2024-25ನೇ ಶೈಕ್ಷಣಿಕ ವರ್ಷದಿಂದ ಕರ್ನಾಟದಲ್ಲಿ ಎನ್‌ಇಪಿ ಇರಲ್ಲ; ಸಿಎಂ ಸಿದ್ದರಾಮಯ್ಯ ಘೋಷಣೆ
Siddaramaiah Statement on NEP; ಎನ್‌ಇಪಿ ಅನ್ನು ರದ್ದುಗೊಳಿಸಲು ಕೆಲವು ತಯಾರಿ ಅಗತ್ಯವಿದೆ. ಈ ವರ್ಷ ಅದಕ್ಕೆ ಸಮಯ ಸಿಕ್ಕಿರಲಿಲ್ಲ. ಚುನಾವಣೆ ಮುಗಿದು ನಮ್ಮ ಸರ್ಕಾರ ಬರುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ವರ್ಷ ಎನ್‌ಇಪಿಯನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೋಮವಾರ ಘೋಷಿಸಿದ್ದಾರೆ. ಕೆಪಿಸಿಸಿ ನೂತನ ಕಟ್ಟಡದಲ್ಲಿ ನಡೆದ ಸರ್ವಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರವು ಪರಿಚಯಿಸಿದ ಎನ್‌ಇಪಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ, ಅವರು ಮೊದಲ ಬಾರಿಗೆ ಎನ್‌ಇಪಿ ರದ್ದತಿ ಬಗ್ಗೆ ಅಧಿಕೃತ ಘೋಷಣೆ ಮಾಡಿದಂತಾಗಿದೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಎನ್‌ಇಪಿಯನ್ನು ರದ್ದುಪಡಿಸುವುದಾಗಿ ಭರವಸೆ ನೀಡಿತ್ತು. ಬದಲಿಗೆ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದಾಗಿ ಹೇಳಿತ್ತು.
ಎನ್‌ಇಪಿ ಅನ್ನು ರದ್ದುಗೊಳಿಸಲು ಕೆಲವು ತಯಾರಿ ಅಗತ್ಯವಿದೆ. ಈ ವರ್ಷ ಅದಕ್ಕೆ ಸಮಯ ಸಿಕ್ಕಿರಲಿಲ್ಲ. ಚುನಾವಣೆ ಮುಗಿದು ನಮ್ಮ ಸರ್ಕಾರ ಬರುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ವರ್ಷ ಎನ್‌ಇಪಿಯನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2021 ರ ಆಗಸ್ಟ್ನಲ್ಲಿ, ಬಿಜೆಪಿ ಅಧಿಕಾರದಲ್ಲಿದ್ದಾಗ, ಕರ್ನಾಟಕವು ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಿತ್ತು. ಆ ಮೂಲಕ ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ ಎನ್‌ಇಪಿಯನ್ನು ಟೀಕಿಸಿದ್ದು, ಅದನ್ನು ‘ನಾಗ್ಪುರ ಶಿಕ್ಷಣ ನೀತಿ’ ಎಂದು ವ್ಯಂಗ್ಯವಾಡಿತ್ತು.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಹ ಎನ್‌ಇಪಿ ವಿರುದ್ಧ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೇರೆ ಯಾವುದೇ ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸದೆ, ಬಿಜೆಪಿಯು ಅದನ್ನು ಮೊದಲು ಕರ್ನಾಟಕದಲ್ಲಿ ಜಾರಿಗೆ ತಂದು ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ಮಾತಾಡುತ್ತಿದ್ದಾರೆ: ಸಿಎಂ ಸಿದ್ಧರಾಮಯ್ಯ ಕಿಡಿ
ಎನ್‌ಇಪಿ ರದ್ದುಗೊಳಿಸಿ ಎಸ್ಇಒಇ ಅನುಷ್ಠಾನಗೊಳಿಸುವ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಹಲವು ಸಭೆಗಳನ್ನು ನಡೆಸಿತ್ತು. ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೆ ಹಾಗೂ ತಜ್ಞರ ಜತೆಗೂ ಸಮಾಲೋಚನೆ ನಡೆಸಿತ್ತು. ಕುಲಪತಿಗಳ ಹಾಗೂ ತಜ್ಞರ ಜತೆಗಿನ ಸಭೆಯ ವೇಳೆ, ಎನ್ಇಪಿಯಲ್ಲಿರುವ ಕೆಲವು ಅಂಶಗಳನ್ನು ಎಸ್ಇಪಿಯಲ್ಲೂ ಮುಂದುವರಿಸಿಕೊಂಡು ಹೋಗುವುದು ಉತ್ತಮ ಎಂಬ ಸಲಹೆಗಳು ವ್ಯಕ್ತವಾದ ಬಗ್ಗೆ ವರದಿಯಾಗಿತ್ತು.
ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಕೂಡ ಹಲವು ಸುತ್ತಿನ ಸಭೆ ನಡೆಸಿ ಎನ್‌ಇಪಿ ರದ್ದತಿ ಮತ್ತು ಎಸ್ಇಪಿ ಜಾರಿಯ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅಂತಿಮವಾಗಿ ಇದೀಗ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಮುಂದಿನ ವರ್ಷದಿಂದ ಎಸ್ಇಪಿ ಜಾರಿ ಬಹುತೇಕ ಖಚಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ