ಕಾಂಗ್ರೆಸ್ ಸರ್ಕಾರಕ್ಕೆ ಅವಮಾನವಾಗೋ ರೀತಿ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್: ಕೋರ್ ಕಮಿಟಿಯಲ್ಲಿ ಸಿದ್ಧವಾಯ್ತು ರಣ ತಂತ್ರ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ತಂತ್ರಗಳನ್ನು ರೂಪಿಸಲಾಯಿತು. ಕಲ್ಯಾಣ ಕರ್ನಾಟಕದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದು, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಅಭಿಯಾನ ಹಾಗೂ ಸರ್ಕಾರದ ರೈತ ವಿರೋಧಿ ನೀತಿಗಳು ಮತ್ತು ಇತರೆ ವೈಫಲ್ಯಗಳ ವಿರುದ್ಧ ಪ್ರಚಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 27: ಎರಡೂವರೆ ತಿಂಗಳ ಬಳಿಕ ನಡೆದ ಬಿಜೆಪಿ (BJP) ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ಕುರಿತು ಚರ್ಚೆ ನಡೆಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಹಾನಿ ಉಂಟಾಗಿರುವ ಕಾರಣ ಬಿಜೆಪಿ ತಂಡ ಸ್ಥಳಕ್ಕೆ ಭೇಟಿ ನೀಡಲಿದ್ದು, ರಸ್ತೆ ಗುಂಡಿ ಮುಚ್ಚುವ ಹೋರಾಟವನ್ನು ಅಭಿಯಾನದ ರೀತಿ ಮುಂದುವರಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ಅಪಮಾನವಾಗುವ ರೀತಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಏನೇನು ಚರ್ಚೆಯಾಯ್ತು?
- ಜಿಬಿಎ, ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳ ಬಗ್ಗೆ ಚರ್ಚೆ
- ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾದರೆ ಪಕ್ಷದ ನಿಲುವು ಏನಿರಬೇಕು ಎಂಬ ಬಗ್ಗೆಯೂ ಚರ್ಚೆ
- ಜಾತಿ ಸಮೀಕ್ಷೆಯ ಫಲಿತಾಂಶ ಮತ್ತು ದತ್ತಾಂಶ ಗೋಪ್ಯತೆಯ ಬಗ್ಗೆ ಸಭೆಯಲ್ಲಿ ಆತಂಕದ ಅಭಿಪ್ರಾಯ ವ್ಯಕ್ತವಾಯಿತು.
- ಹೀಗಾಗಿ ಸಮೀಕ್ಷೆಗೆ ಅಸಹಕಾರದ ಬಗ್ಗೆಯೂ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ.
- ರಸ್ತೆ ಗುಂಡಿ ಮುಚ್ಚುವ ಹೋರಾಟವನ್ನು ಅಭಿಯಾನದ ರೀತಿ ಕೈಗೊಳ್ಳುವ ಬಗ್ಗೆ ನಿರ್ಧಾರ.
- ಗುಂಡಿ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್.
- ರಾಜ್ಯ ಸರ್ಕಾರಕ್ಕೆ ಅಪಮಾನವಾಗುವ ರೀತಿಯಲ್ಲಿ ಹೋರಾಟ ನಡೆಸಲು ಚರ್ಚೆ.
- ಯಾರೆಲ್ಲಾ ಜನಪ್ರತಿನಿಧಿಗಳು ಈ ವರೆಗೆ ಗುಂಡಿ ಮುಚ್ಚುವ ಹೋರಾಟದಲ್ಲಿ ಭಾಗವಹಿಸಿಲ್ಲವೋ ಅವರಿಗೆಲ್ಲಾ ನಾಳೆಯಿಂದಲೇ ಭಾಗವಹಿಸಲು ಸೂಚನೆ.
- ಮಳೆ ಪೀಡಿತ ಜಿಲ್ಲೆಗಳಿಗೆ ತಂಡಗಳಾಗಿ ಬಿಜೆಪಿ ನಾಯಕರ ಪ್ರವಾಸ.
ಇಷ್ಟೇ ಅಲ್ಲದೇ, ರಾಜ್ಯ ಸರ್ಕಾರದ ವೈಫಲ್ಯದ ಕುರಿತು ಬಿಜೆಪಿ ಕೋರ್ ಕಮಿಟಿ ಚರ್ಚೆ ನಡೆಸಿದ್ದು ರೈತರು, ದಲಿತರು ಮತ್ತು ಶೋಷಿತ ವರ್ಗದ ನಿರ್ಲಕ್ಷ್ಯದ ಬಗ್ಗೆ ಹೋರಾಟದ ಬಗ್ಗೆ ಚರ್ಚೆಯಾಗಿದೆ. 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅತಿವೃಷ್ಟಿ ಆಗಿದ್ದರೂ ರೈತರ ನೆರವಿಗೆ ಸರ್ಕಾರ ಧಾವಿಸಿಲ್ಲದ ಕಾರಣ ಕೋರ್ ಕಮಿಟಿ ಸದಸ್ಯರ ನೇತೃತ್ವದ ತಂಡಗಳಲ್ಲಿ ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲೂ ತೀರ್ಮಾನಿಸಲಾಗಿದೆ. ಇದೇ ವೇಳೆ ಸುಧಾರಿತ ಜಿಎಸ್ಟಿ ಬಗ್ಗೆ ಜನರಿಗೆ ಮಾಹಿತಿ ತಲುಪುವಂತೆ ನೋಡಿಕೊಳ್ಳಲು ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಳ್ಳುವಂತೆಯೂ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದ್ದು, ಬೆಸ್ಕಾಂ ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆ ಇನ್ನಷ್ಟು ಹೋರಾಟಕ್ಕೆ ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ: ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಸಿದ್ದು ಸಿಡಿಮಿಡಿ
ಈ ಮಧ್ಯೆ ಧಾರವಾಡದಲ್ಲಿ ನಡೆದ ಉದ್ಯೋಗದ ವಿಚಾರವಾಗಿ ಯುವಕರ ಹೋರಾಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲಲು ಬಿಜೆಪಿ ತೀರ್ಮಾನಿಸಿದ್ದು, ಅಕ್ಟೋಬರ್ 3 ಮತ್ತು 4 ರಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಮಳೆ ಪೀಡಿತ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ.



