Govt Employees Strike: ಮಧ್ಯಂತರ ವರದಿ ತರಿಸಿಕೊಂಡು ವೇತನ ಪರಿಷ್ಕರಣೆ; ನೌಕರರಿಗೆ ಸಿಎಂ ಬೊಮ್ಮಾಯಿ ಭರವಸೆ
7th Pay Commission: ನೌಕರರು ಮುಷ್ಕರದ ನಿರ್ಧಾರ ಹಿಂಪಡೆಯುವಂತೆ ಮುಖ್ಯ ಕಾರ್ಯದರ್ಶಿ ಮೂಲಕ ಸಂಧಾನದ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ.
ಸಿದ್ದಾಪುರ: 7ನೇ ವೇತನ ಆಯೋಗ ವರದಿ (7th Pay Commission) ಜಾರಿಗೆ ಆಗ್ರಹಿಸಿ ನೌಕರರು (government employees ) ಪ್ರತಿಭಟನೆ ಹಾಗೂ ಮುಷ್ಕರಕ್ಕೆ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಂತರ ವರದಿ ತರಿಸಿಕೊಂಡು ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಾತನಾಡಿದ ಅವರು, ವೇತನ ಪರಿಷ್ಕರಣೆ ವಿಚಾರವಾಗಿ ಸಂಜೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಕೂಡಲೇ ಮಧ್ಯಂತರ ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ ಎಂದು ಹೇಳಿದರು. ಬಜೆಟ್ ಮಂಡನೆ ವೇಳೆಯೇ ಈ ವಿಚಾರ ತಿಳಿಸಿದ್ದೆ ಎಂದೂ ಅವರು ಹೇಳಿದರು.
ಎಸ್ಮಾ ಜಾರಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದೂ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಸುಮಾರು 10 ಲಕ್ಷ ಸರ್ಕಾರಿ ನೌಕರರು ಮಾರ್ಚ್ 1ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಬಿಬಿಎಂಪಿ, ಬಿಡಿಎ ಸೇರಿದಂತೆ ಅನೇಕ ಇಲಾಖೆಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ, ನೌಕರರ ಮುಷ್ಕರ ವಿಚಾರ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ.
ನೌಕರ ಮುಖಂಡರ ಸಭೆ ಕರೆದ ಮುಖ್ಯ ಕಾರ್ಯದರ್ಶಿ
ನೌಕರರು ಮುಷ್ಕರದ ನಿರ್ಧಾರ ಹಿಂಪಡೆಯುವಂತೆ ಮುಖ್ಯ ಕಾರ್ಯದರ್ಶಿ ಮೂಲಕ ಸಂಧಾನದ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಈಗಾಗಲೇ ಸಭೆ ಕರೆದಿದ್ದು, ಸಂಜೆಯೊಳಗೆ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bagalkote: ಪಿಂಚಣಿಗಾಗಿ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಶಿಕ್ಷಕನ ಮನೆಗೆ ಸಿದ್ದರಾಮಯ್ಯ ಭೇಟಿ, ಕುಟುಂಬಕ್ಕೆ ಸಹಾಯಧನ
ಈ ಮಧ್ಯೆ, ನೌಕರರ ಮುಷ್ಕರ ನಡೆದರೂ ನೀರು ಪೂರೈಕೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದು. ಜಲಮಂಡಳಿ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Tue, 28 February 23