
ಕಲಬುರಗಿ, ನವೆಂಬರ್ 1: ಪತ್ನಿಯ ಶೀಲ ಶಂಕಿಸಿ ಪತಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ನೀಲಾಬಾಯಿ ರಾಠೋಡ್ ಕೊಲೆಯಾದ ಮಹಿಳೆ. ಆರೋಪಿಯಾಗಿರುವ ಪತಿ ನಾಮದೇವ ರಾಠೋಡ್ ಕೃತ್ಯ ಎಸಗಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ ನೀಲಾಬಾಯಿ ರಾಠೋಡ್ ಅವರನ್ನು ಸುಮಾರು ಒಂಬತ್ತು ವರ್ಷಗಳ ಹಿಂದೆ ಕಲಬುರಗಿ ತಾಲೂಕಿನ ಬಸವನ ತಾಂಡಾದ ನಿವಾಸಿ ನಾಮದೇವ ರಾಠೋಡ್‌ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ ನೀಲಾಬಾಯಿ, ಕಲಬುರಗಿ ನಗರದ ರಾಮಮಂದಿರ ವೃತ್ತದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೆಲ ದಿನಗಳಿಂದ ನಾಮದೇವ ರಾಠೋಡ್ ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದ. ನೀಲಾಬಾಯಿ ಅವರ ಮೊಬೈಲ್‌ಗೆ ಕರೆ ಅಥವಾ ಸಂದೇಶ ಬಂದರೂ ಅನುಮಾನದಿಂದ ನೋಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ನಾಮದೇವ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ. ಆತ ನಿತ್ಯ ಮದ್ಯಪಾನ ಮಾಡಿ ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪತಿಯ ಕಿರುಕುಳ ತಾಳಲಾರದೆ ಕೆಲ ದಿನಗಳ ಹಿಂದೆ ನೀಲಾಬಾಯಿ ತಮ್ಮ ಮೂವರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು.
ಬಳಿಕ ತಾಂಡಾದ ಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ದಂಪತಿ ನಡುವೆ ಸಂಧಾನ ನಡೆಸಿ ನೀಲಾಬಾಯಿ ಅವರನ್ನು ಮತ್ತೆ ಗಂಡನ ಮನೆಗೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ, ಪತ್ನಿಯ ಮೇಲಿನ ನಾಮದೇವನ ಅನುಮಾನ ಕಡಿಮೆಯಾಗಿರಲಿಲ್ಲ. ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ಹೊತ್ತಿದ್ದ ನೀಲಾಬಾಯಿ, ತಾಂಡಾದಿಂದ ಕಲಬುರಗಿ ನಗರಕ್ಕೆ ಬಂದು ತರಕಾರಿ ಮಾರಾಟ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಪತ್ನಿಯ ಮೇಲಿನ ಅನುಮಾನವೇ ಕೊನೆಗೆ ಭೀಕರ ಕೃತ್ಯಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಮನೆಯಲ್ಲಿ ದೊಡ್ಡ ಮಟ್ಟದ ಜಗಳ ನಡೆದಿತ್ತು. ಬಳಿಕ ಮನೆಯಲ್ಲಿ ಮಲಗಿದ್ದ ನೀಲಾಬಾಯಿ ಅವರ ಮೇಲೆ ಪತಿ ನಾಮದೇವ ರಾಠೋಡ್ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ನಾಮದೇವ ರಾಠೋಡ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪತಿಯ ಅನುಮಾನ ಮತ್ತು ನಿರಂತರ ಕಿರುಕುಳದ ನಡುವೆ ನೀಲಾಬಾಯಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು, ಅವರ ಮೂವರು ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮೃತಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ