
ಬೆಂಗಳೂರು, ಏಪ್ರಿಲ್ 28: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆಯ (Leadership Change) ಕೂಗು ಮತ್ತೆ ಜೋರಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, ಈ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನ ಈಗ ಅಹಿಂದ ಸಚಿವರ ನಿದ್ದೆಗೆಡಿಸಿದೆ. ಸತತ ಸಭೆಗಳ ನಂತರವೂ ಸಿಎಂ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೆ, ಸಿಎಂ ಬಣದ ಸಚಿವರ ರಹಸ್ಯ ಸಭೆಯಲ್ಲಿ ಕೂಡ ಅವರು ಮುಕ್ತವಾಗಿ ಮಾತನಾಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅಹಿಂದ (AHINDA Leaders) ಸಚಿವರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಸಚಿವ ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ ಪ್ರಮುಖ ಅಹಿಂದ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದರು. ರಾಜ್ಯ ರಾಜಕಾರಣದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಈ ನಾಯಕರು ಪ್ರಯತ್ನಿಸಿದರೂ, ಸಿಎಂ ಸಿದ್ದರಾಮಯ್ಯ ಮಾತ್ರ ಮನಬಿಚ್ಚಿ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಸೀಕ್ರೆಟ್ ಮೀಟಿಂಗ್‌ನಲ್ಲೂ ಸಿಎಂ ಕಡೆಯಿಂದ ಯಾವುದೇ ಭರವಸೆ ಸಿಗದ ಕಾರಣ, ಸಿದ್ದರಾಮಯ್ಯ ಬಣದ ಸಚಿವರಿಗೆ ಒಳಗಿಂದೊಳಗೆ ಏನೋ ನಡೆಯುತ್ತಿದೆ ಎಂಬ ಅನುಮಾನ ಶುರುವಾಗಿದೆ.
ಸಿಎಂ ಮೌನದಿಂದ ಕಂಗೆಟ್ಟ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ತುರ್ತಾಗಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಅಹಿಂದ ನಾಯಕರ ಭವಿಷ್ಯವೇನು? ತಮ್ಮ ಸ್ಥಾನಮಾನಗಳು ರಕ್ಷಣೆಯಾಗುತ್ತವೆಯೇ? ಎಂಬ ಬಗ್ಗೆ ಸ್ಪಷ್ಟತೆ ಕೇಳಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಡಿಕೆಶಿಗೆ ನೀಡಿದಂತೆ ತಮಗೂ ಅಧಿಕಾರ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ನಿಂದ ಡಿಕೆ ಶಿವಕುಮಾರ್ಗೆ ಬಿಗ್ ಬರ್ತ್ಡೇ ಗಿಫ್ಟ್ ಸಿಗಲಿದೆ ಎಂಬ ಊಹಾಪೋಹಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ನೀಡಿರುವ ಪ್ರತಿಕ್ರಿಯೆ ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟು ದಿನ ‘‘ಸಿಎಂ ಬದಲಾವಣೆ ಇಲ್ಲ’’ ಎನ್ನುತ್ತಿದ್ದ ಪರಮೇಶ್ವರ್, ಈಗ ‘‘ಹೈಕಮಾಂಡ್ ನಿರ್ಧಾರವೇ ಅಂತಿಮ’’ ಎಂದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ಮೇ 15ರ ಡಿಕೆಶಿ ಹುಟ್ಟುಹಬ್ಬದ ವೇಳೆಗೆ ಹೈಕಮಾಂಡ್ ಏನಾದರೂ ‘ಗಿಫ್ಟ್’ ನೀಡಲಿದೆಯೇ ಎಂಬ ಚರ್ಚೆ ಜೋರಾಗಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ನಾಯಕರು ಈಗಲೇ ದಾಳ ಉರುಳಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ