ಕಲ್ಯಾಣ ಕರ್ನಾಟಕಕ್ಕೆ ಗುಡ್ ನ್ಯೂಸ್: ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2024 | 9:50 PM

ಕಲಬುರಗಿಯಲ್ಲಿ 377 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಜಯದೇವ ಹೃದ್ರೋಗ ಆಸ್ಪತ್ರೆ ಡಿಸೆಂಬರ್ 22 ರಂದು ಲೋಕಾರ್ಪಣೆಯಾಗಲಿದೆ. ಉತ್ತರ ಕರ್ನಾಟಕದ ಜನರಿಗೆ ಉತ್ತಮ ಗುಣಮಟ್ಟದ ಹೃದಯ ಚಿಕಿತ್ಸೆ ಲಭ್ಯವಾಗಲಿದೆ. ಆ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

ಕಲ್ಯಾಣ ಕರ್ನಾಟಕಕ್ಕೆ ಗುಡ್ ನ್ಯೂಸ್: ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ
ಕಲ್ಯಾಣ ಕರ್ನಾಟಕಕ್ಕೆ ಗುಡ್ ನ್ಯೂಸ್: ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ
Follow us on

ಕಲಬುರಗಿ, ಡಿಸೆಂಬರ್​ 20: ಜಯದೇವ ಹೃದ್ರೋಗ ಆಸ್ಪತ್ರೆ (jayadeva hospital) ರಾಜ್ಯವಲ್ಲದೇ ದೇಶ ಮತ್ತು ವಿಶ್ವಮಟ್ಟದಲ್ಲಿ ಅತ್ಯಂತ ಹೆಸರುವಾಸಿಯಾದ ಆಸ್ಪತ್ರೆ. ಇಂತಹ ವಿಶ್ವಪ್ರಸಿದ್ಧ ಜಯದೇವ ಹೃದ್ರೋಗ ಆಸ್ಪತ್ರೆ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಬೇರೊಬ್ಬರಿ 377 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಜಯದೇವ ಹೃದ್ರೋಗ ಆಸ್ಪತ್ರೆ ಇದೇ ತಿಂಗಳು 22 ರಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. ಸಚಿವದ್ವಯರು ಕಾರ್ಯಕ್ರಮದ ಸಿದ್ಧತೆ ಪರೀಶಿಲನೆ ಮಾಡಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ

ಬೆಂಗಳೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಮೇಲೆ ರಾಜ್ಯವಲ್ಲದೇ ದೇಶ, ವಿದೇಶಗಳ ಅದೆಷ್ಟೋ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜನ ಅವಲಂಬಿತರಾಗಿದಾರೆ. ಅದರದಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜನ ದೂರದ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲು ಹರಸಾಹಸ ಪಡುತ್ತಿದ್ದರು.‌ ಇದೀಗ ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗಿದೆ.

ಇದನ್ನೂ ಓದಿ: ಸಿಬ್ಬಂದಿ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟ ಬೆಂಗಳೂರಿನ ಜಯದೇವ ಆಸ್ಪತ್ರೆ..!

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಸುಮಾರು 377 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಾಯ್ದೆ ಜಾರಿಯಾಗಿ 10 ವರ್ಷ ಕಳೆದ ಹಿನ್ನಲೆಯಲ್ಲಿ, ಅದರ ಸವಿನೆನಪಿಗಾಗಿ 371 ಬೆಡ್ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇನ್ನೂ 2016 ರಲ್ಲಿ ಜಿಮ್ಸ್ ಆಸ್ಪತ್ರೆ ಕಟ್ಟಡದಲ್ಲಿ 130 ಬೆಡ್‌ನಿಂದ ಆರಂಭವಾದ ಜಯದೇವ ಹೃದ್ರೋಗ ಆಸ್ಪತ್ರೆ ಇದೀಗ ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ಸೌಕರ್ಯಗಳನ್ನ ಒಳಗೊಂಡಂತೆ ಡಿಸೆಂಬರ್ 22 ರಂದು ಲೋಕಾರ್ಪಣೆ ಆಗಲಿದೆ.

ಇನ್ನೂ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಭಾಗಿಯಾಗಲಿದಾರೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಉಚಿತ ಚಿಕಿತ್ಸೆ

ಕಲಬುರಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅತ್ಯಾಧುನಿಕ 3 ಕ್ಯಾಥ್‌ಲ್ಯಾಬ್, 3 ಆಪರೇಶನ್ ಥಿಯೇಟರ್, 106 ಐಸಿಯು ಬೆಡ್, ಎಮ್‌ಆರ್‌ಐ ಸಿಟಿ ಸ್ಕ್ಯಾನ್ ಸೇರಿದಂತೆ ವಿಶ್ವದರ್ಜೆಯ ಚಿಕಿತ್ಸೆ ಸೌಲಭ್ಯಗಳನ್ನ ಕಲ್ಪಿಸಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಸಿಗಲಿದ್ದು, ಎಪಿಎಲ್ ಕಾರ್ಡ್‌ದಾರರಿಗೆ ಅಲ್ಪಮೊತ್ತದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಕಲಬುರಗಿಯಲ್ಲಿ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕಲಬುರಗಿಯನ್ನ ಮೆಡಿಕಲ್ ಹಬ್ ಮಾಡಲು ನಮ್ಮ ಸರ್ಕಾರ ಮುಂದಾಗಿದೆಯೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿನ ಹಳೆ ಜಯದೇವ ಆಸ್ಪತ್ರೆಯಲ್ಲಿ ಇದುವರೆಗೆ 5.78 ಲಕ್ಷ ಜನ ಚಿಕಿತ್ಸೆ ಪಡೆದಿದ್ದಾರೆಂದು ಹೇಳಿದ್ದಾರೆ.

ಇದನ್ನೂ ಓದಿ: ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಣೆ, ಇನ್ಮುಂದೆ ಗೋಲ್ಡನ್ ಟೈಮ್​ನಲ್ಲೂ ಚಿಕಿತ್ಸೆ ಸಿಗುತ್ತೆ

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಅದರಲ್ಲಿಯೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 2025 ರ ಜನವರಿಯಿಂದ ಕಲಬುರಗಿಯಲ್ಲಿನ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ಜನರ ಸೇವೆಗೆ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.