ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ, ಸಚಿವ ಶರಣ ಪ್ರಕಾಶ್ ಪಾಟೀಲ್ ವಿರುದ್ಧ ಗಂಭೀರ ಆರೋಪ
Kalaburagi BJP Worker Shivakumar Suicide: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ನಡೆದಿದ್ದು, ಆತ್ಮಹತ್ಯೆಗೂ ಮುನ್ನ ನನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ.

ಕಲಬುರಗಿ, (ಅಕ್ಟೋಬರ್ 19): ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ (Suiicde) ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಕುಮಾರ್(35) ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ. ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣ ಎಂದು ಮೂರು ಆಡಿಯೋ ರೆಕಾರ್ಡ್ ಮಾಡಿಟ್ಟು ನಿನ್ನೆ (ಅಕ್ಟೋಬರ್ 18) ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ 3 ಆಡಿಯೋ ರೆಕಾರ್ಡ್ ಮಾಡಿದ್ದು, ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣವೆಂದು ಆರೋಪಿಸಿದ್ದಾನೆ. ನಾನು ಹಿಂದೂ ಹುಲಿಯಾಗಿದ್ದೇನೆ, ಹಿಂದೂ ಹುಲಿಯಾಗಿ ಸಾಯುತ್ತೇನೆ. ಡಾ.ಶರಣಪ್ರಕಾಶ್ ಪಾಟೀಲ್ ಹಿಂದೂ ಧರ್ಮದ ಬಗ್ಗೆ ಮಾತಾಡಬಾರದು. ಮಾತನಾಡಿದರೆ ಇವರಿಗೆ ಬೆಂಕಿ ಬೀಳುತ್ತೆ ಎಂದು ಆಡಿಯೋ ರೆಕಾರ್ಡ್ ಮಾಡಿದ್ದಾನೆ.
ಇದನ್ನೂ ಓದಿ: ED Raids: ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ
ಸಿಡಿದೆದ್ದ ಬಿಜೆಪಿ ನಾಯಕರು
ಕಾರ್ಯಕರ್ತ ಶಿವಕುಮಾರ್ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅನೇಕ ದೌರ್ಜನ್ಯ ನಡೆಯುತ್ತಿವೆ. ಧರ್ಮಕ್ಕಾಗಿ ಹೋರಾಟ ಮಾಡುವವರ ಹತ್ತಿಕ್ಕುವ ಕೆಲಸ ಆಗುತ್ತಿದೆ. ಬಿಜೆಪಿ ಮುಖಂಡ ಶಿವಕುಮಾರ್ಗೆ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ. ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ಆಡಿಯೋ ರೇಕಾರ್ಡ್ ಮಾಡಿದ್ದಾನೆ. ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ದ ಆಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಶರಣಪ್ರಕಾಶ್ ಪಾಟೀಲ್ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಚಿವರ ಹೆಸರು ಬಂದಿದೆ ಅಂದರೆ ಸೂಕ್ತ ತನಿಖೆ ಮಾಡಿಸಬೇಕು. ತಪ್ಪಿತಸ್ಥ ಸಚಿವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Thu, 19 October 23