
ಬೆಂಗಳೂರು, ನವೆಂಬರ್ 23: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಬೆಳಗಾವಿ ಜಿಲ್ಲಾಡಳಿತ ಕುಡಿಯುವ ನೀರಿನ ಸಂರಕ್ಷಣೆಗೆ ನದಿ ನೀರಿನ ಬಳಕೆಯ ಮೇಲೆ ನಿಗಾ ವಹಿಸಲು ಮುಂದಾಗಿದೆ. ಗದಗದಲ್ಲಿ ರೈತರು ಬರದಿಂದ ಕಂಗಾಲಾಗಿದ್ದರೆ, ಜಿಲ್ಲಾಧಿಕಾರಿಯ ಬೀಳ್ಕೊಡುಗೆ ಪಾರ್ಟಿಯ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಇತ್ತ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ರಾಗಿ ಬೆಳೆ ನೀರಿಲ್ಲದೆ ಒಣಗುತ್ತಿದೆ.
ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸುಮಾರು 25 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು, ಕೊಪ್ಪಳದ ಕಾಸನಕಂಡಿ ಸಮೀಪದ ಹಿನ್ನೀರು ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಿಟಾಚಿ ಯಂತ್ರಗಳನ್ನು ಬಳಸಿ ಜಲಾಶಯದ ಒಡಲನ್ನು ಅಗೆಯಲಾಗುತ್ತಿದ್ದು, ಸುಮಾರು 5ರಿಂದ 10 ಅಡಿ ಆಳದವರೆಗೆ ಭೂಮಿಯನ್ನು ಕೊರೆದು ಫಲವತ್ತಾದ ಮಣ್ಣನ್ನು ಸಾಗಿಸಲಾಗುತ್ತಿದೆ ಎಂಬ ಆರೋಪವಿದೆ. ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಟಾಚಿ ಯಂತ್ರಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿರುವ ಮಣ್ಣು ಲೂಟಿ ದಂಧೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಬಳಕೆಯ ಮೇಲೆ ನಿಗಾ ಇಡಲಾಗಿದೆ. ಮುಂದಿನ ಜೂನ್ ತಿಂಗಳವರೆಗೆ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬೇಕಿರುವುದರಿಂದ ನದಿ ಮತ್ತು ಕಾಲುವೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದೆ.
ಇದಕ್ಕಾಗಿ ನದಿಪಾತ್ರದ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ದಿನ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಜಿಲ್ಲೆಯ 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ 40 ಟಿಎಂಸಿ ನೀರಿದೆ. 37 ಟಿಎಂಸಿ ಸಾಮರ್ಥ್ಯದ ನವಿಲುತೀರ್ಥ ಜಲಾಶಯದಲ್ಲಿ 14 ಟಿಎಂಸಿ ನೀರು ಸಂಗ್ರಹವಿದೆ. ಲಭ್ಯವಿರುವ ನೀರನ್ನು ಮುಂದಿನ ದಿನಗಳಿಗೂ ಉಳಿಸಿಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಗದಗ ಜಿಲ್ಲೆಯ ರೈತರು ತೀವ್ರ ಬರಗಾಲದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಳಿಗೆ ನೀರಿಲ್ಲದೆ ಅನ್ನದಾತರು ಪರದಾಡುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಅದ್ಧೂರಿ ಬೀಳ್ಕೊಡುಗೆ ಪಾರ್ಟಿ ಆಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಆವರಣದಲ್ಲಿ ಪಾರ್ಟಿ ನಡೆದಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಸಿಬ್ಬಂದಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ರೈತರು ಬರದಿಂದ ಸಂಕಷ್ಟದಲ್ಲಿರುವಾಗ ಸರ್ಕಾರಿ ನಿವಾಸದ ಆವರಣದಲ್ಲಿ ನಡೆದ ಅದ್ಧೂರಿ ಸಂಭ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಭೀಕರ ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಜಿಲ್ಲಾಧಿಕಾರಿ ನಿವಾಸದಲ್ಲಿ ಮೋಜು-ಮಸ್ತಿ
ಇತ್ತ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಬರದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟಾವಿಗೆ ಬಂದಿರುವ ಅಳಿದುಳಿದ ರಾಗಿ ಬೆಳೆಗೆ ನೀರಿನ ಅಗತ್ಯವಿದೆ. ಆದರೆ ನೀರಿನ ಕೊರತೆಯಿಂದ ಹೊಲದಲ್ಲೇ ರಾಗಿ ಬೆಳೆ ಒಣಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಬೆಳೆ ಉಳಿಸಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ.
ಮಾಹಿತಿ: ಬೆಳಗಾವಿಯಿಂದ ಸಹದೇವ್ ಮಾನೆ, ಕೊಪ್ಪಳದಿಂದ ಶಿವಕುಮಾರ್ ಪತ್ತಾರ್, ಗದಗದಿಂದ ಸಂಜೀವ್ ಪಾಂಡ್ರೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ