AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಅಭಿವೃದ್ಧಿಗೆ ಸಿಎಂ 18 ಸೂತ್ರ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ ‘ಬೇಡಿಕೆಗಳ ಪಟ್ಟಿಯಲ್ಲಿ’ ಏನೇನಿದೆ?

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಇದರಲ್ಲಿ ಕೋಲಾರ ರೈಲ್ವೆ ಫ್ಯಾಕ್ಟರಿ, ಹೈ-ಸ್ಪೀಡ್ ರೈಲು, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುಮೋದನೆ ಮತ್ತು ರಾಷ್ಟ್ರೀಯ ಮಾನ್ಯತೆ ನೀಡಲು ಮನವಿ ಮಾಡಲಾಗಿದೆ. ಅಲ್ಲದೆ, ಜಲ ಜೀವನ್ ಮಿಷನ್, 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರದ ಸಹಕಾರ ಕೋರಲಾಗಿದೆ.

ಕರ್ನಾಟಕದ ಅಭಿವೃದ್ಧಿಗೆ ಸಿಎಂ 18 ಸೂತ್ರ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ 'ಬೇಡಿಕೆಗಳ ಪಟ್ಟಿಯಲ್ಲಿ' ಏನೇನಿದೆ?
ಸಿದ್ದರಾಮಯ್ಯ ಬೇಡಿಕೆ
ಅಕ್ಷಯ್​ ಪಲ್ಲಮಜಲು​​
|

Updated on: Apr 15, 2026 | 11:33 AM

Share

ಬೆಂಗಳೂರು, ಏ.15: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಹೆಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು, ಈ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಯಾವೆಲ್ಲ ಮನವಿಗಳನ್ನು ಮಾಡಿದ್ದಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.

ಪ್ರಮುಖ 18 ಬೇಡಿಕೆಗಳು:

  • ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ: 1,123 ಎಕರೆ ಭೂಮಿ ನೀಡಿದ್ದರೂ ಅನುಷ್ಠಾನಗೊಳ್ಳದ ಈ ಯೋಜನೆಯ ಪುನರುಜ್ಜೀವನಕ್ಕೆ ಮನವಿ.
  • ಹೈ-ಸ್ಪೀಡ್ ರೈಲು ವಿಸ್ತರಣೆ: ಬೆಂಗಳೂರು-ಮೈಸೂರು ವಿಭಾಗವನ್ನು ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸೇರಿಸಲು ಕೋರಿಕೆ.
  • ಸಬರ್ಬನ್ ರೈಲು ಮತ್ತು ಮುಂಬೈ ಕಾರಿಡಾರ್: ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು-ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ.
  • ಜಲ ಜೀವನ್ ಮಿಷನ್ (JJM): ಕೇಂದ್ರದಿಂದ ಬರಬೇಕಾದ ₹17,554 ಕೋಟಿ ಬಾಕಿ ಹಣ ಬಿಡುಗಡೆಗೆ ಒತ್ತಾಯ.
  • 15ನೇ ಹಣಕಾಸು ಆಯೋಗದ ಅನುದಾನ: ಗ್ರಾಮ ಪಂಚಾಯತ್‌ಗಳಿಗೆ ಬರಬೇಕಾದ ₹2,860 ಕೋಟಿ ಅನುದಾನ ಬಿಡುಗಡೆಗೆ ಮನವಿ.
  • ರಾಷ್ಟ್ರೀಯ ಹೆದ್ದಾರಿ ಯೋಜನೆಗಳು: ಕಳೆದ 12 ವರ್ಷಗಳಿಂದ ಬಾಕಿ ಇರುವ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಕೋರಿಕೆ.
  • ಕಂದಾಯ ಕೊರತೆ ಅನುದಾನ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ಬಿಡುಗಡೆಗೆ ವಿನಂತಿ.
  • ಬೆಂಗಳೂರಿಗೆ ವಿಶೇಷ ಪ್ಯಾಕೇಜ್: ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ.
  • ಮೇಕೆದಾಟು ಯೋಜನೆ: ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ಶೀಘ್ರವಾಗಿ ಕೇಂದ್ರದ ಅನುಮೋದನೆಗೆ ಒತ್ತಾಯ.
  • ಭದ್ರಾ ಮೇಲ್ದಂಡೆ ಯೋಜನೆ: ಈ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡಿ, ಘೋಷಿತ ₹5,300 ಕೋಟಿ ಸಹಾಯಧನ ಬಿಡುಗಡೆಗೆ ಮನವಿ.
  • ಕೃಷ್ಣಾ ಮೇಲ್ದಂಡೆ ಯೋಜನೆ (UKP-III): ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಮತ್ತು ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮನವಿ.
  • ಮಹದಾಯಿ (ಕಳಸಾ ನಾಲಾ): ಕುಡಿಯುವ ನೀರಿನ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರ ಅನುಮತಿ ಕೊಡಿಸಲು ವಿನಂತಿ.
  • ನದಿಗಳ ಜೋಡಣೆ: ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ಯೋಜನೆಗಳಲ್ಲಿ ಕರ್ನಾಟಕಕ್ಕೆ 40-45 TMC ನೀರು ಹಂಚಿಕೆಗೆ ಒತ್ತಾಯ.
  • ಮೀಸಲಾತಿ ರಕ್ಷಣೆ: ರಾಜ್ಯದ 56% ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ ಸೇರಿಸಲು ಮನವಿ.
  • ST ಪಟ್ಟಿಗೆ ಸೇರ್ಪಡೆ: ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕೋರಿಕೆ.
  • ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಆರ್ಟಿಕಲ್ 371(J) ಅಡಿಯಲ್ಲಿ ವಾರ್ಷಿಕ ₹5,000 ಕೋಟಿ ಅನುದಾನ ಮತ್ತು ಪ್ರತಿ ಜಿಲ್ಲೆಯಲ್ಲೂ ಸಾರ್ವಜನಿಕ ವಲಯದ ಉದ್ಯಮ (PSU) ಸ್ಥಾಪನೆಗೆ ಮನವಿ.
  • ಶರಾವತಿ ಪಂಪ್ಡ್ ಸ್ಟೋರೇಜ್: 2,000 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಶೀಘ್ರ ಅನುಮತಿಗೆ ಕೋರಿಕೆ.
  • ರಾಯಚೂರಿನಲ್ಲಿ ಏಮ್ಸ್ (AIIMS): ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿಗೆ ಮನವಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us