ಕಲಬುರಗಿ: ಮದುವೆಯಾಗುವಂತೆ ದುಂಬಾಲು ಬಿದ್ದ ಯುವತಿ ಕಾಟಕ್ಕೆ ಬೇಸತ್ತು ಮನೆಯಿಂದ ನಾಪತ್ತೆಯಾದ ಯುವಕ
ಮರೆಪ್ಪಾ ಅನ್ನೋ ಮೂವತ್ತು ವರ್ಷದ ಯುವಕ, ಇದೇ ನವಂಬರ್ 13 ರಂದು ನಾಪತ್ತೆಯಾಗಿದ್ದಾನೆ. ಮನೆಯಲ್ಲಿಯೇ ಮೊಬೈಲ್ ಬಿಟ್ಟು, ಐದು ಪುಟಗಳ ಪತ್ರವನ್ನು ಬರೆದಿಟ್ಟು ನಾಪತ್ತೆಯಾಗಿದ್ದಾನೆ.
ಕಲಬುರಗಿ: ಯುವಕನೋರ್ವ ಮದುವೆಯಾಗಲು ಯುವತಿ ನೋಡಿದ್ದ. ಆದರೆ ಯುವತಿ ಯುವಕನ ಹೆಸರೇ ಸರಿಯಿಲ್ಲಾ ಅಂತ ಹೇಳಿ ಮದುವೆಯಾಗೋದಿಲ್ಲಾ ಅಂತ ಹೇಳಿದ್ದಳು. ಇತ್ತ ಯುವಕ ಮತ್ತೊಂದು ಯುವತಿ ನೋಡಿ, ಆಕೆಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಮೊದಲು ನೋಡಿದ್ದ ಯುವತಿ ಜೊತೆ ಫೋನ್ನಲ್ಲಿ ಸಂಪರ್ಕದಲ್ಲಿದ್ದ. ಬೇರೆ ಯುವತಿ ಜೊತೆ ನಿಶ್ಚಿತಾರ್ಥದ ವಿಷಯ ಗೊತ್ತಾಗುತ್ತಿದ್ದಂತೆ, ಮೊದಲು ನೋಡಿದ್ದ ಯುವತಿ ತನ್ನನ್ನೇ ಮದುವೆಯಾಗಬೇಕು ಅಂತ ಯುವಕನಿಗೆ ದುಂಬಾಲು ಬಿದ್ದಿದ್ದಳು. ಯುವತಿ ಮದುವೆಗೆ ದುಂಬಾಲು ಬಿದ್ದಿದ್ದರಿಂದ ಮನನೊಂದ ಯುವಕ ನಾಪತ್ತೆಯಾಗಿದ್ದಾನೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮರೆಪ್ಪಾ ಅನ್ನೋ ಮೂವತ್ತು ವರ್ಷದ ಯುವಕ, ಇದೇ ನವಂಬರ್ 13 ರಂದು ನಾಪತ್ತೆಯಾಗಿದ್ದಾನೆ. ಮನೆಯಲ್ಲಿಯೇ ಮೊಬೈಲ್ ಬಿಟ್ಟು, ಐದು ಪುಟಗಳ ಪತ್ರವನ್ನು ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಮರೆಪ್ಪಾ ನಾಪತ್ತೆಯಾದ ನಂತರ, ಕುಟುಂಬದವರು ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡಾ ಇಲ್ಲಿವರಗೆ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಮರೆಪ್ಪಾ ಎಲ್ಲಿದ್ದಾನೆ ಅನ್ನೋದು ಇನ್ನುವರಗೆ ಗೊತ್ತಾಗಿಲ್ಲಾ. ಇನ್ನು ಮರೆಪ್ಪಾ, ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನರೇಗಾ ಯೋಜನೆಯ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ. ಮರೆಪ್ಪಾ ನಾಪತ್ತೆಯಾಗಿದ್ದರಿಂದ ಕುಟುಂಬದವರು ಕಂಗಾಲಾಗಿದ್ದು, ತಮ್ಮ ಮಗನನ್ನು ಹುಡುಕಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು
ನಾಪತ್ತೆಗೆ ಕಾರಣವಾಯ್ತು ಯುವತಿಯ ಕಿರಿಕಿರಿ
ಮರೆಪ್ಪಾ ತಾನು ಎಲ್ಲರಿಂದ ದೂರಹೋಗಲು ಅಶ್ವಿನಿ ಅನ್ನೋ ಯುವತಿಯೇ ಕಾರಣ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಮರೆಪ್ಪಾ, ಮದುವೆಯಾಗುವ ಉದ್ದೇಶದಿಂದ ಬೀದರ್ ಜಿಲ್ಲೆಯ ಚಿಟಗುಪ್ಪದಲ್ಲಿ ಅಶ್ವಿನಿ ಅನ್ನೋ ಯುವತಿಯನ್ನು ನೋಡಿದ್ದನಂತೆ. ಆದರೆ ಅಶ್ವಿನಿ, ಮರೆಪ್ಪನನ್ನು ಮದುವೆಯಾಗಲು ಹಿಂದೇಟು ಹಾಕಿದ್ದಳಂತೆ. ಮರೆಪ್ಪನ ಹೆಸರು ಸರಿಯಿಲ್ಲಾ ಅಂತ ಹೇಳಿ, ತಾನು ಮದುವೆಯಾಗೋದಿಲ್ಲಾ ಅಂತ ಹೇಳಿದ್ದಳಂತೆ. ಹೀಗಾಗಿ ಮರೆಪ್ಪಾ ಬೀದರ್ ಜಿಲ್ಲೆಯಲ್ಲಿಯೇ ಒಂದುವರೆ ತಿಂಗಳ ಹಿಂದೆ ಮತ್ತೊಂದು ಯುವತಿಯನ್ನು ನೋಡಿದ್ದ. ಎರಡು ಕುಟುಂಬದವರು ಒಪ್ಪಿದ್ದರಿಂದ, ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಇನ್ನೇನು ಮದುವೆ ತಯಾರಿ ಆರಂಭಿಸಬೇಕು ಅನ್ನೋವಷ್ಟರಲ್ಲಿ ಮರೆಪ್ಪಾ ನಾಪತ್ತೆಯಾಗಿದ್ದಾನೆ.
ಮದುವೆಗೆ ದುಂಬಾಲು ಬಿದ್ದಿದ್ದ ಯುವತಿ
ಇನ್ನು ಮರೆಪ್ಪಾ, ಬೇರೊಂದು ಹುಡುಗಿಯನ್ನು ನೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೂಡಾ ಮೊದಲು ನೋಡಿದ್ದ ಅಶ್ವಿನಿ ಜೊತೆ ಪೋನ್ ನಲ್ಲಿ ಸಂಪರ್ಕದಲ್ಲಿದ್ದನಂತೆ. ಮೆಸೆಜ್ ಮಾಡೋದು, ಕಾಲ್ ಮಾಡಿ ಮಾತನಾಡೋದನ್ನು ಮಾಡುತ್ತಿದ್ದನಂತೆ. ಆದರೆ, ಮರೆಪ್ಪಾ, ತನಗೆ ಮತ್ತೊಂದು ಹುಡುಗಿ ಜೊತೆ ನಿಶ್ಚಿತಾರ್ಥವಾಗಿದೆ. ಮದುವೆಗೆ ಮನೆಯಲ್ಲಿ ಸಿದ್ದತೆ ಮಾಡಿಕೊಂಡಿದ್ದಾರೆ ಅಂತ ಮೊದಲು ನೋಡಿದ್ದ ಹುಡುಗಿ ಅಶ್ವಿನಿಗೆ ತಿಳಿಸಿದ್ದನಂತೆ. ಯಾವಾಗ ಮರೆಪ್ಪಾ ತನಗೆ ನಿಶ್ಚಿತಾರ್ಥವಾಗಿದೆ ಅನ್ನೋ ವಿಷಯ ಹೇಳಿದನೋ, ಆಗ ಮನಸು ಬದಲಿಸಿದ್ದ ಅಶ್ವಿನಿ, ತನ್ನನ್ನೇ ಮದುವೆಯಾಗಬೇಕು ಅಂತ ಮೆರಪ್ಪನಿಗೆ ದುಂಬಾಲು ಬಿದ್ದಿದ್ದಳಂತೆ. ನಿಶ್ಚಿತಾರ್ಥವನ್ನು ರದ್ದು ಮಾಡಿ ತನ್ನ ಜೊತೆ ವಿವಾಹವಾಗು ಅಂತ ಹಠ ಮಾಡುತ್ತಿದ್ದಳಂತೆ. ಇತ್ತ ನಿಶ್ಚಿತಾರ್ಥವನ್ನು ರದ್ದು ಮಾಡಿದರೆ ಕುಟುಂಬದ ಗೌರವ ಹೋಗುತ್ತದೆ. ಹೀಗಾಗಿ ತನಗೆ ದಿಕ್ಕೆ ತೋಚದಂತಾಗಿದ್ದು, ನಾನು ಎಲ್ಲರಿಂದ ದೂರ ಹೋಗುತ್ತಿದ್ದೇನೆ ಅಂತ ಮರೆಪ್ಪಾ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:11 pm, Sun, 27 November 22