ಮಹಿಳೆ ಮೇಲೆ ಹಲ್ಲೆ ನಡೆಸಿ ಮನೆಗೆ ಬೆಂಕಿ: ಎಫ್‌ಐಆರ್ ದಾಖಲಿಸಿದ ಪಿಎಸ್‌ಐ ಕಾರಿಗೂ ಬೆಂಕಿ ಇಟ್ಟ ಕಾನ್‌ಸ್ಟೇಬಲ್!

ಕಲಬುರಗಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಮಹಿಳೆ ಮೇಲೆ ಹಲ್ಲೆ ನಡೆಸಿ ಆಕೆಯ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ಬಳಿಕ ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ವಿಕೃತಿ ಕೂಡ ಮೆರೆಯಲಾಗಿದೆ. ಕಾನೂನು ಪಾಲಕರಿಂದಲೇ ಇಂತಹ ದುಷ್ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮಹಿಳೆ ಮೇಲೆ ಹಲ್ಲೆ ನಡೆಸಿ ಮನೆಗೆ ಬೆಂಕಿ: ಎಫ್‌ಐಆರ್ ದಾಖಲಿಸಿದ ಪಿಎಸ್‌ಐ ಕಾರಿಗೂ ಬೆಂಕಿ ಇಟ್ಟ ಕಾನ್‌ಸ್ಟೇಬಲ್!
ಕಾನ್‌ಸ್ಟೇಬಲ್ ರಾಜಶೇಖರ್ ವರನಾಳ್
Image Credit source: tv9 kannada
Edited By:

Updated on: Sep 16, 2026 | 10:04 PM

ಕಲಬುರಗಿ, ಸೆಪ್ಟೆಂಬರ್​ 16: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಪೇದೆಯೊಬ್ಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಆಕೆಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ತನ್ನ ವಿರುದ್ಧ ಪ್ರಕರಣ ದಾಖಲಿಸಿದ ಪಿಎಸ್‌ಐ ಖಾಸಗಿ ಕಾರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದಲ್ಲಿ ನಡೆದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ರಾಜಶೇಖರ್ ವರನಾಳ್ ಕೃತ್ಯವೆಸಗಿದ್ದಾರೆ.

ನಡೆದಿದ್ದೇನು? 

ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ರಾಜಶೇಖರ್ ವರನಾಳ್, ತನ್ನ ವಿರುದ್ದ ಕೇಸ್ ದಾಖಲಸಿದ್ದಕ್ಕೆ‌ ಕೋಪಗೊಂಡು ಮಹಗಾಂವ್ ಠಾಣೆಯ ಪಿಎಸ್​ಐ ಕಾರಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇದಕ್ಕೂ ಮೊದಲು ಇದೇ ಪೊಲೀಸಪ್ಪ ಮಹಾಗಾಂವ್ ಪಟ್ಟಣದ ರೆಷ್ಮಾ‌‌ ಎಂಬ ಮಹಿಳೆ ಮೇಲೆ‌‌ ಹಲ್ಲೆ‌ ಮಾಡಿದ್ದ.‌ ಅಲ್ಲದೇ‌ ಕುಡಿದ‌ ನಶೆಯಲ್ಲಿ ಅವರ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಸಿಟ್ಟಿಗೆದ್ದು ಪಿಎಸ್‌ಐ ಖಾಸಗಿ ಕಾರಿಗೆ ಬೆಂಕಿ ಹಚ್ಚಿದ ಕಾನ್‌ಸ್ಟೇಬಲ್

ಸಂತ್ರಸ್ಥ ಮಹಿಳೆ ದೂರಿನ ಮೇರೆಗೆ ಮಹಗಾಂವ್ ಠಾಣೆಯ‌ ಪಿಎಸ್​ಐ ಬಸವರಾಜ್, ಕಾನ್‌ಸ್ಟೇಬಲ್ ರಾಜಶೇಖರ್ ವರನಾಳ್ ವಿರುದ್ಧ ಎಫ್ಐಆರ್‌ ದಾಖಲಿಸಿದ್ದರು.‌ ಇದರಿಂದ ರೊಚ್ಚಿಗೆದ್ದ ರಾಜಶೇಖರ್, ನೇರವಾಗಿ ಬಸವರಾಜ ಅವರ ಖಾಸಗಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ‌ ಹಚ್ಚಿದ್ದಾರೆ. ತಕ್ಷಣ ಸ್ಥಳೀಯರು ನೋಡಿ ಬೆಂಕಿ‌ ನಂದಿಸಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಅತ್ತ ದೂರು ಕೊಟ್ಟ ಮಹಿಳೆ ಮನೆಗೂ ಬೆಂಕಿ ಹಚ್ಚಿದ ಪೊಲೀಸಪ್ಪ, ಪುಡಿ ರೌಡಿಗಳ ರೀತಿ ಮಹಿಳೆಯ ಮೇಲೆ‌ ಅಟ್ಯಾಕ್ ಮಾಡಿದ್ದ. ಹೀಗಾಗಿ ಆತನ ವಿರುದ್ದ ಕ್ರಮ ಆಗಬೇಕು ಎಂದು ಸಂತ್ರಸ್ಥೆ ಆಗ್ರಹಿಸುತ್ತಿದ್ದಾರೆ.

ಮಹಿಳೆ ಮತ್ತು ಕಾನ್‌ಸ್ಟೇಬಲ್ ಮಧ್ಯೆ ಗಲಾಟೆ

ರಾಜಶೇಖರ್ ವರನಾಳ್ ಮೊದಲು ಇದೇ‌ ಮಹಾಗಾಂವ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆ  ವೇಳೆ ಈ ರೇಷ್ಮಾ ಎನ್ನುವವರು ಪರಿಚಯವಾಗಿತ್ತು. ಆದರೆ ಆ ಪರಿಚಯ ಕೆಲ ದಿನಗಳ ಕಳೆದಯುತ್ತಿದ್ದಂತೆ, ಇಬ್ಬರ ಮಧ್ಯೆ ಬಿರುಕು ಬಿಟ್ಟಿತ್ತು. ಹೀಗಾಗಿ ಪದೇ ಪದೇ ಇಬ್ಬರ ಮಧ್ಯೆ ಗಲಾಟೆಯಾಗುತ್ತಿತ್ತು.‌ ಹೀಗಾಗಿ ಅವರನ್ನ ಚಿಂಚೋಳಿಗೆ ವರ್ಗಾವಣೆ‌ ಮಾಡಲಾಗಿತ್ತು.‌ ಆದರೂ ಮಹಿಳೆ ಮನೆಗೆ ಬಂದು ಕಿರಿಕ್ ಮಾಡಿದ್ದಾರೆ. ಹೀಗಾಗಿ ಸದ್ಯ ಗುಂಡಾ ವರ್ತನೆ ತೋರಿದ ಪೊಲೀಸಪ್ಪನ ಮೇಲೆ ಎರಡು ಎಫ್​ಐಆರ್ ದಾಖಲಾಗಿದೆ.

ತಪ್ಪು ಯಾರೇ ಮಾಡಿದ್ರೂ ಮುಲಾಜಿಲ್ಲದೆ ಕ್ರಮ ಎಂದ ಪ್ರಿಯಾಂಕ್ ಖರ್ಗೆ

ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ‘ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದರೆ ಕಾನ್‌ಸ್ಟೇಬಲ್ ಇರಲಿ ಅಥವಾ ಐಪಿಎಸ್ ಅಧಿಕಾರಿಯೇ ಇರಲಿ, ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ರಿಡ್ಜ್‌ ಸ್ಫೋಟದಿಂದ ನಾಲ್ವರು ಸಾವು ಕೇಸ್​​: ಚಿಕಿತ್ಸೆ ಫಲಿಸದೆ ತಂದೆ, ಮಗ ಸಾವು; ಫಲಿಸದ ಕುಟುಂಬಸ್ಥರ ಪ್ರಾರ್ಥನೆ

ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ಕೇಳಿದ್ದಾರೆ. ಕಾನೂನು ಕಾಯಬೇಕಾದ‌ ಪೊಲೀಸರೇ‌ ಕಾನೂನು ಕೈಗೆತ್ತಿಕೊಂಡಿದ್ದು, ನಿಜಕ್ಕೂ ದುರಂತದ ಸಂಗತಿ.

Upset Of FIR, Police Constable Sets PSI's Car On Fire In Kalaburgi: ಕ್ಷಲ್ಲಕ ಕಾರಣಕ್ಕೆ ಮನೆಗೆ ಬೆಂಕಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us