ಸ್ಪೀಕರ್ ಖಾದರ್ ಗುಡುಗಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ! ಇಲಾಖಾವಾರು ಎಷ್ಟು ಉತ್ತರ ನೀಡಲಾಯ್ತು? ಇಲ್ಲಿದೆ ವರದಿ

ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡ ನಂತರ ಸರ್ಕಾರ ಸ್ವಲ್ಪಮಟ್ಟಿಗೆ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ. ಅವರ ಖಡಕ್ ಎಚ್ಚರಿಕೆಯ ಪರಿಣಾಮವಾಗಿ, ಶಾಸಕರು ಕೇಳಿದ ಪ್ರಶ್ನೆಗಳಿಗೆ ಇಲಾಖಾವಾರು ಲಿಖಿತ ಉತ್ತರಗಳನ್ನು ಸಲ್ಲಿಸುವ ಪ್ರಮಾಣ ಹೆಚ್ಚಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಸ್ಪೀಕರ್ ಖಾದರ್ ಗುಡುಗಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ! ಇಲಾಖಾವಾರು ಎಷ್ಟು ಉತ್ತರ ನೀಡಲಾಯ್ತು? ಇಲ್ಲಿದೆ ವರದಿ
ವಿಧಾನಸಭೆ ಸ್ಪೀಕರ್ ಯುಟಿ ಖಾದರ್
Image Credit source: tv9

Updated on: Mar 17, 2026 | 1:07 PM

ಬೆಂಗಳೂರು, ಮಾರ್ಚ್ 17: ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಕರ್ನಾಟಕ (Karnataka) ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಅಸಮಾಧಾನಗೊಂಡು ಕಲಾಪ ಮುಂದೂಡಿದ ಘಟನೆಗೆ ಈಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣುತ್ತಿವೆ. ಸ್ಪೀಕರ್ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇಲಾಖಾವಾರು ಲಿಖಿತ ಉತ್ತರಗಳನ್ನು ಸಲ್ಲಿಸಲು ಆರಂಭಿಸಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಖಾದರ್, ಪರವಾಗಿಲ್ಲ ಈಗ ಸ್ವಲ್ಪ ಸುಧಾರಿಸಿದಂತೆ ಕಾಣುತ್ತಿದೆ ಎಂದಿದ್ದಾರೆ.

ಮಂಗಳವಾರದ ಕಲಾಪದಲ್ಲಿ ಇಲಾಖಾವಾರು ಉತ್ತರಗಳ ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದ ಸ್ಪೀಕರ್ ಯುಟಿ. ಖಾದರ್, ‘ಈಗ ಸ್ವಲ್ಪ ಸುಧಾರಣೆ ಕಂಡುಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು. ಸೋಮವಾರದ ಕಲಾಪದಲ್ಲಿ 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಮಾತ್ರ ಉತ್ತರ ಬಂದಿದ್ದರಿಂದ ಬೇಸತ್ತಿದ್ದ ಸ್ಪೀಕರ್, ಸಚಿವರು ಮತ್ತು ಕಾರ್ಯದರ್ಶಿಗಳು ಉತ್ತರಿಸುವವರೆಗೂ ಸದನ ನಡೆಸಲ್ಲ ಎಂದು ಪೀಠದಿಂದ ಕೆಳಗಿಳಿದು ತೆರಳಿದ್ದರು. ಈ ಐತಿಹಾಸಿಕ ಪ್ರತಿಭಟನೆಯ ನಂತರ ಇಂದು ಉತ್ತರಗಳ ಸಂಖ್ಯೆ ಏರಿಕೆಯಾಗಿದೆ.

ಯಾವ ಇಲಾಖೆಯಿಂದ ಎಷ್ಟು ಉತ್ತರ?

ಸ್ಪೀಕರ್ ಯುಟಿ ಖಾದರ್ ಸದನದಲ್ಲಿ ಮಂಡಿಸಿದ ಮಾಹಿತಿಯಂತೆ ವಿವಿಧ ಇಲಾಖೆಗಳು ಪ್ರಶ್ನೆಗಳಿಗೆ ನೀಡಿದ ಉತ್ತರದ ವಿವರ ಇಲ್ಲಿದೆ;

  • ಆರ್ಥಿಕ ಇಲಾಖೆ: ಒಟ್ಟು 30 ಪ್ರಶ್ನೆಗಳಲ್ಲಿ 6ಕ್ಕೆ ಉತ್ತರ ಲಭ್ಯ.
  • ಸಮಾಜ ಕಲ್ಯಾಣ ಇಲಾಖೆ: 9 ಪ್ರಶ್ನೆಗಳಲ್ಲಿ ಕೇವಲ 1ಕ್ಕೆ ಉತ್ತರ.
  • ಸಹಕಾರ ಇಲಾಖೆ: 12 ಪ್ರಶ್ನೆಗಳ ಪೈಕಿ ಒಂದಕ್ಕೂ ಉತ್ತರ ಬಂದಿಲ್ಲ.
  • ಜಲಸಂಪನ್ಮೂಲ ಇಲಾಖೆ: 11 ಪ್ರಶ್ನೆಗಳಲ್ಲಿ 4ಕ್ಕೆ ಉತ್ತರ ಲಭ್ಯ.
  • ನಗರಾಭಿವೃದ್ಧಿ ಇಲಾಖೆ: 24 ಪ್ರಶ್ನೆಗಳಲ್ಲಿ 7ಕ್ಕೆ ಮಾತ್ರ ಉತ್ತರ.
  • ಸಣ್ಣ ನೀರಾವರಿ ಇಲಾಖೆ: 19 ಪ್ರಶ್ನೆಗಳಲ್ಲಿ 13ಕ್ಕೆ ಉತ್ತರ ಬಂದಿದ್ದು, ಈ ಇಲಾಖೆ ಉತ್ತಮ ಪ್ರಗತಿ ಸಾಧಿಸಿದೆ.
  • ಮಾಹಿತಿ ತಂತ್ರಜ್ಞಾನ (IT) ಇಲಾಖೆ: ಕೇಳಲಾದ 2 ಪ್ರಶ್ನೆಗಳಿಗೂ ಉತ್ತರ ಬಂದಿದೆ.

ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬೇಕು: ಸ್ಪೀಕರ್ ಸೂಚನೆ

ಕಳೆದ ಐದು ದಿನಗಳಿಂದ ಕೇವಲ ಶೇ 10 ರಿಂದ 30ರಷ್ಟು ಮಾತ್ರ ಉತ್ತರ ಬರುತ್ತಿತ್ತು. ಈಗ ಸ್ವಲ್ಪ ಸುಧಾರಿಸಿದೆ. ಆದರೆ ಶಾಸಕರು ಸಾರ್ವಜನಿಕ ಹಿತದೃಷ್ಟಿಯಿಂದ ಕೇಳುವ ಪ್ರತಿಯೊಂದು ಪ್ರಶ್ನೆಗೂ ಸರ್ಕಾರ ಜವಾಬ್ದಾರಿಯುತವಾಗಿ ಉತ್ತರಿಸಬೇಕು ಎಂದು ಸ್ಪೀಕರ್ ಪುನರುಚ್ಚರಿಸಿದರು.

ಇದನ್ನೂ ಓದಿ: ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ಶಾಸಕರ ಪ್ರಶ್ನೆಗಳಿಗೆ ಸಚಿವರು ಮತ್ತು ಅಧಿಕಾರಿಗಳು ಉತ್ತರ ನೀಡದೇ ಇರುವುದರಿಂದ ಬೇಸತ್ತು ಸ್ಪೀಕರ್ ಖಾದರ್ ಅವರೇ ಸದನದಿಂದ ಎದ್ದು ಹೋಗಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us