
ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಶ್ರಯಿಸಿರುವ ಜನಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ತೀವ್ರ ಆರ್ಥಿಕ ನಷ್ಟದಿಂದ ಹೊರಬರಲು ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಈ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿರುವುದರಿಂದ, ಸಾರಿಗೆ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಇದು ನಿತ್ಯ ಪ್ರಯಾಣಿಸುವ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಕಳೆದ ವರ್ಷವಷ್ಟೇ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ 15 ರಷ್ಟು ಹೆಚ್ಚಳ ಮಾಡಲಾಗಿತ್ತು. ಆದಾಗ್ಯೂ, ಪ್ರಸ್ತುತ ಜಾಗತಿಕ ಯುದ್ಧದ ಪರಿಣಾಮವಾಗಿ ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಯಷ್ಟು ಏರಿಕೆಯಾಗಿದೆ. ಇದರಿಂದಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ (NWKRTC) ಹಾಗೂ ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಷಿಕವಾಗಿ ಬರೋಬ್ಬರಿ 480 ಕೋಟಿ ರೂಪಾಯಿಗಳಷ್ಟು ಬೃಹತ್ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ನಿಗಮಗಳು ಸಿಎಂ ಬಳಿ ಮನವಿ ಮಾಡಿವೆ.
ಸಾರಿಗೆ ನಿಗಮಗಳಿಗೆ ಕೇವಲ ಡೀಸೆಲ್ ದರದ ಹೊರೆ ಮಾತ್ರವಲ್ಲದೆ ಆಂತರಿಕ ಆರ್ಥಿಕ ಜವಾಬ್ದಾರಿಗಳೂ ಹೆಚ್ಚಾಗಿವೆ. ಮುಂಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇ 12.5 ರಷ್ಟು ಪರಿಷ್ಕೃತ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ, ನೌಕರರಿಗೆ ನೀಡಬೇಕಿರುವ ಒಟ್ಟು 1271 ಕೋಟಿ ರೂಪಾಯಿ ವೇತನ ಹಿಂಬಾಕಿ (Arrears) ಹಣದಲ್ಲಿ ಈಗಾಗಲೇ 450 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.
ಉಳಿದೆಲ್ಲ ಸಮಸ್ಯೆಗಳ ಜೊತೆಗೆ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ಯ ಸುಮಾರು 5 ಸಾವಿರ ಕೋಟಿ ರೂಪಾಯಿಯಷ್ಟು ಹಣ ಸಾರಿಗೆ ನಿಗಮಗಳಿಗೆ ಬಿಡುಗಡೆಯಾಗಬೇಕಿದೆ. ಈ ಎಲ್ಲಾ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ನಿಗಮಗಳು ವಾದಿಸುತ್ತಿವೆ. ಆದರೆ, ಒಂದೇ ವರ್ಷದಲ್ಲಿ ಮತ್ತೆ ದರ ಏರಿಕೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ