ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವುದಾಗಿ 110 ಜನರಿಗೆ ವಂಚನೆ
ಕಲಬುರಗಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಹಗರಣ ದೇಶಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಮತ್ತೊಂದು ಹಗರಣ ನಡೆದಿದೆ. ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 110 ಜನರಿಗೆ ವಂಚಿಸಲಾಗಿದೆ.
ಕಲಬುರಗಿ, ಆಗಸ್ಟ್ 23: ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ (Kalaburagi Jayadeva Hospital) ಡಿ ದರ್ಜೆ ನೌಕರಿ ಕೊಡಿಸುವುದಾಗಿ ಹೇಳಿ ಬರೋಬ್ಬರಿ 110 ಜನರಿಂದ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರಿ ಕೊಡಿಸುವುದಾಗಿ ಐವರು 110 ಜನರಿಂದ 70 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ.
ಕಿರಾಣಿ ಅಂಗಡಿ ವ್ಯಾಪಾರಿ ಸಂತೋಷ್, ರಾಜಶೇಖರ್ ಸೇರಿದಂತೆ ಐವರನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಕಲಬುರಗಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಚಿಕಿತ್ಸೆ ಪಡೆದುಕೊಳ್ಳಲು ಬಂದು ಎಂಬಿಬಿಎಸ್ ವಿದ್ಯಾರ್ಥಿನಿಗೆ ಮರ್ಮಾಂಗ ತೋರಿಸಿದ ಯುವಕ
ಕಲಬುರಗಿ ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಸೆಪ್ಟೆಂಬರ್ನಲ್ಲಿ ಉದ್ಘಾಟನೆಯಾಗಲಿದೆ. ಆಸ್ಪತ್ರೆಯಲ್ಲಿ ಈಗಾಗಲೆ ಚಿಕಿತ್ಸ ನೀಡಲಾಗುತ್ತಿದೆ. 371 ಹಾಸಿಗೆಗಳ ಆಸ್ಪತ್ರೆ ಇದೇ ವರ್ಷ ಫೆಬ್ರವರಿಯಲ್ಲಿ ತನ್ನ ತಾತ್ಕಾಲಿಕ ಕಾರ್ಯ ಆರಂಭಿಸಿದೆ. 371 ಹಾಸಿಗೆಗಳ ಆಸ್ಪತ್ರೆಯಲ್ಲಿ 100 ತೀವ್ರ ನಿಗಾ ಘಟಕದ ಹಾಸಿಗೆಗಳು, ಸಾಮಾನ್ಯ ವಾರ್ಡ್‌ಗಳಿಗೆ 250 ಹಾಸಿಗೆಗಳು ಮತ್ತು ವಿಶೇಷ ಮತ್ತು ಡೀಲಕ್ಸ್ ಕೋಣೆಗಳಿಗಾಗಿ 25 ಹಾಸಿಗೆಗಳು. ಇದು ಮೂರು ಆಪರೇಷನ್ ಥಿಯೇಟರ್‌ಗಳು ಮತ್ತು ಮೂರು ಕ್ಯಾಥ್ ಲ್ಯಾಬ್‌ಗಳನ್ನು ಹೊಂದಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 180 ರೂ. ಕೋಟಿ ಮಂಜೂರು ಮಾಡಿದ್ದು, ಆಸ್ಪತ್ರೆಯನ್ನು ಸುಧಾರಿತ ಸಾಧನಗಳೊಂದಿಗೆ ಮೇಲ್ದರ್ಜೆಗೇರಿಸಲು 56 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ