ಸುದ್ದಿ ವಿಶ್ಲೇಷಣೆ | ಡ್ರಗ್ಸ್​ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?

ಸುದ್ದಿ ವಿಶ್ಲೇಷಣೆ | ಡ್ರಗ್ಸ್​ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?
ಸಿಸಿಬಿ ವಶಪಡಿಸಿಕೊಂಡ ಡ್ರಗ್ಸ್​ ಹಾಗೂ ವಿವಿಧ ಮಾದರಿಯ ಎಂಡಿಎಂಎ

ಡ್ರಗ್ಸ್​ ಕೇಸಿಗೆ ಇತಿಶ್ರೀ ಹಾಡಿದ್ದೇವೆ ಎಂದು ಪೊಲೀಸರು ಅಂದು ಕೊಳ್ಳುತ್ತಿರುವಾಗಲೇ ಈಗ ಪರಪ್ಪನ ಅಗ್ರಹಾರದಲ್ಲಿನ ಓರ್ವ ಖೈದಿಯ ಕೋಣೆಯಲ್ಲಿ ಡ್ರಗ್ಸ್ ಸಿಕ್ಕಿದ್ದು ಈಗ ಈ ಚರ್ಚೆಗೆ ಮತ್ತೆ ಜೀವ ಬಂದಂತಾಗಿದೆ.

bhaskar hegde

| Edited By: sadhu srinath

Apr 10, 2021 | 6:22 PM

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮುಜೀಬ್ ಎಂಬ ಮಡಿವಾಳದ ಬಾಂಬ್ ಸ್ಫೋಟದ ಅಪರಾಧಿಯ ಕೊಠಡಿಯಲ್ಲಿ ಸಿಕ್ಕಿರುವ  ಡ್ರಗ್ಸ್​ನ್ನು ನೋಡಿ ವಿಚಲಿತರಾಗಿರುವ ಬೆಂಗಳೂರಿನ ಪೊಲೀಸರು, ಡ್ರಗ್ಸ್​ನ್ನು ಕಳಿಸಿದ ಕೇರಳದ ಕಣ್ಣೂರಿನ ಜಿನೇಬ್ ಎನ್ನುವವನನ್ನು ಬಂಧಿಸುವುದಕ್ಕೆ ಅಲ್ಲಿಗೆ ತೆರಳಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ತುಂಬಾ ಸುದ್ದಿ ಮಾಡಿದ್ದ ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವ ಬೆಂಗಳೂರಿನ CCB ಪೊಲೀಸರು, ಒಂದು ಕೇಸಿನಲ್ಲಿ ಆರೋಪ ಮಟ್ಟಿ ಸಲ್ಲಿಸಿ ಡ್ರಗ್ಸ್​ ನಿಗ್ರಹ ಮಾಡಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಇನ್ನಿತರೆ ಸಚಿವರು ಇಡೀ ರಾಜ್ಯದಿಂದ ಡ್ರಗ್ಸ್​ ಮೂಲೋತ್ಪಾಟನೆ ಮಾಡುತ್ತೇವೆ. ಈ ವಿಚಾರದಲ್ಲಿ ಯಾವ ಮುಲಾಜಿಗೂ ಒಳಗಾಗಲ್ಲ ಎಂದು ಹೇಳುತ್ತ ಬಂದಿರುವ ಬೆನ್ನಲ್ಲೇ ಈಗ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿಯೇ ಡ್ರಗ್ಸ್ ಸಿಕ್ಕಿರುವುದು ವಿಶೇಷ. ಪರಪ್ಪನ ಅಗ್ರಹಾರದ ಈ ಡ್ರಗ್ಸ್ ಕೇಸನ್ನು ನೋಡಿದಾಗ ಕರ್ನಾಟಕ ಡ್ರಗ್ಸ್ ಮುಕ್ತವಾಗೋದು ಬಿಡಿ, ಇನ್ನೂ ಹಲವಾರು ಕಡೆ ನುಸುಳಿರುವುದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ.

ಇನ್ನೇನು ಸಾಕ್ಷ್ಯ ಇದೆ? ಬೆಂಗಳೂರಿನಲ್ಲಿರುವ ವಿಶ್ವವಿದ್ಯಾಲಯವೊಂದರಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡಿ ಈಗ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ಮನಃಶಾಸ್ತ್ರ ಪ್ರಾಧ್ಯಾಪಕರ ಭೇಟಿಯ ಸಂದರ್ಭದಲ್ಲಿ ಅವರು ಹೇಳಿದ್ದು ಮನ ಕಲಕುವಂತಿತ್ತು. ಕಳೆದ ವರ್ಷ ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ಎಲ್ಲೆಲ್ಲೂ ಚರ್ಚೆಯಲ್ಲಿತ್ತು. ಅವರು ನನಗೆ ಹೇಳಿದ್ದು ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಎರಡು ಸರಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಮಾಲೋಚನೆಯನ್ನು (counselling) ಉಚಿತವಾಗಿ ಮಾಡುತ್ತಿರುವ ಅವರು ಈ ಡ್ರಗ್ಸ್​  ಬಗ್ಗೆ ವಿವರವಾಗಿ ಮಾತನಾಡಿದರು.

ದುರಂತವೆಂದರೆ, ಈ ಡ್ರಗ್ಸ್ ಜಾಲ ಎಲ್ಲ ಕಡೆಗೂ ವ್ಯಾಪಿಸಿದೆ. ಇದನ್ನು ಭೇದಿಸಲು ತನ್ನ ಜೊತೆ ಕೈ ಜೋಡಿಸಿ ಎಂದೂ ಅವರು ಕೇಳಿದ್ದರು. ತಾನು ಹೋಗುತ್ತಿರುವ ಶಾಲೆಯ ಮಕ್ಕಳೆ ಇದಕ್ಕೆ ಗುರಿಯಾಗಿದ್ದರು ಎಂದು ಅವರು ಹೇಳಿದರು. ಶಾಲೆಯ ಎದುರಿಗೆ ತರಹೇವಾರಿ ತಿಂಡಿ ಮಾರಾಟ ಮಾಡಲು ಬರುವವರಲ್ಲಿ ಒಂದಿಬ್ಬರು ಈ ಕೆಲಸಕ್ಕೆ ಕೈ ಹಾಕುತ್ತಾರೆ. ಅವರು ಮೊದಲು ಕೊಡುವ ಉಚಿತ ಕ್ಯಾಂಡಿ ಅಥವಾ ಬೇರೆ ತಿಂಡಿಯನ್ನು ಯಾವ ಮಗುವೂ ತಿರಸ್ಕರಿಸಲು ಸಾಧ್ಯವಿಲ್ಲ.

ಹೀಗೆ ಸಾವಕಾಶವಾಗಿ ದಾರಿ ಹುಡುಕಿ.. ಬೆಳೆದು ನಿಂತ ಹುಡುಗರನ್ನು ಮುಕ್ಕಿ ತಮ್ಮ ಕೈ ಮುಷ್ಠಿಗೆ ತಂದು ಕೊಳ್ಳುವ ಈ ಗಾಡಿ ವ್ಯಾಪಾರಿಗಳು ಅದೇ ಮಕ್ಕಳನ್ನು ತಮ್ಮ ಡ್ರಗ್ಸ್  ದಂಧೆಗೆ ಇಳಿಸಲು ಮುಂದಾಗುತ್ತಾರೆ. ಮತ್ತು ಅವರ ಮೂಲಕ ಹೊಸ ಹೊಸ ಗಿರಾಕಿಗಳನ್ನು ಹುಡುಕುವುದು ಅವರಿಗೆ ಹೊಸದೇನಲ್ಲ. ಹೇಗಾದರೂ ಮಾಡಿ ಈ ಶಾಲೆ ಮತ್ತು ಕಾಲೇಜನ್ನು ಡ್ರಗ್ಸ್ ಮುಕ್ತ ಮಾಡಬೇಕು ಎಂದು ಬಹಳ ಕಳಕಳಿಯಿಂದ ಸವಿವರವಾಗಿ ಹೇಳಿದರು.

ಪೊಲೀಸರು ಡ್ರಗ್ಸ್ ಜಾಲ ಭೇದಿಸಲಿಲ್ಲವೇ?  ಇಂದ್ರಜಿತ್​ ಲಂಕೇಶ್​ ಕೊಟ್ಟ ಮಾಹಿತಿ ಮೇಲೆ ಒಂದು ಕೇಸನ್ನು ಮುಗಿಸಿದ್ದೇವೆ ಎಂದು ಪೊಲೀಸರು ಅಂದುಕೊಂಡರೆ ಅದು ತಪ್ಪಲ್ಲ. ಯಾಕೆಂದರೆ, ತಾವು ದಾಖಲಿಸಿಕೊಂಡ ಎಫ್​ಐಆರ್​ ಆಧಾರದ ಮೇಲೆ ಆ ಒಂದು ಕೇಸನ್ನು ಭೇದಿಸಿ ಕೊನೆ ಮುಟ್ಟಿಸುವುದು ಪೊಲೀಸರ ಕರ್ತವ್ಯ. ಒಂದೇ ಕೇಸನ್ನು ಇಟ್ಟುಕೊಂಡು ಇಡೀ ರಾಜ್ಯಾದ್ಯಂತ ಜಾಲಾಡಲು ಪೊಲೀಸರಿಗೆ ಆಗುವುದಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ.

ಆದರೆ, ಸರಕಾರ ಸ್ವಲ್ಪ ವಿಚಾರ ಮಾಡಬೇಕಿತ್ತು. ಇನ್ನೂ ಆಳಕ್ಕೆ ಇಳಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿರುವ ಡ್ರಗ್ಸ್ ಜಾಲವನ್ನು ಭೇದಿಸಿ, ಆ ಜಾಲದ ಬೆನ್ನೆಲುಬು ಮುರಿದಿದ್ದರೆ ಬಿಜೆಪಿ ಸರಕಾರಕ್ಕೆ ಜನ ಶಾಭಾಶ್​ಗಿರಿಯನ್ನು ಖಂಡಿತ ಕೊಡುತ್ತಿದ್ದರು. ಇಡೀ ಸಮಾಜದ ಭವಿಷ್ಯವೆಂದೇ ಹೇಳುವ ಮಕ್ಕಳನ್ನು ಈ ಜಾಲದಿಂದ ಬಚಾವು ಮಾಡಿದ ಕೀರ್ತಿ ಈ ಸರಕಾರಕ್ಕೆ ಸಲ್ಲುತ್ತಿತ್ತು.

ಒಂದು ಕಡೆ ವರದಿಯಾಗುವ ಡ್ರಗ್ಸ್ ಕೇಸಿಗೂ ಇನ್ನೊಂದು ಕಡೆ ವರದಿಯಾಗುವ ಕೇಸಿಗೂ ಏನಾದರೂ ಸಂಬಂಧವಿದೆಯೇ ಎಂದು ನೋಡಿ, ಸಂಬಂಧ ಇದ್ದರೆ ಎರಡರ ಮೂಲಕ್ಕೆ ಇಳಿದು ಒಂದೊಂದಾಗಿ ಈ ಇಡೀ ಜಾಲವನ್ನು ಭೇದಿಸುವ ತಂತ್ರಗಾರಿಕೆ ಬೇಕಾಗಿತ್ತು. ಅದು ಸರಕಾರದ ಬಳಿ ಇದ್ದಂತೆ ಕಾಣುತ್ತಿಲ್ಲ. ಬೇರೆ ಬೇರೆ ಕಡೆಯಿಂದ ಬರುತ್ತಿರುವ ಸುದ್ದಿಯನ್ನು ನೋಡಿದಾಗ, ಸರಕಾರ ಈ ಕುರಿತು ಗಂಭೀರವಾಗಿ ಚಿಂತಿಸಿದೆ ಎಂದು ಅನ್ನಿಸುವುದಿಲ್ಲ.

ಒಂದು ಪೊಲೀಸ್ ತಂಡವನ್ನು ಕಟ್ಟಿ, ಪ್ರಾಮಾಣಿಕ ಮತ್ತು ಇಂಥ ಕೇಸನ್ನು ಮುಲಾಜಿಲ್ಲದೇ ಕೊನೆ ಮುಟ್ಟಿಸುವಂತಹ ಅಧಿಕಾರಿಗಳನ್ನು ನೇಮಿಸಿ, ಅವರಿಗೆ ಒಂದು ವರ್ಷಕ್ಕೂ ಮಿಗಿಲಾದ ಕಾಲಾವಧಿಯನ್ನು ನೀಡಿ ಇಡೀ ಜಾಲ ಭೇದಿಸುವ ತಂತ್ರವನ್ನೇನಾದರೂ ಸರಕಾರ ಮಾಡಿದ್ದರೆ ಖಂಡಿತವಾಗಿ, ಆ ಪ್ರಯತ್ನ ಗುರಿ ತಲುಪುವ ಸಾಧ್ಯತೆ ಜಾಸ್ತಿ ಇರುತ್ತಿತ್ತು. ಇಂದು ವರದಿಯಾದ ಪರಪ್ಪನ ಅಗ್ರಹಾರದ ಕೇಸಿನಂತೆಯೇ ರಾಜ್ಯದ ಬೇರೆ ಬೇರೆ ಕಡೆಯಿಂದ ಬರುವ ಈ ತರಹದ ಸುದ್ದಿ ನೋಡಿದರೆ, ಸರಕಾರ ಇಲ್ಲಿಯೂ ವಿಫಲವಾಗಿದ್ದು ಮೇಲ್ನೋಟಕ್ಕೆ ಕಾಣುತ್ತಿದೆ.

Follow us on

Most Read Stories

Click on your DTH Provider to Add TV9 Kannada