ಮೋದಿ, ನನ್ನ ಸಂಬಂಧ ಚೆನ್ನಾಗಿದೆ: ಪ್ರವಾಹ ಪರಿಹಾರಕ್ಕೆ ಒತ್ತಾಯ ಮಾಡ್ತೇನೆ ಎಂದ ಹೆಚ್ಡಿ ದೇವೇಗೌಡ
ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮೋದಿ ಮತ್ತು ನಮ್ಮದು 10 ವರ್ಷದಿಂದ ಇರುವ ಸಂಬಂಧ, ಇದನ್ನು ಯಾರಿಂದಲೂ ಹಾಳು ಮಾಡಲಾಗುವುದಿಲ್ಲ ಎಂದಿದ್ದಾರೆ. ಜೊತೆಗೆ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಗೆ ಪರಿಹಾರಕ್ಕೆ ಒತ್ತಾಯಿಸುವೆ ಎಂದು ಹೇಳಿದ್ದಾರೆ.

ಬೆಂಗಳೂರು, ಅಕ್ಟೋಬರ್ 03: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಯುತ್ತದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ನನ್ನ ನಡುವೆ ಸಂಬಂಧ ಚೆನ್ನಾಗಿದೆ. ನಮ್ಮದು 10 ವರ್ಷದಿಂದ ಇರುವ ಸಂಬಂಧ. ಈ ಸಂಬಂಧ ಹಾಳು ಮಾಡಲು ಯಾರಿಂದಲೂ ಆಗಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಹೇಳಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹದ ವಿಚಾರವಾಗಿ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನಗರದ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಆತಂಕವಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಅಥವಾ ಅಸ್ಸೆಂಬ್ಲಿ ಚುನಾವಣೆಯಲ್ಲೂ ಆತಂಕವಿಲ್ಲ. ಮೋದಿ ಮತ್ತು ನನ್ನ ನಡುವೆ ಸಂಬಂಧ ಚೆನ್ನಾಗಿದೆ ಎಂದಿದ್ದಾರೆ.
ಪ್ರಧಾನಿ ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯಿಸುವೆ ಎಂದ ಹೆಚ್ಡಿಡಿ
ರಾಜ್ಯದಲ್ಲಿ ಉಂಟಾದ ಪ್ರವಾಹ ವಿಚಾರವಾಗಿ ಮಾತನಾಡಿದ ಅವರು, ಅನೇಕ ಹಳ್ಳಿ, ರಸ್ತೆ, ಸೇತುವೆ ಸೇರಿದಂತೆ ಮನೆಗಳು ಹಾನಿಯಾಗಿವೆ. ಮೊದಲ ಬಾರಿಗೆ ಇಂತಹ ಭೀಕರ ನೋವು ತರುವಂತ ಅತಿವೃಷ್ಟಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು, ಸಚಿವರುಗಳಿಗೆ ನಿರ್ದೇಶನ ಸರ್ಕಾರ ಕೊಡಬೇಕು. ನಾಲ್ಕಾರು ಕಡೆ ವೀಕ್ಷಣೆ ಮಾಡುತ್ತೇನೆ. ಪರಿಹಾರ ಕಾರ್ಯ ಏನಾಗಿದೆ ಎಲ್ಲ ತಿಳಿದುಕೊಳ್ಳುತ್ತೇನೆ. ಆ ಬಳಿಕ ಕೇಂದ್ರಕ್ಕೆ ನಾನು ಪತ್ರ ಬರೆಯುತ್ತೇನೆ. ಕುಮಾರಸ್ವಾಮಿ ಈಗಾಗಲೆ ಪತ್ರ ಬರೆದಿದ್ದಾರೆ. ಪ್ರಧಾನಿ ಅವರು ಬಿಡುವಿಲ್ಲದ ಕಾರ್ಯಕ್ರಮದಲ್ಲಿದ್ದಾರೆ. ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಾನೇ ಕಲಬುರಗಿಗೆ ಹೋಗುತ್ತೇವೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದ ಬೆಳೆ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 6 ಜಿಲ್ಲೆಗಳಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದ್ದು ಗೊತ್ತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕೆಲಸ ಮಾಡಬೇಕು. ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸಿ ಸ್ಪಂದಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡ್ತಾರೆ ಎಂದು ಭಾವಿಸುತ್ತೇನೆ ಎಂದರು.
ಇದನ್ನೂ ಓದಿ: ಕೇಂದ್ರದ ಅನುದಾನಕ್ಕಾಗಿ ಅಗತ್ಯಬಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ: ಸಿಎಂ ಸಿದ್ದರಾಮಯ್ಯ
48 ಗಂಟೆಯೊಳಗೆ ಜಿಲ್ಲಾ ಉಸ್ತುವಾರಿ ಸಚಿವರು ಏನ್ ಮಾಡಿದ್ದಾರೆ, ಪರಿಹಾರ ಕೊಟ್ಟಿದ್ದಾರೋ ಇಲ್ಲವೋ ತಿಳಿದು ಮಾತನಾಡಬೇಕು. ಮೂರ್ನಾಲ್ಕು ದಿನದ ಬಳಿಕ ನಾನೇ ಕಲಬುರಗಿಗೆ ಹೋಗಿ ವಾಸ್ತವಾಂಶ ತಿಳಿಯುತ್ತೇನೆ. ಸರ್ಕಾರ ಏನು ಮಾಡಿದೆ, ಏನು ಮಾಡಿಲ್ಲ ಆಮೇಲೆ ಹೇಳುತ್ತೇನೆ ಎಂದಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಹೆಚ್ಡಿಡಿ ಮಾತು
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ 4 ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿಲ್ಲ. ಆರೋಗ್ಯ ಸ್ವಲ್ಪ ಸುಧಾರಿಸಿಕೊಳ್ಳಬೇಕಿತ್ತು. ಈಗ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿದೆ. ವಿದೇಶದಿಂದ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಚುರುಕಾಗಿ ಎಲ್ಲೆಡೆ ಓಡಾಡುತ್ತಿದ್ದಾರೆ. ಅನುಭವಿ ರಾಜಕಾರಣಿ ರೀತಿ ನಿಖಿಲ್ ಕೆಲಸ ಮಾಡುತ್ತಿದ್ದಾರೆ. ನನಗೆ ಮಂಡಿನೋವು ಬಿಟ್ಟರೆ ಬೇರೆ ಏನೂ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಜಿಬಿಎ ಚುನಾವಣೆಯಲ್ಲಿ ಕನಿಷ್ಠ 50-60 ಸ್ಥಾನ ಗೆಲ್ಲಬೇಕು
ಜಿಬಿಎ ಚುನಾವಣೆ ವಿಚಾರವಾಗಿ ಮಾತನಾಡಿದ್ದು, ಜಿಬಿಎ ಚುನಾವಣೆಯಲ್ಲಿ ನಾವು ಕನಿಷ್ಠ 50-60 ಸ್ಥಾನ ಗೆಲ್ಲಬೇಕು. ಅದಕ್ಕಾಗಿ ಸಭೆ ನಡೆಸಲು ತೀರ್ಮಾನ ಮಾಡಿದ್ದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಮಾಡುತ್ತೇವೆ. ಜಿಬಿಎ ಚುನಾವಣೆಯಲ್ಲಿ 50 ಸ್ಥಾನವಾದ್ರೂ ಗೆಲ್ಲುವ ಸಂಕಲ್ಪ ಇದೆ ಎಂದು ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



