ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದೇ ಆದರೆ ಅತಿರೇಕ, ಕಠಿಣ ಕ್ರಮ ಕೈಗೊಳ್ಳುತ್ತೇವೆ: ಸಚಿವ ಎಂಸಿ ಸುಧಾಕರ್

ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಅಧಿಕಾರಿಗಳು ತೆಗೆಸಿದ ಪ್ರಕರಣ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರವಾಗಿ ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದೇನೆಂಬುದು ಇಲ್ಲಿದೆ.

ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದೇ ಆದರೆ ಅತಿರೇಕ, ಕಠಿಣ ಕ್ರಮ ಕೈಗೊಳ್ಳುತ್ತೇವೆ: ಸಚಿವ ಎಂಸಿ ಸುಧಾಕರ್
ಡಾ. ಎಂಸಿ ಸುಧಾಕರ್ ಹಾಗೂ ಮಧು ಬಂಗಾರಪ್ಪ
Edited By:

Updated on: Apr 18, 2025 | 3:13 PM

ಬೆಂಗಳೂರು, ಏಪ್ರಿಲ್ 18: ಶಿವಮೊಗ್ಗ ನಗರದ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ (CET Exam) ಬರೆಯಲು ಬಂದ ಬ್ರಾಹ್ಮಣ (Brahmin) ಸಮುದಾಯದ ವಿದ್ಯಾರ್ಥಿಯ ಜನಿವಾರ (Sacred Thread) ಹಾಗೂ ಕಾಶಿ ದಾರವನ್ನು ಬಿಚ್ಚಿಸಿದ ಘಟನೆ ಕರ್ನಾಟಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದೀಗ ಆ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಕೇಂದ್ರದಲ್ಲಿ ಆ ರೀತಿ ಆಗಿದ್ದರೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆಗಳಿಗೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ಘಟನೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು, ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಆ ರೀತಿ ಆಗಿದ್ದು ಸತ್ಯವೇ ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆ. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋವಿಸುವ ಉದ್ದೇಶ ನಮ್ಮದಲ್ಲ ಎಂದು ಸುಧಾಕರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಕ್ರಮಕ್ಕೆ ಸೂಚಿಸುತ್ತೇವೆ: ಮಧು ಬಂಗಾರಪ್ಪ

ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿ ಜನಿವಾರ ತೆಗೆಸಿದ ಆರೋಪ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ವಿಚಾರ ತಿಳಿದುಕೊಂಡಿದ್ದೇವೆ. ಈ ಬಗ್ಗೆ ನಿರ್ದೇಶನ ಕೊಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸುವೆ. ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ
CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು
ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಕೋಲಾಹಲ: ಇಲ್ಲಿದೆ ಇನ್​ಸೈಡ್ ಡಿಟೇಲ್ಸ್
ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿಯಲ್ಲಿ ಒಳಪಂಗಡ ಗೊಂದಲ
ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್​

ಏತನ್ಮಧ್ಯೆ, ಘಟನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಕರೆ ನೀಡಿದ್ದಾರೆ.

ಪುನೀತ್ ಕೆರೆಹಳ್ಳಿ ಫೇಸ್​​ಬುಕ್ ಸಂದೇಶ

ಉಪನಯನ ಮಾಡಿ ಹಾಕಿರುವ ಜನಿವಾರಕ್ಕೂ ಸಿಇಟಿ ಪರೀಕ್ಷೆಗೂ ಏನು ಸಂಬಂಧ? ತೀರ್ಥಹಳ್ಳಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಹಿಂದೂ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಹಾಕಿರುವುದು ನಮ್ಮ ಧಾರ್ಮಿಕ ಭಾವನೆಗೆ ದಕ್ಕೆ ತಂದಿದೆ. ಈ ನೆಡೆಯ ವಿರುದ್ಧ ಪ್ರತಿಯೊಬ್ಬ ಹಿಂದೂಗಳು ಬೀದಿಗೆ ಇಳಿದು ಪ್ರತಿಭಟಿಸಬೇಕಾಗಿದೆ ಎಂದು ಪುನೀತ್ ಕೆರೆಹಳ್ಳಿ ಕರೆ ನೀಡಿದ್ದಾರೆ.

ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ: ವಿಜಯೇಂದ್ರ ಆಗ್ರಹ

ಬೀದರ್​​ನಲ್ಲಿ ಕೂಡ ಜನಿವಾರ ಧರಿಸಿ ಬಂದಿದ್ದಕ್ಕೆ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಬಿಡದ ಘಟನೆ ನಡೆದಿದೆ. ಈ ಬಗ್ಗೆ ಹಾಗೂ ಶಿವಮೊಗ್ಗ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖಂಡಿಸಿದ್ದು, ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

Bidar Student

ಬೀದರ್​​ನಲ್ಲಿ ಸಿಇಟಿ ಪರೀಕ್ಷೆ ವಂಚಿತನಾದ ವಿದ್ಯಾರ್ಥಿ

ಬೀದರ್​ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದು ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ,ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯ. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ. ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಇಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯ ಎಂದು ವಿಜಯೇಂದ್ರ ಹೇಳಿದ್ದಾರೆ.

ಅಲ್ಲದೆ, ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವುದು ನಿಷಿದ್ಧ. ಆದರೆ ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು, ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು. ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಕಿಡಿ ಕಾಡಿದ್ದಾರೆ.

ಇದನ್ನೂ ಓದಿ: CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು: ಆಕ್ರೋಶ

ಮುಖ್ಯಮಂತ್ರಿಗಳು ಈ ಸಂಬಂಧವಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 am, Fri, 18 April 25

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us