ಬೆಂಗಳೂರು: ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತಎಣಿಕೆ ಪ್ರಕ್ರಿಯೆ ಇಂದು (ನವೆಂಬರ್ 2) ನಡೆದಿದೆ. ಹಾವೇರಿಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ಎರಡು ಕ್ಷೇತ್ರಗಳ ಫಲಿತಾಂಶ ಇದೀಗ ಹೊರಬಿದ್ದಿದೆ. ಪೈಪೋಟಿಗೆ ಬಿದ್ದು ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇಂದು ಮತದಾರರ ನಿರ್ಧಾರವನ್ನು ಪಡೆದುಕೊಂಡಿದ್ದಾರೆ. ಅದರಂತೆ, ಹಾನಗಲ್ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು ಲಭಿಸಿದೆ. ಬಿಜೆಪಿಯ ರಮೇಶ ಭೂಸನೂರ 31,185 ಮತಗಳ ಅಂತರದಿಂದ ವಿಜಯ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,865 ಮತ ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಲಭ್ಯವಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳಿಗೆ ತೃಪ್ತಿಯಾಗಬೇಕಾಗಿ ಬಂದಿದೆ. ನೋಟಾಗೆ 1,031 ಮತಗಳ ಚಲಾವಣೆ ಆಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾಡಲಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶ್ರೀನಿವಾಸ ಮಾನೆಗೆ ಜಯ ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ 7,373 ಮತಗಳ ಅಂತರದಿಂದ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಮಾನೆಗೆ 87,490 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 80,117 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ಗೆ ಕೇವಲ 927 ಮತಗಳು ಸಿಕ್ಕಿವೆ. ನೋಟಾಗೆ 529 ಮತಗಳ ಚಲಾವಣೆ ಆಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?
ಇದನ್ನೂ ಓದಿ: ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ