ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದ ಕರ್ನಾಟಕ: ಗ್ಯಾರಂಟಿ ಯೋಜನೆಗಳೇ ಆರ್ಥಿಕ ಪ್ರಗತಿಯ ಬುನಾದಿ ಎಂದ ಸಿಎಂ

ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ (Upper Middle-Income threshold) ಮಿತಿಯನ್ನು (ಕಟ್ ಆಫ್) ಕರ್ನಾಟಕ ದಾಟಿದ್ದು, ದೇಶದ ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಯೇ ಪ್ರಮುಖ ಕಾರಣ ಎಂದು ಸಿಎಂ ಡಿಕೆ ಶಿವಕುಮಾರ್ ಶ್ಲಾಘಿಸಿದ್ದಾರೆ.

ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದ ಕರ್ನಾಟಕ: ಗ್ಯಾರಂಟಿ ಯೋಜನೆಗಳೇ ಆರ್ಥಿಕ ಪ್ರಗತಿಯ ಬುನಾದಿ ಎಂದ ಸಿಎಂ
ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದ ಕರ್ನಾಟಕ
Image Credit source: tv9
Edited By:

Updated on: Jul 07, 2026 | 7:24 PM

ಮುಖ್ಯಾಂಶಗಳು

  • ವಿಶ್ವಬ್ಯಾಂಕ್ ಮೇಲ್ಮಧ್ಯಮ ವರ್ಗದ ಆದಾಯ ಮಿತಿ ದಾಟಿದ ಕರ್ನಾಟಕ
  • ಭಾರತ ರಾಜ್ಯಗಳ ಪೈಕಿ ದ್ವಿತೀಯ ಸ್ಥಾನ
  • ಗ್ಯಾರಂಟಿ ಯೋಜನೆಗಳಿಂದ ಗೃಹ ಆದಾಯ ಹೆಚ್ಚಳ ಎಂದ ಸಿಎಂ

ಬೆಂಗಳೂರು, ಜುಲೈ 7: ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದ ಐದು ರಾಜ್ಯಗಳು ‘ಮೇಲ್ಮಧ್ಯಮ ವರ್ಗದ ಆದಾಯ (Upper Middle-Income)’ ಹೊಂದಿರುವ ಆರ್ಥಿಕತೆಗಳ ಮಿತಿಯನ್ನು (ಕಟ್ ಆಫ್) ಯಶಸ್ವಿಯಾಗಿ ದಾಟಿದ್ದು, ಈ ಪೈಕಿ ಕರ್ನಾಟಕವು ಮುಂಚೂಣಿಯಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 5,579 ಡಾಲರ್ ತಲಾ ಆದಾಯದೊಂದಿಗೆ ದ್ವಿತೀಯ ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಮಹತ್ವದ ಸಾಧನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಸಂತಸ ಹಂಚಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.

ಕನ್ನಡಿಗರ ಪರಿಶ್ರಮ, ಗ್ಯಾರಂಟಿ ಯೋಜನೆಗಳ ಕೊಡುಗೆ: ಡಿಕೆಶಿ

ರಾಜ್ಯದ ಈ ಹೆಮ್ಮೆಯ ಸಾಧನೆಯು ನಮ್ಮ ಉದ್ಯಮಿಗಳು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನತೆಯ ಕಠಿಣ ಪರಿಶ್ರಮ, ಅನ್ವೇಷಣಾ ಮನೋಭಾವ ಹಾಗೂ ಕ್ರಿಯಾಶೀಲತೆಗೆ ಸಂದ ಜಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಅವರು, ‘ನಮ್ಮ ಐದು ಗ್ಯಾರಂಟಿ ಯೋಜನೆಗಳು ಕೇವಲ ಕಲ್ಯಾಣ ಕಾರ್ಯಕ್ರಮಗಳಲ್ಲ; ಅವು ಜನರ ಮೇಲಿನ ಹೂಡಿಕೆಗಳಾಗಿವೆ. ಕುಟುಂಬಗಳ ಆದಾಯವನ್ನು ಬಲಪಡಿಸುವ, ಜೀವನೋಪಾಯವನ್ನು ಭದ್ರಪಡಿಸುವ ಮೂಲಕ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ವಿಸ್ತರಿಸುವ ಮೂಲಕ, ಒಳಗೊಳ್ಳುವಿಕೆಯ ಬೆಳವಣಿಗೆಯೇ (Inclusive Growth) ಸುಸ್ಥಿರ ಆರ್ಥಿಕ ಪ್ರಗತಿಗೆ ಅತ್ಯಂತ ಬಲವಾದ ಬುನಾದಿ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ’ ಎಂದು ಪ್ರತಿಪಾದಿಸಿದ್ದಾರೆ.

ವಿಶ್ವಬ್ಯಾಂಕ್‌ನ ನಿಯಮಾವಳಿಗಳ ಅನ್ವಯ ತಲಾ ಆದಾಯವು $1,175 ರಿಂದ $4,635 ರಷ್ಟಿದ್ದರೆ ಅದನ್ನು ಮಧ್ಯಮ ಆದಾಯದ ಮಿತಿ ಎನ್ನಲಾಗುತ್ತದೆ. ಭಾರತದ ಒಟ್ಟಾರೆ ಆರ್ಥಿಕತೆಗಿಂತ ಭಿನ್ನವಾಗಿ ದೆಹಲಿ ($6,217), ಕರ್ನಾಟಕ ($5,579), ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ರಾಜ್ಯಗಳು ಈ ಮಿತಿಯನ್ನು ಮೀರಿ ಮೇಲ್ಮಧ್ಯಮ ಆದಾಯದ ಜಾಗತಿಕ ಗುಣಮಟ್ಟವನ್ನು ತಲುಪಿವೆ. ಮಹಾರಾಷ್ಟ್ರ, ಹರಿಯಾಣ ಮತ್ತು ಕೇರಳ ರಾಜ್ಯಗಳು ಅತ್ಯಲ್ಪ ಅಂತರದಲ್ಲಿ ಈ ಮೈಲಿಗಲ್ಲನ್ನು ಮಿಸ್ ಮಾಡಿಕೊಂಡಿವೆ.

ಇದನ್ನೂ ಓದಿ: ಕೇವಲ 1 ತಿಂಗಳಲ್ಲಿ ಡಿಕೆಶಿ ಸಾಕಷ್ಟು ಕನಸಿನ ಯೋಜನೆ, ಹತ್ತಾರು ಸವಾಲುಗಳನ್ನ ಮೆಟ್ಟಿ ಆಡಳಿತಕ್ಕೆ ಚುರುಕು

ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಬೆಳವಣಿಗೆಯ ಲಾಭಗಳು ಪ್ರತಿ ಮನೆಗೂ ತಲುಪುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಂದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Tue, 7 July 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us