ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: 100ರ ಗಡಿಯತ್ತ ಟೊಮ್ಯಾಟೊ ಬೆಲೆ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮ್ಯಾಟೊ ಆಟ ಆರಂಭವಾಗಿದೆ. ಕಳೆದ ಒಂದು ವಾರದಿಂದ ಟೊಮ್ಯಾಟೊ ದರ 700 ರಿಂದ 800 ಗಡಿ ದಾಟಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ಟೊಮ್ಯಾಟೊ ಸಾವಿರ ರೂಪಾಯಿ ಗಡಿ ದಾಟುವ ಸೂಚನೆ ಕೊಟ್ಟಿದೆ.

ಕೋಲಾರ, ಜುಲೈ 27: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ (Kolar APMC Market) ಕೆಂಪು ಸುಂದರಿ ಟೊಮ್ಯಾಟೊ (Tomato) ತನ್ನ ಆಟವನ್ನು ಆರಂಭಿಸಿದೆ. ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಟೊಮ್ಯಾಟೊಗೆ ಸಿಕ್ಕಾಪಟ್ಟ ಡಿಮ್ಯಾಂಡ್ ಬಂದಿದೆ. ಇಷ್ಟು ದಿನ 400 ರಿಂದ 500 ರೂ.ವರೆಗೂ ಮಾರಾಟವಾಗುತ್ತಿದ್ದ ಟೊಮ್ಯಾಟೊ, ಇವತ್ತು 15 ಕೆಜಿ ಟೊಮ್ಯಾಟೊ ಬಾಕ್ಸ್ 600 ರಿಂದ 700 ರೂ.ವರೆಗೆ ಹರಾಜಾಗಿದೆ. ಕಳೆದ ಒಂದು ವಾರದಿಂದ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವುಂದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದರೇ, ರೈತರ ಮೊಗದಲ್ಲಿ ಮಂದಾಹಸ ಮೂಡಿಸಿದೆ.
ಕಳೆದ ವರ್ಷ ಸಹ ಟೊಮ್ಯಾಟೊ ಬೆಲೆ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಅಂದರೆ ಸುಮಾರು 800ರಿಂದ 1200 ರೂ. ರವರೆಗೂ ಮಾರಾಟವಾಗಿ ಅಚ್ಚರಿಗೊಳಿಸಿತ್ತು. ಉತ್ತರ ಭಾರತದಲ್ಲಿ ಮಳೆರಾಯನ ಅಬ್ಬರದಿಂದಾಗಿ ಟೊಮ್ಯಾಟೊಗೆ ಪುಲ್ ಡಿಮ್ಯಾಂಡ್ ಬಂದಿದೆ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇದರಿಂದ ಸ್ಥಳೀಯವಾಗಿ ರೈತರು ಬೆಳೆದ ಬೆಳೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿಹೋಗಿವೆ. ಇದರ ಪರಿಣಾಮ ಕೋಲಾರದ ಟೊಮ್ಯಾಟೊಗೆ ಭಾರಿ ಬೇಡಿಕೆ ಬಂದಿದೆ. ಈ ಕಾರಣದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳ ವ್ಯಾಪಾರಸ್ಥರು ಬಿಡುಬಿಟ್ಟಿರುವುದರಿಂದ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಮುಂದಿನ 15 ದಿನಗಳಲ್ಲಿ ಒಂದು ಬಾಕ್ಸ್ ಟೊಮ್ಯಾಟೊ 1000 ಗಡಿ ದಾಟುವ ಸಾಧ್ಯತೆ ಇದೆ ಎಂದು ಮಂಡಿ ಮಾಲೀಕ ಸಿಎಂಆರ್ ಶ್ರಿನಾಥ್ ಹೇಳಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜಿಲ್ಲೆಯ ರೈತರು ಈ ಸೀಜ್ನಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದರು. ಆದರೆ, ವೈರಸ್ ಹವಾಳಿಯಿಂದ ಟೊಮ್ಯಾಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಟೊಮ್ಯಾಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಕಷ್ಟುಪಟ್ಟು ಬೆಳೆದರೂ ಸಹ ಟೊಮ್ಯಾಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತರು ಇತ್ತೀಚಿಗೆ ಟೊಮ್ಯಾಟೊ ಬಿಟ್ಟು ಬೇರೆ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಆದರೆ, ಈ ಸಂದರ್ಭದಲ್ಲೇ ಟೊಮ್ಯಾಟೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ರಾಜ್ಯದ ಎಣ್ಣೆ ಕಿಕ್ ಇಳಿಸಿದ ಆಂಧ್ರದ ಹೊಸ ಅಬಕಾರಿ ನೀತಿ, ಏನದು?
ಜುಲೈ ಮತ್ತು ಆಗಸ್ಟ್ ತಿಂಗಳವರೆಗೂ ಟೊಮ್ಯಾಟೊ ಸೀಜನ್ ಇರುವುದರಿಂದ ಟೊಮ್ಯಾಟೊ ಬೆಲೆ ಏರಿಕೆಯಾಗುವ ಸಂಭವವಿದೆ. ಇನ್ನು ಕೋಲಾರದ ಟೊಮ್ಯಾಟೊಗೆ ದೆಹಲಿ, ಒರಿಸ್ಸಾ, ಗುಜರಾಜ್, ಪಶ್ಚಿಮ ಬಂಗಾಳ, ರಾಜಾಸ್ಥಾನ್, ಪಶ್ಚಿಮ ಬಂಗಾಳದಲ್ಲಿ ಟೊಮ್ಯಾಟೊಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ, ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ತಂದಿದೆ.
ಒಟ್ಟಾರೆಯಾಗಿ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಇದೇ ರೀತಿ ಏರಿಕೆಯಾದರೆ ರೈತರಲ್ಲಿ ಸಂತಸ ಮೂಡಿದರೇ, ಗ್ರಾಹಕರಲ್ಲಿ ತಳಮಳ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Sun, 27 July 25








