Women’s Day Special: ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ ಹುದ್ದೆ ನೀಡಿದ ರೇವೂರು ಠಾಣೆ
ಕಳೆದ ವರ್ಷ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಮೇಘಾ ಎಂಬ ವಿದ್ಯಾರ್ಥಿನಿಗೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ರೇವೂರು ಗ್ರಾಮದಲ್ಲಿರುವ ಪೊಲೀಸ್ ಠಾಣೆಯ ಸಿಬ್ಬಂದಿ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ ಹುದ್ದೆ ನೀಡಿ ಗೌರವಿಸಿದೆ.
ಕಲಬುರಗಿ: ಮನೆಯಿಂದ ಅಂತರಿಕ್ಷದವರಗೆ, ಕೃಷಿ ಜಮೀನಿನಿಂದ ಹಿಡಿದು ಯುದ್ಧ ಭೂಮಿವರಗೆ ಇದೀಗ ಎಲ್ಲಡೆ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂತಹ ಸರ್ವಸಂಪನ್ನ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಮಾರ್ಚ್ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ(International Women’s Day) ಆಚರಿಸಲಾಗುತ್ತದೆ. ಇಂತಹ ಮಹತ್ವದಿನದಂದು ಕಲಬುರಗಿ ಪೊಲೀಸರು, ಮಹಿಳೆಯರಿಗೆ ವಿಶಿಷ್ಟವಾದ ಗೌರವ ಸಲ್ಲಿಸಿದ್ದು, ಅದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ವಿದ್ಯಾರ್ಥಿನಿಯರು ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಇಂದು ಅನೇಕ ಕಡೆ ಭಿನ್ನ-ವಿಭಿನ್ನ ರೀತಿಯಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಆದರೆ ಕಲಬುರಗಿ ಜಿಲ್ಲಾ ಪೊಲೀಸರು ವಿಶೇಷವಾಗಿ ಮಹಿಳಾ ದಿನವನ್ನು ಆಚರಿಸಿದರು. ಹೌದು ಕಲಬುರಗಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇಂದು ವಿದ್ಯಾರ್ಥಿನಿಯರಿಗೆ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ(ಎಸ್ ಎಚ್ ಓ) ಹುದ್ದೆ ನೀಡಿ ಗೌರವ ಸಲ್ಲಿಸಲಾಯಿತು. ಹೌದು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಠಾಣೆಗಳನ್ನು ಹೊರತು ಪಡಿಸಿ, ಕಲಬುರಗಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿವೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಓರ್ವ ವಿದ್ಯಾರ್ಥಿನಿಗೆ ಗೌರವಾರ್ಥ ಠಾಣಾಧಿಕಾರಿ ಹುದ್ದೆ ನೀಡಲಾಗಿತ್ತು. ಒಂದು ದಿನದ ಮಟ್ಟಿಗೆ ವಿದ್ಯಾರ್ಥಿನಿಯರು, ಠಾಣೆಯಲ್ಲಿ ಕುಳಿತು, ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು.
ಇನ್ನು ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿನಿಯರಲ್ಲಿ, ಯಾರು ಪಿಯುಸಿ, ಮತ್ತು ಡಿಗ್ರಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೋ ಅಂತವರನ್ನು ಗುರುತಿಸಿ, ಅವರನ್ನು ಠಾಣೆಗೆ ಕರೆದು ಸತ್ಕರಿಸಲಾಯಿತು. ಠಾಣೆಯ ಸಿಬ್ಬಂಧಿಗಳೆಲ್ಲಾ, ವಿದ್ಯಾರ್ಥಿನಿಯರಿಗೆ ಸತ್ಕರಿಸಿದರು. ನಂತರ ಒಂದು ದಿನದ ಮಟ್ಟಿಗೆ ಠಾಣೆಯಲ್ಲಿ ಪ್ರಮುಖ ಹುದ್ದೆಯಾಗಿರುವ ಠಾಣಾಧಿಕಾರಿ ಹುದ್ದೆಯನ್ನು ನೀಡಲಾಯಿತು.
ಜನರ ದೂರುಗಳನ್ನು ಆಲಿಸಿದ ವಿದ್ಯಾರ್ಥಿನಿಯರು ಪೊಲೀಸ್ ಸಿಬ್ಬಂಧಿ ಗೌರವಾರ್ಥವಾಗಿ ನೀಡಿದ ಠಾಣಾಧಿಕಾರಿ ಹುದ್ದೆಯನ್ನು ಗೌರವದಿಂದ ಸ್ವೀಕರಿಸಿದ ವಿದ್ಯಾರ್ಥಿನಿಯರು, ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ಠಾಣೆಗೆ ಬಂದಿದ್ದ ಅನೇಕರ ದೂರುಗಳನ್ನು ಆಲಿಸಿದರು. ಕೆಲವರಿಗೆ ತಮ್ಮದೆ ಆದ ರೀತಿಯಲ್ಲಿ ಸಲಹೆಗಳನ್ನು ನೀಡಿದರು.ತಮಗೆ ಅರ್ಥವಾಗದೇ ಇದ್ದಾಗ, ಮೇಲಾಧಿಕಾರಿಗಳ ಗಮನಕ್ಕೆ ತಂದರು. ಪೊಲೀಸ್ ಠಾಣೆಯಲ್ಲಿರುವ ಸಿಬ್ಬಂಧಿಗಳ ಸಹಾಯದಿಂದ ಯಶಸ್ವಿಯಾಗಿ ಠಾಣಾಧಿಕಾರಿ ಕೆಲಸವನ್ನು ನಿರ್ವಹಿಸಿದರು.
ವಿಶೇಷ ಗೌರವ ಸಲ್ಲಿಸಿದ ಕಲಬುರಗಿ ಎಸ್ಪಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿರುವ ಇಶಾ ಪಂತ್, ದಕ್ಷ ಐಪಿಎಸ್ ಅಧಿಕಾರಿ ಅನ್ನೋ ಹೆಗ್ಗಳಿಕೆಯನ್ನು ಪಡೆದವರು. ವಿದೇಶದಲ್ಲಿ ಓದುತ್ತಿದ್ದ ಇಶಾ ಪಂತ್ ಅವರು, ವಿದೇಶದಿಂದ ದೇಶಕ್ಕೆ ಆಗಮಿಸಿ, ನಾಗರಿಕ ಸೇವಾ ಪರೀಕ್ಷೆಯನ್ನು ಬರೆದು, ಐಪಿಎಸ್ ಹುದ್ದೆಯನ್ನು ಪೆಡದಿದ್ದಾರೆ. ಮೊದಲು ಮದ್ಯಪ್ರದೇಶ ಕೇಡರ್ ಅಧಿಕಾರಿಯಾಗಿದ್ದ ಇಶಾ ಪಂತ್, 2016 ರಲ್ಲಿ ತಮ್ಮ ಕೇಡರ್ ನ್ನು ಕರ್ನಾಟಕಕ್ಕೆ ಬದಲಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲು ಕಲಬುರಗಿ ಹೊರವಲಯದಲ್ಲಿರುವ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದ ಇಶಾ ಪಂತ್, ಬೆಂಗಳೂರಿನಲ್ಲಿ ಡಿಸಿಪಿ ಆಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲ ತಿಂಗಳ ಹಿಂದಷ್ಟೇ ಅವರು ಕಲಬುರಗಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಮಹಿಳಾ ದಿನ ಹಿನ್ನೆಲೆಯಲ್ಲಿ ತಮ್ಮ ಸಿಬ್ಬಂಧಿಗೆ, ವಿಶೇಷವಾಗಿ ಮಹಿಳಾ ದಿನಾಚಾರಣೆ ಮಾಡಲು ಸೂಚಿಸಿದ್ದರು. ಅದರಂತೆ ಇಂದು ಎಲ್ಲಾ ಠಾಣೆಯ ಸಿಬ್ಬಂಧಿ ವಿದ್ಯಾರ್ಥಿನಿಯರಿಗೆ ವಿಶೇಷ ಸತ್ಕಾರ ಸಲ್ಲಿಸಿ, ಮಹಿಳಾ ದಿನವನ್ನು ಆಚರಿಸಿದ್ದಾರೆ.
ಇಂದು ಮಹಿಳಾ ದಿನದ ಹಿನ್ನೆಲೆಯಲ್ಲಿ ರೇವೂರು ಠಾಣೆಯ ಪೊಲೀಸರು ನನ್ನನ್ನು ಠಾಣೆಗೆ ಕರಿಸಿ ಸತ್ಕರಿಸಿದರು. ಜೊತೆಗೆ ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸುವ ಅವಕಾಶ ನೀಡಿದ್ದರು. ಒಂದು ದಿನದ ಮಟ್ಟಿಗೆ ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು ತುಂಬಾ ಖುಷಿ ನೀಡಿತು ಎಂದು ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ವಿದ್ಯಾರ್ಥಿನಿ ಮೇಘಾ ತಿಳಿಸಿದ್ರು.
ಕಲಬುರಗಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇಂದು ವಿಶಿಷ್ಟವಾಗಿ ಮಹಿಳಾ ದಿನವನ್ನು ಆಚರಿಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿರುವ ಡಿಗ್ರಿ ಮತ್ತು ಪಿಯುಸಿ ವಿದ್ಯಾರ್ಥಿನಿಗಳಿಗೆ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ ಹುದ್ದೆ ನೀಡಿ ಗೌರವಿಸಲಾಗಿದೆ. ವಿಶಿಷ್ಟವಾಗಿ ಮಹಿಳಾ ದಿನವನ್ನು ಆಚರಿಸಿದ ಸಿಬ್ಬಂದಿಗೆ ಅಭಿನಂದನೆಗಳು ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ಶುಭ ಕೋರಿದ್ರು.
ವರದಿ; ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ
ಇದನ್ನೂ ಓದಿ: ವಿಶೇಷ ವಿಮಾನಗಳ ಮೂಲಕ ಸುಮಾರು 18,000 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತರಲಾಗಿದೆ: ಕೇಂದ್ರ ಸರ್ಕಾರ
ಶಿವಮೊಗ್ಗನಲ್ಲಿ ಇನ್ನೂ ಮುಗಿದಿಲ್ಲ ಹಿಜಾಬ್ ವಿವಾದ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿನಿಯರ ಪ್ರತಿಭಟನೆ
Published On - 10:27 pm, Tue, 8 March 22