ಕರ್ನಾಟಕದ ಬಸ್ ಕೊರತೆ, ಸಾರಿಗೆ ಸಮಸ್ಯೆ ಬಗ್ಗೆ ಗಮನ ಸೆಳೆದ ಮೋಹನ್ ದಾಸ್ ಪೈ: ಗುಜರಾತ್ ಕಡೆ ಬೆರಳು ತೋರಿಸಿದ ರಾಮಲಿಂಗಾ ರೆಡ್ಡಿ!
ಉದ್ಯಮಿ ಮೋಹನ್ ದಾಸ್ ಪೈ ಅವರು ಕರ್ನಾಟಕದಲ್ಲಿ ಸಾರಿಗೆ ಬಸ್‌ಗಳ ಕೊರತೆ ಬಗ್ಗೆ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಖಾಸಗಿ ಬಸ್ ಸೇವೆಗಳಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚರ್ಚೆಗೆ ಬರುವಂತೆ ಪೈ ಅವರಿಗೆ ಸವಾಲು ಹಾಕಿದ್ದಾರೆ.

ಬೆಂಗಳೂರು, ಜನವರಿ 30: ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತು ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶಗಳ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರನ್ನು ಕೆರಳಿಸಿದ್ದು, ಸರ್ಕಾರ ಮತ್ತು ಖಾಸಗಿ ವಲಯದ ಉದ್ಯಮಿಗಳ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಕೊರತೆ ಇರುವುದನ್ನು ಮೋಹನ್ ದಾಸ್ ಪೈ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಉದ್ದೇಶಿಸಿ ಎಕ್ಸ್ ಸಂದೇಶ ಪ್ರಕಟಿಸಿರುವ ಪೈ, ಸಾರ್ವಜನಿಕ ವಲಯದ ಉದ್ಯಮಗಳು (PSU) ಮಾತ್ರ ಕೆಲಸ ಮಾಡುತ್ತವೆ ಎಂಬ ಮೂಢನಂಬಿಕೆಯ ಮನೋಭಾವದಿಂದಾಗಿ ಈ ವೈಫಲ್ಯ ಉಂಟಾಗಿದೆ ಎಂದಿದ್ದಾರೆ. ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಈ ಕೊರತೆಯನ್ನು ನಿವಾರಿಸಲು ಖಾಸಗಿ ಬಸ್ ಸೇವೆಗಳಿಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಈ ಹಿಂದೆ ರಸ್ತೆಗುಂಡಿಗಳ ಬಗ್ಗೆಯೂ ಮೋಹನ್ ದಾಸ್ ಪೈ, ಕಿರಣ್ ಮುಜುಂದಾರ್ ಶಾ ಸೇರಿದಂತೆ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಲೂ ಸರ್ಕಾರದಿಂದ ಇದೇ ರೀತಿ ಆಕ್ರೋಶಭರಿತ ಪ್ರತಿಕ್ರಿಯೆ ಬಂದಿತ್ತು. ಇದು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರ ವಿರುದ್ಧ ಸರ್ಕಾರಗಳ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೋಹನ್ ದಾಸ್ ಪೈ ಅವರು BMTC ಬಸ್‌ಗಳ ಕೊರತೆ, ಹದಗೆಟ್ಟ ರಸ್ತೆಗಳಿಂದ ಬಸ್‌ಗಳಿಗೆ ಆಗುತ್ತಿರುವ ಹಾನಿ ಮತ್ತು ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾರಿಗೆ ವ್ಯವಸ್ಥೆ ಸಾಕಾಗದಿರುವುದನ್ನು ಉಲ್ಲೇಖಿಸಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳ ಸೇವೆಗೂ ಅವಕಾಶ ನೀಡಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.
ರಾಮಲಿಂಗಾ ರೆಡ್ಡಿ ತಿರುಗೇಟು: ಬಿಎಂಟಿಸಿ ಎಂಡಿ ಜತೆ ಚರ್ಚೆಗೆ ಸವಾಲು
Mr. @TVMohandasPai, Our BMTC MD is enough to handle a face-to-face debate with you on any platform.
Kindly come and discuss the facts with them directly. Are you ready to step up, or will you just keep tweeting?
Your view is not just biased—it is fundamentally dogmatic.
— Ramalinga Reddy (@RLR_BTM) January 29, 2026
ಮೋಹನ್ ದಾಸ್ ಪೈ ಹೇಳಿಕೆಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. BMTC ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಮೋಹನ್ ದಾಸ್ ಪೈ ಅವರು ಚರ್ಚೆಗೆ ಬರುವುದಕ್ಕೆ ಸಿದ್ಧರಿದ್ದಾರೋ ಅಥವಾ ಕೇವಲ ಎಕ್ಸ್ ಸಂದೇಶ ಪ್ರಕಟ ಮಾಡುವುದನ್ನು ಮುಂದುವರೆಸುತ್ತಾರೋ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ. ಶಕ್ತಿ ಕೇವಲ ಯೋಜನೆ ಅಲ್ಲ, ಆರ್ಥಿಕ ಸಬಲೀಕರಣ ಎಂದು ಹೇಳಿದ ಸಚಿವರು, ಕರ್ನಾಟಕವು ಪ್ರಸ್ತುತ 26,054 ಬಸ್‌ಗಳನ್ನು ನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿದಿನ 45 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬಿಜೆಪಿ ಆಡಳಿತವಿರುವ ಗುಜರಾತ್‌ನಂತಹ ರಾಜ್ಯಗಳಲ್ಲಿ ಇದೇ ರೀತಿಯ ಸಾರ್ವಜನಿಕ ಸಾರಿಗೆ ಸೇವೆ ಇದೆಯೇ ಎಂದು ತೋರಿಸಲು ಅವರು ಮೋಹನ್ ದಾಸ್ ಪೈಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್ಆರ್ಟಿಸಿ ಬಸ್, ಸಾರಿಗೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ
ಈ ಬೆಳವಣಿಗೆಯಿಂದ, ಸರ್ಕಾರವು ಸಮಸ್ಯೆಗಳನ್ನು ಪರಿಹರಿಸುವ ಬದಲು ಪ್ರಶ್ನಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ವಿಧಾನಸಭೆ ಕಲಾಪದಲ್ಲಿ ‘ಇದು ಆಲಿಸುವ ಸರ್ಕಾರ ಅಲ್ಲ, ಇದು ಸಂಘರ್ಷದ ಸರ್ಕಾರ’ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಗುರುವಾರ ಹೇಳಿದ್ದರು. ಅದಕ್ಕೆ ಪೂರಕವೆಂಬಂತೆ ಸರ್ಕಾರದ ಸಚಿವರು ಈಗ ನಡೆದುಕೊಂಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
