ಸಿಇಟಿ ಪರೀಕ್ಷೆ: ಜನಿವಾರ ತೆಗೆಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಒತ್ತಾಯ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆಘಾತಕ್ಕೊಳಗಾದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವಂತೆ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ. ಈ ವಿಚಾರವಾಗಿ ನಾಳೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಶಾಸಕ ಸುರೇಶ್ ಕುಮಾರ್ ಕೂಡ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ.

ಸಿಇಟಿ ಪರೀಕ್ಷೆ: ಜನಿವಾರ ತೆಗೆಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಒತ್ತಾಯ
ಜನಿವಾರ ವಿವಾದ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Apr 27, 2026 | 7:25 AM

ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಸಿಇಟಿ (KCET) ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ (Janivara) ತೆಗೆಸಿರುವುದು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಲು ‘ಗ್ರೇಸ್ ಮಾರ್ಕ್ಸ್’ ನೀಡಬೇಕು ಅಥವಾ ‘ಮರು ಪರೀಕ್ಷೆ’ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಿಇಟಿ ಪರೀಕ್ಷೆಯ ಮೊದಲ ದಿನವೇ ಭೌತಶಾಸ್ತ್ರ (Physics) ಪರೀಕ್ಷೆಯ ವೇಳೆ ಹಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ. ಈ ಕೃತ್ಯವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದೆ ಎಂದು ಬ್ರಾಹ್ಮಣ ಮಹಾಸಭಾ ಹೇಳಿದೆ.

ಜನಿವಾರ ತೆಗೆಸಿದ ಆಘಾತ ಮತ್ತು ಒತ್ತಡದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ. ಇದು ಅವರ ರ್ಯಾಂಕಿಂಗ್ ಮೇಲೆ ಹೊಡೆತ ಬೀಳಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮನವಿ ಸಲ್ಲಿಸಲಾಗಿದೆ.

ಶಾಸಕ ಸುರೇಶ್ ಕುಮಾರ್ ಬೇಸರ

ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ. ಜನಿವಾರ ಕತ್ತರಿಸುವುದು, ಕಿವಿಯೋಲೆ ತೆಗೆಸುವುದು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತದೆ. ಕಳೆದ ವರ್ಷವೇ ಹೈಕೋರ್ಟ್‌ನಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಭರವಸೆ ನೀಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಜನಿವಾರದ ಬಗ್ಗೆ ಸ್ಪಷ್ಟವಾದ ಎಸ್‌ಒಪಿ (SOP) ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಗೆ ಸಜ್ಜಾದ ಬ್ರಾಹ್ಮಣ ಮಹಾಸಂಘ

ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಹಕ್ಕು ಮತ್ತು ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ನಾಳೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಕೃಪಾಂಕ (Grace Marks) ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us