ಕಲಬುರಗಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ, ಮುಖ್ಯ ಶಿಕ್ಷಕಿ ವಿರುದ್ಧ ಎಫ್ಐಆರ್
ಪೋಷಕರು ನೀಡಿದ ದೂರಿನ ಆಧಾರದಲ್ಲಿ ಕಲಬುರಗಿಯ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಜೋಹರ್ ಜಬೀನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಲಬುರಗಿ, ಜನವರಿ 13: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದೂ ಅಲ್ಲದೆ ತಮ್ಮ ಮನೆಯ ಗಾರ್ಡನ್ನ ಕೆಲಸ ಮಾಡಿಸಿಕೊಂಡ ಮುಖ್ಯ ಶಿಕ್ಷಕಿ ವಿರುದ್ಧ ಕಲಬುರಗಿಯ (Kalaburagi) ರೋಜಾ ಠಾಣೆಯಲ್ಲಿ ಸೋಮವಾರ ಎಫ್ಐಆರ್ (FIR) ದಾಖಲಾಗಿದೆ. ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮುಖ್ಯ ಶಿಕ್ಷಕಿ ಜೋಹರ್ ಜಬೀನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕಲಬುರಗಿಯ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಜೋಹರ್ ಜಬೀನ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದಾರೆ. ಅವರ ಮನೆಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಜತೆಗೆ ಪೊಲೀಸರಿಗೆ ದೂರನ್ನೂ ನೀಡಿದ್ದರು.
ಕಳೆದ ಹಲವು ತಿಂಗಳುಗಳಿಂದ ಜೋಹರ ಜಬೀನ ಕೆಲವು ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಸಿದ್ದರೆ, ಇನ್ನು ಕೆಲವರನ್ನು ಅವರ ನಿವಾಸದಲ್ಲಿರುವ ಉದ್ಯಾನವನ್ನು ಸ್ವಚ್ಛಗೊಳಿಸಲು ಸಹ ಕರೆದೊಯ್ಯುತ್ತಿದ್ದರು. ಈ ಬಗ್ಗೆ ತಮ್ಮ ಪುತ್ರ ಮತ್ತು ಇತರ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರು ಎಂದು ಪೋಷಕರೊಬ್ಬರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಕಳೆದ ವಾರ ಶಾಲೆಗೆ ಹೋಗಿ, ಶಾಲಾ ವಿದ್ಯಾರ್ಥಿಗಳನ್ನು ಇಂತಹ ಕೆಲಸಗಳಿಗೆ ಬಳಸದಂತೆ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದೆ. ವಿದ್ಯಾರ್ಥಿಗಳನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ದೂರುದಾರರು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಕಲಬುರಗಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ, ಪ್ರಾಂಶುಪಾಲರ ಮನೆಗೆಲಸ ಮಾಡಿಸಿದ ಆರೋಪ
ಎಚ್ಚರಿಕೆಯ ಹೊರತಾಗಿಯೂ, ಜೋಹರ ಜಬೀನ ಅವರು ಶನಿವಾರ ಅವರ ಮನೆಯ ತೋಟವನ್ನು ಸ್ವಚ್ಛಗೊಳಿಸಲು ಮಗನಿಗೆ ಸೂಚಿಸಿದ್ದರು ಎಂದು ದೂರುದಾರರು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ