ಡಿಕೆ ಶಿವಕುಮಾರ್ ವಾಪಸಾಗ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಬಣ ದೆಹಲಿಗೆ! ಕಾಂಗ್ರೆಸ್​ನಲ್ಲಿ ಜೋರಾಯ್ತು ಡೆಲ್ಲಿ ಟೂರ್ ಪಾಲಿಟಿಕ್ಸ್

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ಒಳಗಿಂದೊಳಗೆಯೇ ಮತ್ತೆ ತಾರಕಕ್ಕೇರಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ಹೈಕಮಾಂಡ್ ಕದ ತಟ್ಟಿದ್ದಾರೆ. ಮೇ 4ರ ಪಂಚ ರಾಜ್ಯಗಳ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ದಟ್ಟವಾಗಿವೆ.

ಡಿಕೆ ಶಿವಕುಮಾರ್ ವಾಪಸಾಗ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಬಣ ದೆಹಲಿಗೆ! ಕಾಂಗ್ರೆಸ್​ನಲ್ಲಿ ಜೋರಾಯ್ತು ಡೆಲ್ಲಿ ಟೂರ್ ಪಾಲಿಟಿಕ್ಸ್
ಸಂಗ್ರಹ ಚಿತ್ರ
Image Credit source: tv9
Edited By:

Updated on: Apr 28, 2026 | 6:55 AM

ಬೆಂಗಳೂರು, ಏಪ್ರಿಲ್ 28: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ‘ಕುರ್ಚಿ ಕಿತ್ತಾಟ’ ಈಗ ಮತ್ತೆ ಬಹಿರಂಗಗೊಳ್ಳುವ ಹಾಗೂ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಆಪ್ತ ಬಣ ದೆಹಲಿಗೆ ದೌಡಾಯಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಸಿದ್ದು ಬಣದ ಸಂಚಲನ

ಡಿಕೆಶಿ ಅವರ ಮೂರು ದಿನಗಳ ದೆಹಲಿ ವಾಸ್ತವ್ಯದ ಬೆನ್ನಲ್ಲೇ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಸತೀಶ್ ಜಾರಕಿಹೊಳಿ, ‘ಪಕ್ಷದಲ್ಲಿನ ಗೊಂದಲಗಳನ್ನು ತಕ್ಷಣ ಬಗೆಹರಿಸಿ ಒಂದು ಸ್ಪಷ್ಟತೆ (Clarity) ಕೊಡಿ’ ಎಂದು ಮನವಿ ಮಾಡಿದ್ದಾರೆ. ಇದು ನಾಯಕತ್ವ ಬದಲಾವಣೆಯ ಚರ್ಚೆಗೆ ಹೊಸ ವೇಗ ನೀಡಿದೆ.

ಡಿಕೆಶಿ ಬರ್ತ್‌ಡೇ ಗಿಫ್ಟ್ ನಿರೀಕ್ಷೆ

ಇತ್ತ ‘ಬಂಡೆ’ ಬಣದಲ್ಲಿ ಹೊಸ ಆಶಾಭಾವನೆ ಮೂಡಿದೆ. ಮೇ 15ಕ್ಕೆ ಡಿಕೆ ಶಿವಕುಮಾರ್ ಜನ್ಮದಿನವಿದ್ದು, ಅಷ್ಟರೊಳಗೆ ಹೈಕಮಾಂಡ್‌ನಿಂದ ಶುಭ ಸುದ್ಧಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದಾರೆ. ಶಾಸಕರಾದ ಕುಣಿಗಲ್ ರಂಗನಾಥ್ ಮತ್ತು ಅಶೋಕ್ ಪಟ್ಟಣ್ ಅವರು ಮೇ ಎರಡನೇ ವಾರದಲ್ಲಿ ‘ಸಿಹಿ ಸುದ್ಧಿ’ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೆ ಡಿಕೆಶಿಗೆ ಅವಕಾಶ ಸಿಗಲಿ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ದಾಳ ಉರುಳಿಸಿದ್ದಾರೆ.

ಹೆಚ್‌ಡಿಕೆ ಹೊಸ ಬಾಂಬ್

ಕಾಂಗ್ರೆಸ್‌ನ ಈ ಆಂತರಿಕ ಕಚ್ಚಾಟದ ನಡುವೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಸುಮಾರು 40 ರಿಂದ 50 ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗಲು ಟಿಕೆಟ್ ರೆಡಿ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಅಸ್ಥಿರತೆಯ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದ್ದಾರೆ.

ಮೇ 4ರ ರಿಸಲ್ಟ್ ಬಳಿಕ ಹೈಡ್ರಾಮಾ?

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದ್ದು, ಅದರ ನಂತರ ಹೈಕಮಾಂಡ್ ಕರ್ನಾಟಕದ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ವರಿಷ್ಠರು ಮಧ್ಯಪ್ರವೇಶಿಸದಿದ್ದರೆ ಡಿಕೆಶಿ ಅವರ ಮುಂದಿನ ನಡೆ ಏನು ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us