ಕೋಲಾರದಲ್ಲಿ ರಾಜ್ಯದ ಎಣ್ಣೆ ಕಿಕ್ ಇಳಿಸಿದ ಆಂಧ್ರದ ಹೊಸ ಅಬಕಾರಿ ನೀತಿ, ಏನದು?
ಆಂಧ್ರ ಪ್ರದೇಶದಲ್ಲಿನ ಹೊಸ ಆಬಕಾರಿ ನೀತಿಯಿಂದ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆಂಧ್ರದಲ್ಲಿ ಮದ್ಯದ ಬೆಲೆ ಕಡಿಮೆಯಾದ ಕಾರಣ, ಆಂಧ್ರದ ಜನರು ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಕೋಲಾರದ ಬಾರ್‌ಗಳು ಮತ್ತು ಮದ್ಯ ಮಾರಾಟಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಆದಾಯದ ಮೇಲೂ ಇದರಿಂದ ದುಷ್ಪರಿಣಾಮ ಬೀರಿದೆ.

ಕೋಲಾರ, ಜು.06: ಆಂಧ್ರ ಪ್ರದೇಶ (Andhra Pradesh) ಸರ್ಕಾರದ ಅಬಕಾರಿ (Excise) ಹೊಸ ನೀತಿಯಿಂದಾಗಿ ಕರ್ನಾಟಕ ಸರ್ಕಾರದ (Karnataka Government) ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ರಾಜ್ಯದ ಗಡಿಯಲ್ಲಿ ಆಂಧ್ರ ಮದ್ಯ ಪ್ರಿಯರಿಂದ ತುಂಬಿ ತುಳುಕುತ್ತಿದ್ದ ಬಾರ್‌ಗಳು ಈಗ ವ್ಯಾಪಾರ ಇಲ್ಲದೆ ಖಾಲಿ ಹೊಡೆಯುತ್ತಿವೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಜಾರಿಗೆ ತಂದಿದ್ದ ಅಬಕಾರಿ ನೀತಿ ಆಂಧ್ರದ ಮದ್ಯ ಪ್ರಿಯರನ್ನು ಕೆರಳುವಂತೆ ಮಾಡಿತ್ತು. ಮದ್ಯದ ಬೆಲೆ ಏರಿಕೆಯಾಗಿತ್ತು. ಹೀಗಾಗಿ, ಆಂಧ್ರದ ಮದ್ಯ ಪ್ರಿಯರು ಕರ್ನಾಟಕದಲ್ಲಿ ಸಿಗುವ ಕಡಿಮೆ ಬೆಲೆಯ ಒಳ್ಳೆ ಬ್ರಾಂಡ್ ಮದ್ಯ ಸೇವನೆಗೆ ಗಡಿ ಜಿಲ್ಲೆಗಳಿಗೆ ಬರುತ್ತಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದು ಬರುತ್ತಿತ್ತು.
ಆದರೆ, ಈಗ ಆಂಧ್ರ ಪ್ರದೇಶದಲ್ಲಿ ಸರ್ಕಾರ ಬದಲಾಗಿದ್ದು, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ ಅಧಿಕಾರಕ್ಕೆ ಬಂದಿದೆ. ತೆಲುಗುದೇಶಂ ಪಾರ್ಟಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಬಕಾರಿ ನೀತಿ ಬದಲಾಯಿಸಿದೆ. ಅಬಕಾರಿ ನೀರಿ ಬದಲಾಗುತ್ತಿದ್ದಂತೆ ಆಂಧ್ರದಲ್ಲೂ ಕರ್ನಾಟಕದ ಪ್ರಖ್ಯಾತ ಬ್ರಾಂಡ್ ಮದ್ಯ ಕಡಿಮೆ ಬೆಲೆಗೆ ಸಿಗುತ್ತಿದೆ. ಹೀಗಾಗಿ, ಆಂಧ್ರದ ಮದ್ಯ ಪ್ರಿಯರು ಕರ್ನಾಟಕದ ಗಡಿ ಜಿಲ್ಲೆಗಳಿಗೆ ಬಂದು ಮದ್ಯ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಪರಿಣಾಮ ಒಂದೇ ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿ ಮದ್ಯ ಮಾರಾಟ ಶೇ 4.32 ರಷ್ಟು ಕುಸಿತ ಕಂಡಿದೆ ಎಂದು ಕೋಲಾರ ಅಬಕಾರಿ ಉಪ ಆಯುಕ್ತೆ ಸಯ್ಯದ್ ಅಜ್ಮತ್ ಅಪ್ರೀನ್ ಅವರು ಹೇಳಿದ್ದಾರೆ.
ಆಂಧ್ರ ಪ್ರದೇಶದಲ್ಲಿ 2019-2020 ರಲ್ಲಿ ವೈಎಸ್ಆರ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಅಬಕಾರಿ ನೀತಿ ಜಾರಿಗೆ ತಂದು ಮದ್ಯದ ಬೆಲೆಯನ್ನು ಏರಿಕೆ ಮಾಡಿತ್ತು. ಪರಿಣಾಮ ಆಂಧ್ರದ ಮದ್ಯ ಪ್ರಿಯರು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಕರ್ನಾಟಕದ ಮದ್ಯದಂಗಡಿಗಳಿಗೆ ಮುಗಿಬಿದ್ದಿದ್ದರು. ಪರಿಣಾಮ ಗಡಿಯಲ್ಲಿದ್ದ ಮದ್ಯದಂಗಡಿಗಳಲ್ಲಿ ನಿರೀಕ್ಷೆಗೂ ಮೀರಿದ ವ್ಯಾಪಾರ ನಡೆಯುತ್ತಿತ್ತು. ಇದರಿಂದ ಕೋಲಾರ ನಗರ ಪ್ರದೇಶಗಳಲ್ಲಿದ್ದ ಎಷ್ಟೋ ಬಾರ್‌ಗಳು ಗಡಿ ಭಾಗಕ್ಕೆ ಸ್ಥಳಾಂತರಗೊಂಡಿದ್ದವು.
ಕೋಲಾರ ಜಿಲ್ಲೆಯ ಕೆಜೆಎಫ್, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿಗೆ ಅತಿ ಹೆಚ್ಚು ಬಾರ್‌ಗಳು ಸ್ಥಳಾಂತರಗೊಂಡಿದ್ದವು. ಹತ್ತಾರು ಹೊಸ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ತಲೆ ಎತ್ತಿದ್ದವು. ಆದರೆ, ಈಗ ಕಳೆದ ಸೆಪ್ಟಂಬರ್ನಿಂದ ಆಂಧ್ರದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದಿದ್ದು, ಅಲ್ಲೂ ಕೂಡಾ ಕರ್ನಾಟಕದ ಪ್ರಖ್ಯಾತ ಬ್ರಾಂಡ್ ಮದ್ಯ ಕಡಿಮೆ ಬೆಲೆಗೆ ಸಿಗುತ್ತಿದೆ. ಇದರಿಂದ ಆಂಧ್ರ ಮದ್ಯ ಪ್ರಿಯರು ಕರ್ನಾಟಕದತ್ತ ಸುಳಿಯುತ್ತಿಲ್ಲ. ಪರಿಣಾಮ ಗಡಿಯಲ್ಲಿದ್ದ ಬಾರ್‌ಗಳು ವ್ಯಾಪಾರವಿಲ್ಲದೆ ಖಾಲಿ ಹೊಡೆಯುತ್ತಿವೆ. ಅಬಕಾರಿ ಇಲಾಖೆಯ ಲೆಕ್ಕಾಚಾರದಂತೆ ಐಎಂಎಲ್ ಹಾಗೂ ಬಿಯರ್ ಮಾರಾಟ ಎರಡರಲ್ಲೂ ಕುಸಿತ ಕಂಡಿದೆ.
ಇದನ್ನೂ ಓದಿ: ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್ ನೀಡಿದ ಸರ್ಕಾರ: ಲೈಸೆನ್ಸ್ ಶುಲ್ಕ ಹೆಚ್ಚಳ
ಕಳೆದ 2024ರ ಸೆಪ್ಟಂಬರ್ ತಿಂಗಳಿಂದ ಶೇ 4.32ರಷ್ಟು ಕುಸಿತ ಕಂಡಿದೆ. ಅಂದರೆ ಕೋಲಾರ ಜಿಲ್ಲೆಯಲ್ಲಿ ವಾರ್ಷಿಕವಾಗಿ 99,320 ಬಾಕ್ಸ್ ನಷ್ಟು ಐಎಂಎಲ್ ಮದ್ಯ ಮಾರಾಟ ಕುಸಿತವಾಗಿದೆ. 67,143 ಬಾಕ್ಸ್ ನಷ್ಟು ಬಿಯರ್ ಮಾರಾಟದಲ್ಲೂ ಕುಸಿತವಾಗಿದೆ. ಬಾರ್ ಮಾಲೀಕರು ಕೂಡಾ ಈ ಬೆಳವಣಿಗೆಯಿಂದ ವ್ಯಾಪಾರವಿಲ್ಲದೆ ಬೇಸತ್ತು ಹೋಗಿದ್ದಾರೆ.
ಇತ್ತ ರಾಜ್ಯದ ಸರ್ಕಾರವೂ ಕೂಡಾ ಬಾರ್ ಲೈಸೆನ್ಸ್ ನವೀಕರಣ ಬೆಲೆ ಏರಿಕೆ ಮಾಡಿದ್ದು, ಅತ್ತ ವ್ಯಾಪಾರವೂ ಇಲ್ಲದೆ ಬಾರ್ ಮಾಲೀಕರು ಕಂಗಾಲಾಗಿದ್ದಾರೆ ಎಂದು ಬಾರ್ ಮಾಲೀಕ ಚಲಪತಿ ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Sun, 6 July 25