
ಕಲಬುರಗಿ, ಫೆಬ್ರವರಿ 15: ಆಳಂದದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (ladle mashak dargah) ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗಿದೆ. ಹೈಕೋರ್ಟ್ ಅನುಮತಿ ಪ್ರಕಾರ ಆಂದೋಲದ ಸಿದ್ದಲಿಂಗ ಸ್ವಾಮೀಜಿ, ಹರ್ಷಾನಂದ ಗುತ್ತೇದಾರ್, ಗುರುಶಾಂತ್ ಟೆಂಗಳಿ ಸೇರಿ 14 ಜನರು ಶಿವಲಿಂಗಕ್ಕೆ ಪೂಜೆ (Shivalinga pooja) ಸಲ್ಲಿಸಿದ್ದಾರೆ. ಆದರೆ ಪೂಜೆ ಬಳಿಕ ಶಿವಲಿಂಗದ ಆಕಾರವೇ ಬದಲಾಗಿದೆ ಎಂದು ಆರೋಪಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇಂದು ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಇಡೀ ನಾಡಿನ ಜನ ಶಿವನಾಮ ಪಠಿಸುತ್ತ, ಜಾಗರಣೆ ಮಾಡುತ್ತ ಶಿವನ ಧ್ಯಾನದಲ್ಲಿ ಮುಳುಗುತ್ತಾರೆ. ಆದರೆ ಬಿಸಿಲೂರು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತ್ರ ಅಘೋಷಿತ ಬಂದ್ ಆಗಿತ್ತು. ಇದಕ್ಕೆ ಕಾರಣ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ.
ಅಂದಹಾಗೆ ಮಹಾಶಿವರಾತ್ರಿ ನಿಮಿತ್ಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ 14 ಜನ ಹಿಂದೂಗಳು ಪೂಜೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದ್ದು, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪೂಜೆ ಸಲ್ಲಿಸಲು ಸಮಯ ನಿಗದಿ ಮಾಡಿತ್ತು. ಅದರಂತೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್, ಅರ್ಜಿದಾರರಾದ ಸಿದ್ದರಾಮಯ್ಯ ಹಿರೇಮಠ ಮತ್ತು ಗುರುಶಾಂತ್ ಟೆಂಗಳಿ ನೇತೃತ್ವದಲ್ಲಿ ಮಧ್ಯಾಹ್ನ 2.35 ಕ್ಕೆ ಪೂಜೆ ಸಲ್ಲಿಸಲು ದರ್ಗಾದೊಳಗೆ ಪ್ರವೇಶ ಮಾಡಿದರು. ಸುಮಾರು 50 ನಿಮಿಷಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಜಲಾಭಿಷೇಕ, ಬಿಲ್ವಪತ್ರೆ, ಪಂಚಾಮೃತದಿಂದ ಪೂಜೆ ಸಲ್ಲಿಸಿ ಹೊರಬಂದರು.
ಶಿವಲಿಂಗ ಪೂಜೆ ಬಳಿಕ ಮಾತಾಡಿದ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ, ಹೈಕೋರ್ಟ್ ಅನಮತಿಯಂತೆ ನಾವು ಶಿವರಾತ್ರಿ ದಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದೇವೆ. ಇದಕ್ಕೆ ಹೈಕೋರ್ಟ್ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇವೆ. ಪೊಲೀಸ್ ಭದ್ರತೆಯಲ್ಲಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿದ್ದೇವೆ. ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಆಕಾರದಲ್ಲಿ ಬದಲಾವಣೆಯಾಗಿದೆ. ಆ ಬಗ್ಗೆ ತನಿಖೆಯಾಗಬೇಕು. ಅಲ್ಲಿ ಸ್ವಚ್ಚತಾ ಕಾರ್ಯ ನಡಿದಿದೆ. ಹಿಂದೂ ಮುಖಂಡರ ಗಮನಕ್ಕೆ ತರದೆ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.
ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಉದ್ದೇಶಪೂರ್ವಕವಾಗಿ ಶಿವಲಿಂಗ ಮೇಲೆ ಮಲಮೂತ್ರ ಮಾಡಿ ಅಪಮಾನ ಮಾಡಲಾಗಿತ್ತು, ಹೀಗಾಗಿ ಶಿವಲಿಂಗದ ಶುದ್ದಿಕರಣಕ್ಕೆ 2022ರಲ್ಲಿ ತೆರಳಿದ್ದ ವೇಳೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಕೆಡಿಸಲು ಗಲಭೆ ಎಬ್ಬಿಸಲಾಗಿತ್ತು. ಬಳಿಕ ಕಾಂಗ್ರೆಸ್ ಸರ್ಕಾರ ಬಂದ ನಂತರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅಡ್ಡಿಪಡಿಸುತ್ತಾ ಬಂದ್ದಿದ್ದು, ಸತತ ಮೂರ್ನಾಲ್ಕು ವರ್ಷದಿಂದ ಕೋರ್ಟ್ ಮೂಲಕ ಬಂದು ಪೂಜೆ ಮಾಡ್ತಿದ್ದು, ಜಿಲ್ಲಾಡಳಿತ ಹಿಂದೂಗಳ ಹಕ್ಕನ್ನ ದಮನ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.
ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಈಶಾನ್ಯ ವಲಯ ಐಜಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿಗಿದೆ. KSRP, DAR ತುಕಡಿ ಸೇರಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ದರ್ಗಾ ಒಳಗೆ ಹಾಗೂ ದರ್ಗಾ ಸುತ್ತಮುತ್ತ 40ಕ್ಕೂ ಹೆಚ್ಚು ಸಿಸಿಟಿವಿಗಳ ಅಳವಡಿಕೆ ಮಾಡಲಾಗಿತ್ತು. ಅಲ್ಲದೆ 4 ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳ ಮೂಲಕ ಹದ್ದಿನಕಣ್ಣಿಡಲಾಗಿದ್ದು, ಆಳಂದ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು.
ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್
ಮತ್ತೊಂದೆಡೆ ಕಲಬುರಗಿ ಬಹುಮನಿ ಕೋಟೆಯೊಳಗಿರೋ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೊಡಬೇಕೆಂದು ಪ್ರತಿಭಟನೆ ನಡೆಯಿತು. ಶಿವಲಿಂಗ ಪೂಜೆಗೆ ಅವಕಾಶ ನೀಡಿದ ಹಿನ್ನೆಲೆ ಧರಣಿ ಮಾಡಿದ ಹಿಂದೂ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:53 pm, Sun, 15 February 26