ಕೇಂದ್ರದ ಅನುದಾನಕ್ಕಾಗಿ ಅಗತ್ಯಬಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಕೇವಲ ಶೇ 14 ರಷ್ಟು ಮಾತ್ರ ವಾಪಸ್ ಬರುತ್ತಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಮಾಡಿದ ಸುಮಾರು 17,000 ಕೋಟಿ ರೂಪಾಯಿಗಳ ವಿಶೇಷ ಅನುದಾನವೂ ಬಿಡುಗಡೆಯಾಗಿಲ್ಲ. ನ್ಯಾಯಕ್ಕಾಗಿ ಕೋರ್ಟ್‌ಗೆ ಹೋಗಲೂ ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು, ಅಕ್ಟೋಬರ್ 3: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಹಣದ ಹಂಚಿಕೆ ಮತ್ತು ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕದಿಂದ (Karnataka) ಕೇಂದ್ರಕ್ಕೆ ಪ್ರತಿ ವರ್ಷ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹರಿದು ಹೋಗುತ್ತದೆ. ಆದರೆ, ರಾಜ್ಯಕ್ಕೆ ವಾಪಸ್ ಬರುವುದು ಕೇವಲ ಶೇ 14 ಮಾತ್ರ. ಪ್ರತಿ ಒಂದು ರೂಪಾಯಿ ತೆರಿಗೆಗೆ, ರಾಜ್ಯಕ್ಕೆ ಕೇವಲ 14 ಪೈಸೆ ಮಾತ್ರ ಮರಳಿ ಸಿಗುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಶೇ 17-18 ಸಿಗುವಾಗ, ಕರ್ನಾಟಕಕ್ಕೆ ಕೇವಲ ಶೇ 3.5 ರಷ್ಟು ಸಿಗುವುದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ್ದ ವಿಶೇಷ ಅನುದಾನ, ಕೆರೆಗಳ ಪುನರುಜ್ಜೀವನಕ್ಕಾಗಿ 3,000 ಕೋಟಿ ರೂ., ಪೆರಿಫೆರಲ್ ರಿಂಗ್ ರೋಡ್‌ಗೆ 3,000 ಕೋಟಿ ರೂ., ಮತ್ತು ಅಪ್ಪರ್ ಭದ್ರಾ ಯೋಜನೆಗೆ 5,000 ಕೋಟಿ ರೂಪಾಯಿ ಸೇರಿದಂತೆ ಸುಮಾರು 17,000 ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರ ಸರ್ಕಾರವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂಲಕ ರದ್ದುಗೊಳಿಸಿದೆ ಅಥವಾ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಡೆ, ಉದ್ದೇಶಪೂರ್ವಕವಾಗಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಅವರು ಹೇಳಿದ್ದಾರೆ. ಈ ಅನುದಾನವನ್ನು ಪಡೆಯಲು ಅಗತ್ಯ ಬಿದ್ದರೆ ಕೋರ್ಟ್ ಮೆಟ್ಟಿಲೇರಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೊಸ ಮನೆ ಹೇಗಿದೆ ನೋಡಿ
ಈ ಹಿಂದೆ ಇದೇ ರೀತಿಯ ಸಮಸ್ಯೆ ಎದುರಾದಾಗ ಕರ್ನಾಟಕವು ಕೋರ್ಟ್ ಮೂಲಕ ತನ್ನ ಹಕ್ಕನ್ನು ಪಡೆದುಕೊಂಡಿತ್ತು ಎಂಬುದನ್ನು ಪತ್ರಕರ್ತರು ನೆನಪಿಸದಾಗ ಪ್ರತಿಕ್ರಿಯಿಸಿದ ಅವರು, ಈ ಬಾರಿಯೂ ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನವನ್ನು ಪಡೆಯಲು ಅಗತ್ಯ ಬಿದ್ದರೆ ಕೋರ್ಟ್ ಮೆಟ್ಟಿಲೇರಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಮೋದಿಯನ್ನು ಹೊಗಳೋದಷ್ಟೇ ಬಿಜೆಪಿ ಸಂಸದರ ಕೆಲಸ: ಸಿದ್ದರಾಮಯ್ಯ ವಾಗ್ದಾಳಿ
ಕರ್ನಾಟಕದ ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಧಾನಿ ನರೇಂದ್ರ ಮೋದಿ ಎದುರು ಮಾತನಾಡುವುದಿಲ್ಲ. ಮೋದಿಯನ್ನು ಹೊಗುಳುವುದಷ್ಟೇ ರಾಜ್ಯ ಬಿಜೆಪಿ ಸಂಸದರ ಕೆಲಸ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.



