ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್ ಓಡಾಡಲು ಆಗಲ್ಲ: ಖಡಕ್ ಎಚ್ಚರಿಕೆ ಕೊಟ್ಟ ಪ್ರಿಯಾಂಕ್ ಖರ್ಗೆ
ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದವರಿಗೆ ಸಹನೆ ಇರಬೇಕು. ನನಗೆ ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಷ್ಟು ಸಹನಶಕ್ತಿ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ: ನಾವು ಮನಸ್ಸು ಮಾಡಿದರೆ ಬಿಜೆಪಿಯ ಒಬ್ಬ ನಾಯಕ ಓಡಾಡಲು ಆಗಲ್ಲ. ಇದನ್ನು ಬೆದರಿಕೆ ಎಂದು ಬೇಕಾದ್ರೂ ತಿಳಿದುಕೊಳ್ಳಿ, ಏನಾದ್ರೂ ಅಂದ್ಕೊಳ್ಳಿ ಎಂದು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿದ್ದ ಬಿಜೆಪಿಗೆ ತಿರುಗೇಟು ನೀಡಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮೂಲತಃ ಶಾಂತ ಸ್ವಭಾವದವರಾಗಿದ್ದು, ಅದೇ ರೀತಿಯಾಗಿ ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯದಲ್ಲಿ ನನಗೆ ನಿಮಗಿಂತ ನೂರು ಪಟ್ಟು ಹೆಚ್ಚು ಅನುಭವವಿದೆ ಎಂದು ಬಿಜೆಪಿಯವರ ವಿರುದ್ಧ ತೊಡೆತಟ್ಟಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್ ಓಡಾಡಲಾಗಲ್ಲ. ನಿಮಗೆ ಅಂತಹ ವಾತಾವರಣ ಬೇಕಿದ್ದರೆ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ನಮ್ಮ ತಂದೆಯಷ್ಟು ಸಹನೆ ನನಗಿಲ್ಲ
ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದವರಿಗೆ ಸಹನೆ ಇರಬೇಕು. ನನಗೆ ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಷ್ಟು ಸಹನೆ ಇಲ್ಲ. ಆದರೆ ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರರ ತತ್ವ ಎಷ್ಟಿದೆಯೋ, ಭಾರತ ರತ್ನ ಡಾ.ಅಂಬೇಡ್ಕರ್ರವರ ಹೋರಾಟದ ರಕ್ತವೂ ಇದೆ ಎಂದು ಖಡಕ್ ಆಗಿ ಹೇಳಿಕೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆಂದು ಪೋಸ್ಟರ್ ಅಂಟಿಸಿದ್ದ ಬಿಜೆಪಿ
ಇನ್ನು ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು (ನ. 08) ಪೋಸ್ಟರ್ ಅಳವಡಿಸಿ ಪ್ರತಿಭಟನೆ ಮಾಡಿದ್ದರು. ಬಿಜೆಪಿ ಯುವ ಮುಖಂಡ ಅರವಿಂದ್ ಚೌಹ್ಹಾಣ್ ನೇತೃತ್ವದಲ್ಲಿ ಚಿತ್ತಾಪುರ ನಗರದ ಹಲವು ಕಡೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದರು. ಕಳೆದ ಅಕ್ಟೋಬರ್ನಲ್ಲಿ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ತದನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಖರ್ಗೆ ವಿರುದ್ಧ ಗ್ರಾಮದ ಬಿಜೆಪಿ ಮುಖಂಡರು ಸಿಡಿದೆದ್ದಿದ್ದರು. ಒಂದು ವೇಳೆ ಪ್ರಿಯಾಂಕ್ ಖರ್ಗೆ ಎಲ್ಲಾದರೂ ಕಾಣಿಸಿಕೊಂಡರೆ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಮನವಿ ಸಹ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:04 pm, Fri, 11 November 22