ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅಸ್ತು: ಇಲ್ಲಿದೆ ಮಾಹಿತಿ

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಶಿವಮೊಗ್ಗದಲ್ಲಿನ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ, ದೇವನಹಳ್ಳಿ-ವಿಜಯಪುರ ರಸ್ತೆ ನಿರ್ಮಾಣ, ಬೆಂಗಳೂರಿನಲ್ಲಿ ಹೊಸ ವಸತಿ ಸಮುಚ್ಚಯಗಳು, ಮತ್ತು ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅಸ್ತು: ಇಲ್ಲಿದೆ ಮಾಹಿತಿ
ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅಸ್ತು: ಇಲ್ಲಿದೆ ಮಾಹಿತಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2024 | 4:43 PM

ಬೆಂಗಳೂರು, ಅಕ್ಟೋಬರ್​​ 28: ಇಂದು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದ್ದು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್​.ಕೆ.ಪಾಟೀಲ್​, 30 ವಿಷಯಗಳನ್ನು ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸಚಿವ ಸಂಪುಟ ನಿರ್ಧಾರಗಳು 

  • ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML)ನಲ್ಲಿ ರಾಜ್ಯ ಸರ್ಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು 49% ರಿಂದ 90%ಕ್ಕೆ ಹೆಚ್ಚಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಸುಬ್ಬರಾಯನ್ ಬಿ.ಆರ್.- ನಿವೃತ್ತ ಕೆ.ಎ.ಟಿ. ಸದಸ್ಯರು ಇವರಿಗೆ ಹಂಚಿಕೆಯಾಗಿರುವ ಸ‌ರ್.ಎಂ. ವಿಶ್ವೇಶ್ವರಯ್ಯ 6ನೇ ಬ್ಲಾಕ್ ಬಡಾವಣೆಯ 15+24 ಮೀ ಅಳತೆಯ ನಿವೇಶನಕ್ಕೆ ಬಡ್ಡಿ ಮೊತವನ್ನು ಪಾವತಿಸಿಕೊಂಡು, ವಿಶೇಷ ಪ್ರಕರಣವೆಂದು ಪರಿಗಣಿಸಿ, ವಿಳಂಬ ಮನ್ನಾ ಮಾಡಿ ಸದರಿ ನಿವೇಶನವನ್ನು ನೋಂದಾಯಿಸಿಕೊಡಲು ಕ್ಯಾಬಿನೆಟ್ ಅನುಮೋದಿಸಿದೆ.
  • ನೂತನ ಪ್ರವಾಸೋದ್ಯಮ ನೀತಿ-2024, ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ, ಅನುಮೋದನೆ ನೀಡಲಾಗಿದೆ. ಏರ್​ಪೋರ್ಟ್​ ಅಭಿವರದ್ಧಿ 27.44 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ.
  • ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್​-ಮಾಲೂರು ಗಡಿವರೆಗೆ ಹೈಬ್ರಿಡ್ ಮಾದರಿಯಲ್ಲಿ 110 ಕಿಲೋ ಮೀಟರ್​ ಉದ್ದದ ರಸ್ತೆ ಅಭಿವೃದ್ಧಿ. 3190.00 ಕೋಟಿ ರೂ. ಮೊತ್ತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಅನುಮೋದಿಸಲಾಗಿದೆ.

ಇದನ್ನೂ ಓದಿ: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಲು ಸಿದ್ದರಾಮ್ಯಯ ನೇತೃತ್ವದ ಸಚಿವ ಸಂಪುಟ ತೀರ್ಮಾನ

  • ಕರ್ನಾಟಕ ಗೃಹ ಮಂಡಳಿಯ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸೂರ್ಯನಗರ 1ನೇ ಹಂತದ ನಿವೇಶನ ಸಂಖ್ಯೆ: 953 ಮತ್ತು 454, 455ರಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಬಹುಮಹಡಿ ವಸತಿ ಸಮುಚ್ಚಯಗಳನ್ನು (50 ಮತ್ತು 40 ಫ್ಲಾಟ್‌ಗಳು) ನಿರ್ಮಿಸುವ ಒಟ್ಟು ರೂ. 101 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ 19 ಸ್ವಾಧೀನದಾರರನ್ನು ಸ್ಥಳಾಂತರಿಸಲಾಗಿತ್ತು. ಇವರ ಪುನರ್ ವಸತಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದಲ್ಲಿ 33-24 ಎಕರೆ ಜಮೀನನ್ನು‌ ಮಂಜೂರು ಮಾಡಲಾಗಿದ್ದು, ಪ್ರತಿ ಕುಟುಂಬಕ್ಕೆ 2 ಎಕರೆ ಸಾಗುವಳಿಗಾಗಿ ಹಾಗೂ 4 ಗುಂಟೆ ವಸತಿಗಾಗಿ ಉಚಿತವಾಗಿ ಮಂಜೂರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
  • ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಒಟ್ಟು ರೂ. 14.24 ಕೋಟಿ ರೂ. ಅಂದಾಜು ಮೊತ್ತದ ‘ಓದು ಕರ್ನಾಟಕ’ ಚಟುವಟಿಕೆಗೆ ಕ್ಯಾಬಿನೆಟ್ ಅನುಮೋದಿಸಿದೆ.
  • ಶಾಲಾ ಶಿಕ್ಷಣ ಇಲಾಖೆಯ 33 ಮಂದಿ “ಗ್ರೇಡ್-1- ಬಿ ವೃಂದದ ‘ವಿಷಯ ಪರಿವೀಕ್ಷಕರು (ವೃತ್ತಿ ಶಿಕ್ಷಣ)’ ಹುದ್ದೆಗೆ ದಿನಾಂಕ: 28.04.2024 ಆದೇಶದಲ್ಲಿ ನಿಗದಿಪಡಿಸಿರುವ ನೇಮಕಾತಿ ವಿಧಾನವನ್ನು ಅನುಸರಿಸಿ ಪದೋನ್ನತಿ ನೀಡುವ ಬಗ್ಗೆ ಅನುಮೋದಿಸಲಾಗಿದೆ.
  • ಸಮಾಜ ಕಲ್ಯಾಣ ಇಲಾಖೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಕ್ಯಾಬಿನೆಟ್ ಮಂಜೂರಾತಿ.

ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ: ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಿದ್ದರಾಮಯ್ಯಗೆ ಶಾಸಕರ ಒತ್ತಾಯ

  • ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಭಾಗವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ನಿವೇಶನ ಮಂಜೂರಾತಿ ಸೌಲಭ್ಯವನ್ನು, ಅದೇ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಬ್ಬರು ನಿವೃತ್ತ ವೈದ್ಯಕೀಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಶುಶೂಷಕರಿಗೂ ವಿಸ್ತರಿಸಿ ಚಾಮರಾಜನಗರ- ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲಾಗಿದೆ.
  • ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಲಬಾಳ ಹಳ್ಳಿ ಹತ್ತಿರದ ಕೃಷ್ಣಾ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ ರೂ. 177.10 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.