಡರು ದೇವಸ್ಥಾನ ಹಾಗೂ ಈ ಭಾಗವನ್ನು ಅಭಿವೃದ್ಧಿಪಡಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಮತ್ತು ಜನತೆಗೆ ನೆಮ್ಮದಿ, ಶಾಂತಿ ಸಿಗಲೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
ರಹಸ್ಯ ಪೂಜೆ ಬಗ್ಗೆ ಡಿಕೆಶಿ ಹೇಳಿದ್ದೇನು?
ಟೆಂಪಲ್ ರನ್ ಮಾಡುತ್ತಿರುವ ಡಿಕೆ ಶಿವಕುಮಾರ್, ದೇವಾಲಯದ ಬಾಗಿಲು ಮುಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅದು ಭಕ್ತನಿಗೂ ಮತ್ತು ಭಗವಂತನಿಗೂ ಬಿಟ್ಟಂತಹ ವಿಚಾರ ಎಂದಿದ್ದಾರೆ. ಅಷ್ಟೇ ಅಲ್ಲದೆ ಮೂರು ದಿನಗಳ ಹಿಂದೆ ಬೆಂಗಾವಲು ವಾಹನ ಇಲ್ಲದೆ ನಾಗರ ನವಿಲೆ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
ಕಳೆದ ವಾರ ನಾಗೇಶ್ವರ ದೇಗುಲಕ್ಕೆ ಡಿಕೆಶಿ ಭೇಟಿ
ಕಳೆದ ವಾರ ಚನ್ನರಾಯಪಟ್ಟಣ ತಾಲೂಕಿನ ನವಿಲೆ ಗ್ರಾಮದಲ್ಲಿರುವ ನಾಗೇಶ್ವರ ದೇವಾಲಯಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಯಾವುದೇ ಭದ್ರತೆ ಇಲ್ಲದೆ, ಖಾಸಗಿ ಕಾರಿನಲ್ಲಿ ಬಂದು ನಾಗದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದರು. ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಈ ದೇವಾಲಯ ಭೇಟಿ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗುವ ಮೊದಲು ನವಿಲೆ ನಾಗೇಶ್ವರನ ಆಶೀರ್ವಾದ ಪಡೆದುಕೊಂಡಿದ್ರು. ಒಂದು ವಾರದ ಹಿಂದೆಯಷ್ಟೇ ದೇವಾಲಯದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅಷ್ಟು ಬೇಗ ಡಿಕೆಶಿ ಟೈಂ ಮಾಡಿಕೊಂಡು ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಡಿಕೆಶಿ ಸಿಎಂ ಆಗಲಿ ಎಂದು ಬೆಂಬಲಿಗರ ಕೂಗು
ದೇಗುಲ ಭೇಟಿ ವೇಳೆ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂದು ಬೆಂಬಲಿಗರ ಘೋಷಣೆ ಮುಂದುವರೆದಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿ ಮಠದ ಬಳಿ ಈ ಘೋಷಣೆಗಳು ಮೊಳಗಿವೆ. ಕೋಡಿ ಮಠದ ಸ್ವಾಮೀಜಿಗಳ ಜೊತೆ ಚರ್ಚಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ತಾಳೆಗರಿ ಭವಿಷ್ಯ ಕೇಳಿದ ನಂತರ ಡಿಕೆಶಿ ಹೊರಬರುತ್ತಿದ್ದಂತೆ ಬೆಂಬಲಿಗರು ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಜೈ ಎಂದು ಘೋಷಣೆ ಕೂಗಿದ್ದಾರೆ.
ಒಂದೆಡೆ ಹಿರಿಯ ಸಚಿವ ರಾಜಣ್ಣ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂದು ಘೋಷಿಸಿದ್ದಾರೆ. ಈ ಮಧ್ಯೆ, ಯಾರು ಏನೇ ಹೇಳಿದ್ರು, ನನ್ನ ಪ್ರಾರ್ಥನೆ ನನಗೆ ಬಿಟ್ಟಿದ್ದು” ಎಂದು ಹೇಳುತ್ತಾ, ಡಿಸಿಎಂ ಡಿ.ಕೆ.ಶಿವಕುಮಾರ್ ದೇಗುಲ ಹಾಗೂ ಗದ್ದುಗೆ ಯಾತ್ರೆ ಮುಂದುವರೆಸಿದ್ದಾರೆ. ಸಿಎಂ ಆಗಲಿ ಅಂತಾ ಹಲವು ಸ್ವಾಮೀಜಿಗಳು ಸಹ ಡಿಕೆಶಿಗೆ ಬಹುಪರಾಕ್ ಹಾಕುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



