
ಬೆಂಗಳೂರು, ನವೆಂಬರ್ 05: ಹಾಲು, ಮೊಸರಿನ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಜನರು ಸಾರಿಗೆ ಬಸ್ ಹತ್ತುವ ಮುನ್ನ ಯೋಚಿಸುವಂತಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಕರ್ನಾಟಕದಾದ್ಯಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ಬಸ್ ಕಂಡಕ್ಟರ್ ಜೊತೆಗೆ ಜಗಳ ಕೂಡ ಮಾಡಿದ್ದಾರೆ.
ರಾಜ್ಯದ 4 ಸಾರಿಗೆ ನಿಗಮಗಳ ಪ್ರಯಾಣದರವನ್ನು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. BMTC ದರ ಶೇ.35ರಷ್ಟು, KSRTC ದರ ಶೇ.23ರಷ್ಟು, NWRTC ಹಾಗೂ KKRTC ಎಕ್ಸ್ಪ್ರೆಸ್ ಬಸ್ಗಳ ಟಿಕೆಟ್ ದರವನ್ನ ಸ್ಟೇಜ್ ಆಧಾರದಲ್ಲಿ ಶೇ.23 ರಷ್ಟು ಹೆಚ್ಚಳ ಮಾಡಲಾಗಿದೆ. ಆ ಮೂಲಕ ಗಾಯದ ಮೇಲೆ ಮತ್ತಷ್ಟು ಉಪ್ಪು ಸುರಿದಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿಯಿಂದ ಬಸ್ ಪಾಸ್ ದರವೂ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ
ಇನ್ನು ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ವಿಚಾರವಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವಿರೋಧ ವ್ಯಕ್ತವಾಗಿದೆ. ದರ ಏರಿಕೆ ಬಹಳ ಹೆಚ್ಚಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಢೀರನೇ ಪ್ರಯಾಣ ದರ ಏರಿಕೆ ಮಾಡಿದ್ದು ತಪ್ಪು, ಬಡವರಿಗೆ ಹೊರೆಯಾಗುತ್ತಿದ್ದು, ದರ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟಿವಿ9ಗೆ ಶಿವಮೊಗ್ಗದಲ್ಲಿ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದು, ‘ಗ್ಯಾರೆಂಟಿಗಳನ್ನು ಕೊಡಲು ನಾವು ಹೇಳಿಲ್ಲ. ಗ್ಯಾರೆಂಟಿಗಳನ್ನು ಕೊಟ್ಟು ನಮ್ಮ ಜೀವ ಹಿಂಡುತ್ತಿದ್ದಾರೆ. ಪತ್ನಿಗೆ ಉಚಿತ ಕೊಟ್ಟು ಪತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೀಪಾವಳಿಯ ಗಿಫ್ಟ್ ಇತ್ತೀಚಿಗೆ ಹಾಲಿನ ದರ ಹೆಚ್ಚಿಗೆ ಮಾಡಿತ್ತು. ಈಗ ಬಸ್ ಪ್ರಯಾಣಿಕರ ಟಿಕೆಟ್ ದರ ಏರಿಕೆ ಮಾಡಿದೆ. ಇದು ಎಲ್ಲರಿಗೂ ಬೇಸರದ ಸಂಗತಿ. ನಾವು ಒಂದು ಜಿಲ್ಲೆಯಿಂದ ಮತ್ತೊಂದು ತಾಲೂಕಿಗೆ ಕೆಲಸಕ್ಕೆ ಹೋಗಲು ಪರದಾಡುವಂತೆ ಪರಿಸ್ಥಿತಿ ಉಂಟಾಗಿದೆ. ಇದೇ ರೀತಿ ಆದರೆ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಪಾಠ ಕಲಿಸುತ್ತಾರೆ’ ಎಂದಿದ್ದಾರೆ.
ವಿಜಯಪುರದಲ್ಲಿ ಕೂಡ ಬಸ್ ಏರಿಕೆಗೆ ವಿರೋಧ ವ್ಯಕ್ತವಾಗಿದ್ದು, ‘ಸರ್ಕಾರ ಉಚಿತ ಭಾಗ್ಯ ಕೊಟ್ಟು ಜನರಿಗೆ ತೊಂದರೆಯಾಗುತ್ತಿದೆ. ಮಹಿಳೆಯರಿಗೆ ಉಚಿತ ಮಾಡಿ ಪುರುಷರಿಗೆ ದರ ಏರಿಕೆ ಮಾಡಿದಂತಾಗಿದೆ. ಮಹಿಳೆಯರು, ಪುರುಷರನ್ನು ಸಮಾನಾಗಿ ಕಾಣಬೇಕು. ಉಚಿತ ಭಾಗ್ಯಗಳಿಂದಲೇ ಎಲ್ಲ ದರ ಏರಿಕೆಯಾಗುತ್ತಿದೆ. ಬರಗಾಲದಲ್ಲಿ ದರ ಏರಿಕೆ ಬರೆ ಹಾಕಲಾಗುತ್ತಿದೆ. ಹೀಗಾಗಿ ದರ ಏರಿಕೆಯನ್ನು ನಿಯಂತ್ರಣ ಮಾಡಬೇಕೆಂದು ಸಿಎಂ ಡಿಕೆ ಶಿವಕುಮಾರ್ಗೆ ಜನರು ಮನವಿ ಮಾಡಿದ್ದಾರೆ’.
ಇನ್ನು ಹುಬ್ಬಳ್ಳಿಯಲ್ಲಿ ಟಿಕೆಟ್ ಹೆಚ್ಚಳ ಹಿನ್ನೆಲೆ ಕಂಡಕ್ಟರ್ ಜೊತೆ ಪ್ರಯಾಣಿಕರು ಜಗಳ ಮಾಡುತ್ತಿದ್ದಾರಂತೆ. ಪ್ರಯಾಣಿಕರನ್ನು ಸಮಾಧಾನ ಮಾಡಲು ಕಂಡಕ್ಟರ್ಗಳು ಹರಸಾಹಸ ಪಡುವಂತಾಗಿದೆ. ದಾವಣಗೆರೆಯಲ್ಲೂ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಪುರುಷರ ಕೈಯಿಂದ ಹಣ ಕಸಿದು ಮಹಿಳೆಯರಿಗೆ ಕೊಡಲಾಗುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:26 am, Thu, 5 November 26