‘ಬಸವ ಮಂಟಪ’ಪುಸ್ತಕ ಮುಟ್ಟುಗೋಲಿಗೆ ಸರ್ಕಾರ ಅಧಿಕೃತ ಆದೇಶ, ರವಿ ಹಂಜ್ ಜಾಮೀನು ಏನಾಯ್ತು? ಇಲ್ಲಿದೆ ಅಪ್ಡೇಟ್ಸ್
ಬಸವ ಮಂಟಪ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಬರೆದಿರುವುದಕ್ಕೆ ಲೇಖಕ ರವಿ ಹಂಜಗಿಮಠ್ (ರವಿ ಹಂಜ್) ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೂರು ದಾಖಲಾಗಿವೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ, ಬಸವ ಮಂಟಪ ಪುಸ್ತಕವನ್ನು ಮುಟ್ಟುಗೋಲು ಹಾಕುವಂತೆ ಅಧಿಕೃತ ಆದೇಶ ಹೊರಡಿಸಿದೆ. ಇನ್ನು ರವಿ ಹಂಜ್ ಅವರು ಕೋರ್ಟ್ ಮೆಟ್ಟಿಲೇರಿರುವ ಅಪ್ಡೇಟ್ಸ್ ಇಲ್ಲಿದೆ.

ಬೆಂಗಳೂರು, (ನವೆಂಬರ್ 24): ರವಿ ಹಂಜ್ ಬರೆದ ವಿವಾದಿತ “ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ವೀರಶೈವ ಲಿಂಗಾಯತರು, ಬಸವಣ್ಣನವರ ಅಭಿಮಾನಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಮೊನ್ನೆ ನಡೆದ ಸಚಿವ ಸಂಪುಟದಲ್ಲಿ”ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮದ ಬಗ್ಗೆ ತೀರ್ಮಾನಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು (ನವೆಂಬರ್ 24) ರಾಜ್ಯ ಸರ್ಕಾರ, ರವಿ ಹಂಜ್ ಬರೆದ ವಿವಾದಿತ “ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕೃತ ಆದೇಶ ಹೊರಡಿಸಿದೆ.
ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಇನ್ನೊಂದೆಡೆ ತಮ್ಮ ವಿರುದ್ಧದ ಎಫ್ಐಆರ್ ಸಂಬಂಧ ಬಂಧನದಿಂದ ಬಚಾವ್ ಆಗಲು ರವಿ ಹಂಜ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ನಿರೀಕ್ಷಣಾ ಜಾಮೀನು ಕೋರಿ ರವಿ ಹಂಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 56ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ನಾಳೆ (ನವೆಂಬರ್ 25) ಕಾಯ್ದಿರಿಸಿದೆ.
ಇದನ್ನೂ ಓದಿ: ‘ಬಸವ ಮಂಟಪ’ ಕೃತಿ ವಿವಾದ: ಪುಸ್ತಕದಲ್ಲಿ ಏನಿದೆ? ಲೇಖಕ ರವಿ ಹಂಜ್‌ಗೆ ಸಂಕಷ್ಟ ತಂದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ
ಯಾರು ಯಾರ ಬಗ್ಗೆ ಹೇಗಾದರೂ ಪುಸ್ತಕ ಬರೆಯಬಹುದೇ?
ಯಾರು ಯಾರ ಬಗ್ಗೆ ಹೇಗಾದರೂ ಪುಸ್ತಕ ಬರೆಯಬಹುದೇ? ಬೇರೆಯವರ ಭಾವನೆಗೆ ಧಕ್ಕೆ ಉಂಟುಮಾಡಬಹುದೇ? ಎಂದು ಅರ್ಜಿದಾರ ಪರ ವಕೀಲರಿಗೆ ಜಡ್ಜ್ ಮೋಹನ್ ಪ್ರಭು ಪ್ರಶ್ನಿಸಿದ್ದಾರೆ. ಈ ವೇಳೆ ವಾದ ಮಂಡಿಸಿದ ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್, ಎರಡು ವರ್ಷಗಳಿಂದ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗುತ್ತಿತ್ತು. ಆಗ ಲೇಖನಗಳಿಗೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಈ ಲೇಖನಗಳನ್ನೇ ಪುಸ್ತಕವಾಗಿ ಪ್ರಕಟಿಸಿದಾಗ ದೂರು ನೀಡಿದ್ದಾರೆ. ರಾಜಕಾರಣಿಗಳಿಂದಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನೇ ನಡೆಸದೇ ಎಫ್‌ಐಆರ್ ದಾಖಲಿಸಿದ್ದಾರೆ ಎಂದಿದ್ದಾರೆ. ಬಳಿಕ ಜಡ್ಸ್, ಜಾಮೀನು ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದರು.
ಪ್ರಕರಣ ರದ್ದುಕೋರಿ ಹೈಕೋರ್ಟ್ ಮೊರೆ
ಇನ್ನು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದನ್ನು ರದ್ದುಕೋರಿ ರವಿ ಹಂಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಸವ ಸಮಿತಿಯ ಅಕ್ರಮಗಳ ವಿರುದ್ಧ ಲೇಖನ ಬರೆದಿದ್ದೆ. ಆ ವೈಯಕ್ತಿಕ ದ್ವೇಷದಿಂದ ಅರವಿಂದ ಜತ್ತಿ ದೂರು ನೀಡಿದ್ದಾರೆ. ಸಿಎಂ, ಸಚಿವರ ಹೇಳಿಕೆಯಿಂದಾಗಿ ಪೊಲೀಸರ ಮೇಲೆ ಒತ್ತಡವಿದೆ. ಹೀಗಾಗಿ ಕಾನೂನು ದುರುಪಯೋಗಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲವೆಂದು ಉಲ್ಲೇಖಿಸಿದ್ದಾರೆ. ಅರ್ಜಿಯಲ್ಲಿ ದೂರುದಾರ ಅರವಿಂದ ಜತ್ತಿ ಮತ್ತು ಹೈಗ್ರೌಂಡ್ಸ್ ಠಾಣೆಯ ಪೊಲೀಸರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ರವಿ ಹಂಜ್‌ಗೆ ಬೆಳಗಾವಿ ಪೊಲೀಸ್ ನೋಟಿಸ್
ವಿವಾದಿತ ‘ಬಸವ ಮಂಟಪ’ ಪುಸ್ತಕ ಲೇಖಕ ರವಿ ಹಂಜ್ ವಿರುದ್ಧದ ರಾಜ್ಯಾದ್ಯಂತ ಆಕ್ರೋಶ ಮುಂದುವರೆದಿದ್ದು, ಬಸವಣ್ಣನವರನ್ನು ಅವಹೇಳನ ಮಾಡಿದ ರವಿ ಹಂಜ್ ವಿರುದ್ಧ ಕಠಿಣ ಕ್ರವಾಗಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಬೆಳಗಾವಿ ಮಾರ್ಕೆಟ್ ಠಾಣೆಯಲ್ಲೂ ಸಹ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ನವೆಂಬರ್ 26ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ರವಿ ಹಂಜ್‌ಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Tue, 24 November 26




