ನಾಳೆಯ ಹವಾಮಾನ: ಕರ್ನಾಟಕದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ, ಹಲವೆಡೆ ಆರೆಂಜ್-ಯೆಲ್ಲೋ ಅಲರ್ಟ್
Tomorrow Weather Forecast: ರಣ ಮಳೆಗೆ ಮಲೆನಾಡು, ಕರಾವಳಿ ಭಾಗ ಅಲ್ಲೋಲ, ಕಲ್ಲೋಲವೇ ಆಗೋಗಿದೆ. ಮರುಗಳು ಉರುಳ್ತಿವೆ. ವಿದ್ಯುತ್ ಕಂಬಗಳು ಬೀಳುತ್ತಿವೆ. ನಿರಂತರ ಸುರಿಯುತ್ತಿರೋ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಭಯದಲ್ಲೇ ಜನರು ಜೀವನ ಮಾಡೋ ಪರಿಸ್ಥಿತಿಯಲ್ಲಿ ಮಳೆರಾಯ ತಂದಿಟ್ಟಿದ್ದಾನೆ. ಇಷ್ಟಾದರೂ ವರುಣನ ಅಬ್ಬರ ಮುಂದುವರಿಯಲಿದೆ.

ಬೆಂಗಳೂರು, (ಜುಲೈ 27): ಮಲೆನಾಡು (Malenadu), ಕರಾವಳಿ (Karavali) ಭಾಗದ ಜಿಲ್ಲೆಗಳಲ್ಲಿ ಮಳೆ (Rain)ಯಾರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗು, ಚಿಕ್ಕಮಗಳೂರು, ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದು ಜುಲೈ 31ರ ವರೆಗೂ ಕರ್ನಾಟಕದಲ್ಲಿ (Karnataka )ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು..ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಜುಲೈ 31 ರವರೆಗೂ ಭಾರಿ ಮಳೆ
ರಾಜ್ಯದಲ್ಲಿ ಜುಲೈ 31 ರವರೆಗೂ ಭಾರಿ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನವೂ ಆರೆಂಜ್ ಅಲರ್ಟ್ ಇದ್ದು, ಜುಲೈ 31 ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮಲೆನಾಡು ಜಿಲ್ಲೆಗಳಿಗೂ ಮಳೆ ಆರ್ಭಟ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ , ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜುಲೈ 29 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 30 ಹಾಗೂ ಜುಲೈ 31 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಭೂ ಕಂಟಕ: 60ಕ್ಕೂ ಹೆಚ್ಚು ಕುಟುಂಬಗಳು ಕಂಗಾಲು
ಇನ್ನು ಶಿವಮೊಗ್ಗ, ಚಿಕ್ಕಮಗಳೂರು , ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೂ ಜುಲೈ 30 ರವರೆಗೆ ಭಾರೀ ಮಳೆಯ ಮುನ್ನೆಚ್ಚರಿಕೆ ಕೊಡಲಾಗಿದೆ. ಸೋಮವಾರದವರೆಗೆ ರಾಜ್ಯದ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದ್ದು, ನಂತರ ಮಳೆ ಪ್ರಮಾಣದಲ್ಲಿ ಇಳಿಕೆ ಆಗಲಿದೆ.
ಹಲವೆಡೆ ಮಳೆ ಅವಾಂತರ
ಇನ್ನು ಕೊಡಗಿನಲ್ಲಿ ಮಳೆ ಅವಾಂತರ ಇಷ್ಟಕ್ಕೆ ನಿಂತಿಲ್ಲ. ಪೊನ್ನಂಪೇಟೆಯಲ್ಲಿ ಬೃಹತ್ ಮರವೊಂದು ಉರುಳಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಅವಾಂತರ ಆಗಿದೆ.ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಆಗ್ತಿದೆ. ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿ ಶಾರದಾ ಮಠದ ಪ್ಯಾರಲಲ್ ರಸ್ತೆ ಮುಳುಗಡೆ ಆಗಿದೆ.
ಶೃಂಗೇರಿ ಶಾರದಾ ಮಠದ ಪಾರ್ಕಿಂಗ್ ಪ್ರದೇಶವೂ ಸಂಪೂರ್ಣ ಮುಳುಗಡೆಯಾಗಿದೆ. ತುಂಗಾ ನದಿ ಆರ್ಭಟಕ್ಕೆ ಕೊಚ್ಚಿ ಹೋದ ಕಾರು ಕೊಚ್ಚಿ ಹೋಗಿದೆ. ಅಂಗಡಿಗಳಿಗೂ ನೀರು ನುಗ್ಗಿದೆ. ಮಳೆ ಅದ್ಯಾವ ಮಟ್ಟಿಗೆ ಅಬ್ಬರಿಸ್ತಿದೆ ಅಂದ್ರೆ, ನಿತ್ಯ ಪಾರ್ಕಿಂಗ್ ಸ್ಥಳದಲ್ಲಿ ಮಲಗುತ್ತಿದ್ದ ಯುವಕ ಬಸವರಾಜ್ ಕೊಚ್ಚಿಕೊಂಡು ಹೋಗಿದ್ದಾನೆ. ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ
ಇನ್ನು ಚಿಕ್ಕಮಗಳೂರಿನ ಸಂತವೇರಿ ಗ್ರಾಮದ ಮಹಮ್ಮದ್ ಅನ್ನೋರ ಮನೆ ಮೇಲೆ ಮರವೊಂದು ಬಿದ್ದಿದ್ದು, ಚಾವಣಿ ಪುಡಿಪುಡಿಯಾಗಿದೆ.ಶೃಂಗೇರಿಯಲ್ಲಿ ಭಾರೀ ಮಳೆ ಹಿನ್ನೆಲೆ ನೆಮ್ಮಾರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತ ಆಗಿದೆ.
ಉತ್ತರ ಕನ್ನಡದಲ್ಲಿ ಮಳೆಗೆ ಸಮುದ್ರ ರೌದ್ರರೂಪ ತಾಳಿದೆ. ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ರೂ ಪ್ರವಾಸಿಗರು ದಡದಲ್ಲಿ ನಿಂತು ಹುಚ್ಚಾಟ ಮೆರೆಯುತ್ತಿದ್ದಾರೆ..ಕಾಸರಕೋಡ & ಟೊಂಕಾದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ತೀರದ ರಸ್ತೆ, ಮನೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಾವಿನಗುಳಿ ಜೆಡ್ಡು, ಅಂಪಾರು ಮಧ್ಯದ ಕಾಲು ಸುಂಕ ದುರಸ್ತಿ ಮಾಡದ ಕಾರಣ ಕಾಲಸುಂಕ ಮುರಿದು ಬಿದ್ದಿದೆ. ಇದರಿಂದ ಊರಿನ ಸಂಪರ್ಕವೇ ಬಂದ್ ಆಗಿದ್ದು, ವಿದ್ಯಾರ್ಥಿಗಳು ಸಾರ್ವಜನಿಕರು ಪರದಾಡ್ತಿದ್ದಾರೆ. 40 ಮನೆಗಳ ಜನ ದಿಗ್ಬಂಧನದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
Published On - 5:24 pm, Sun, 27 July 25




