ಕಾಂಗ್ರೆಸ್ನಲ್ಲಿ ತಣಿಯದ ಆಂತರಿಕ ಬೇಗುದಿ: ಉಸ್ತುವಾರಿ ಸಚಿವರ ವಿರುದ್ಧ ಸಾಲು ಸಾಲು ಶಾಸಕರ ಸಿಟ್ಟು, ಆಕ್ರೋಶ
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಂಘರ್ಷ ಹೆಚ್ಚುತ್ತಿದೆ. ಕೆಲವು ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಆನಂದ್ ಅವರು ಸಚಿವ ರಾಜಣ್ಣ ವಿರುದ್ಧ ನೇರವಾಗಿ, ಬಹಿರಂಗವಾಗಿ ಟೀಕೆ ಮಾಡಿದ್ದಾರೆ. ಈ ಅಸಮಾಧಾನವು ಪಕ್ಷದ ಆಂತರಿಕ ಸಮಸ್ಯೆಗಳನ್ನು ಜಗಜ್ಜಾಹೀರಾಗಿಸಿರುವುದರ ಜತೆಗೆ ಪಕ್ಷದ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದೆ.
![ಕಾಂಗ್ರೆಸ್ನಲ್ಲಿ ತಣಿಯದ ಆಂತರಿಕ ಬೇಗುದಿ: ಉಸ್ತುವಾರಿ ಸಚಿವರ ವಿರುದ್ಧ ಸಾಲು ಸಾಲು ಶಾಸಕರ ಸಿಟ್ಟು, ಆಕ್ರೋಶ](https://images.tv9kannada.com/wp-content/uploads/2025/01/kn-rajanna-2.jpg?w=1280)
ಬೆಂಗಳೂರು, ಜನವರಿ 29: ಕಾಂಗ್ರೆಸ್ ಪಕ್ಷದಲ್ಲಿ ಕುದಿಯುತ್ತಿರುವ ಅಸಮಾಧಾನ ಪ್ರೆಷರ್ ಕುಕ್ಕರ್ ತರಹ ಆಗಿದೆ. ಒತ್ತಡ ಕಡಿಮೆಯಾಗುತ್ತಿಲ್ಲ, ಸಿಟ್ಟು ಸೆಡವು ತಣಿಯುತ್ತಿಲ್ಲ. ಆಕ್ರೋಶ ಕಡಿಮೆ ಮಾಡುವ ದಾರಿ ಕಾಣದೇ ಉನ್ನತ ನಾಯಕರು ಹೈರಾಣಾಗಿದ್ದಾರೆ. ಸಚಿವರ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಹಾಗೂ ಅಸಮಾಧಾನ ಹೊರಹಾಕುತ್ತಿರುವುದು ವಿರೋಧ ಪಕ್ಷದ ಶಾಸಕರಲ್ಲ. ಸ್ವಪಕ್ಷೀಯರೇ.
ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರೇ ಆಕ್ರೋಶ, ಅಸಮಾಧಾನ, ಸಿಟ್ಟು, ಸಿಡುಕು ಹೊರಹಾಕತೊಡಗಿದ್ದಾರೆ. ಉಸ್ತುವಾರಿ ಸಚಿವರ ಮೇಲಂತೂ ಶಾಸಕರ ಆಕ್ರೋಶ ತೀವ್ರವಾಗಿರುವುದು ಅವರದೇ ಮಾತುಗಳ ಮೂಲಕ ಬಯಲಾಗಿದೆ.
ಸಚಿವ ರಾಜಣ್ಣ ವಿರುದ್ಧವೇ ಕಡೂರು ಶಾಸಕ ಆನಂದ್ ನೇರವಾಗಿ ಸಿಟ್ಟು ಹೊರಹಾಕಿದ್ದಾರೆ. ಸಚಿವ ರಾಜಣ್ಣ ಸೇರಿದಂತೆ ಇತರ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಹಿರಂಗವಾಗಿ ಟೀಕಿಸಿದ್ದಾರೆ. ರಾಜಣ್ಣ ಸೇರಿದಂತೆ ನಾಲ್ವರು ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಆನಂದ್, ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜಣ್ಣ ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ. ಇದನ್ನು ಬಿಟ್ಟು ರಾಜಣ್ಣ ಮೊದಲು ತಮಗೆ ನೀಡಿರುವ ಖಾತೆಯನ್ನು ಸರಿಯಾಗಿ ನಿಭಾಯಿಸುವುದನ್ನ ಕಲಿತುಕೊಳ್ಳಲಿ. ಸಹಕಾರ ಇಲಾಖೆ ದೊಡ್ಡ ಖಾತೆ. ತಮ್ಮ ಖಾತೆಯನ್ನು ನಿಭಾಯಿಸುವುದು ಬಿಟ್ಟು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.
ನಾಲ್ವರು ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನವಿದೆ. ನಾಲ್ವರು ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ರಾಜ್ಯದ ಜನರಲ್ಲೂ ಇದೆ. ಕೆಲ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರಲ್ಲಿ ಅಪಸ್ವರ ಇದೆ ಎಂದು ಬಹಿರಂಗವಾಗಿ ಆನಂದ್ ಕಿಡಿ ಕಾರಿದ್ದಾರೆ.
ನಾಲ್ವರು ಉಸ್ತುವಾರಿ ಸಚಿವರ ವಿರುದ್ಧ ಹೆಚ್ಚಿದ ಆಕ್ರೋಶ
ಕಾಂಗ್ರೆಸ್ ಶಾಸಕರು ಸಚಿವರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವುದು ಇದೇ ಮೊದಲಲ್ಲ. ಸಚಿವರ ಮುಂದೆ ತಮಗೆ ಗೌರವ ಸಿಗದ ಬಗ್ಗೆ ನಾಲ್ಕೈದು ಬಾರಿ ಕಾಂಗ್ರೆಸ್ ಶಾಸಕರು ಪ್ರಸ್ತಾಪಿಸಿದ್ದಾರೆ. ಕೋಲಾರ, ಶಿವಮೊಗ್ಗ, ದಾವಣಗೆರೆ ಸೇರಿ ಹಲವು ಉಸ್ತುವಾರಿ ಜಿಲ್ಲೆಗಳ ಸಚಿವರ ಬಗ್ಗೆಯೂ ಕಿರಿಕ್ ನಡೆದಿದೆ. ಹೀಗಾಗಿ ಶಾಸಕಾಂಗ ಸಭೆಯಲ್ಲಿ ಸಚಿವರ ವಿರುದ್ಧ ಮಾತನಾಡಲು ತಮಗೆ ಅವಕಾಶ ಕೊಡಿ ಎಂದು ಶಾಸಕರು ಕೇಳಿದ್ದರೂ ಸಿಎಂ, ಡಿಸಿಎಂ ಎಚ್ಚರ ವಹಿಸಿ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬುಡಕ್ಕೆ ಮುಡಾ ಹಗರಣ: ಇಡಿ, ಲೋಕಾಯುಕ್ತಕ್ಕೆ ದೂರು
ಸದ್ಯ ಕಾಂಗ್ರೆಸ್ನಲ್ಲಿ ಸಚಿವರ ನಡುವೆಯೇ ಕೆಲವೊಂದು ಗೊಂದಲಗಳಿದ್ದು, ಅವುಗಳು ಬಗೆಹರಿಯುತ್ತಿಲ್ಲ. ಇದರ ಮಧ್ಯೆ ಶಾಸಕರೂ ಕೂಡ ಸಚಿವರ ವಿರುದ್ದ ಗರಂ ಆಗುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ