ಕೊಟ್ಟ ಮಾತು ತಪ್ಪಿದ್ರಾ ಸಚಿವರು? ಗೃಹಲಕ್ಷ್ಮೀ ಹಣ ಖಾತೆಗೆ ಬೀಳುವುದು ಯಾವಾಗ? ಇಲ್ಲಿದೆ ಸಹಾಯವಾಣಿ
ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀಗೆ ಕಳೆದ ಹಲವು ತಿಂಗಳಿಂದ ಗ್ರಹಣ ಬಡಿದಿದೆ. ಯಾವಾಗ ಮಹಿಳೆಯರು ರೊಚ್ಚಿಗೆದ್ದಿದ್ರೋ, ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಹಾಕುವುದಾಗಿ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದರು. ವಾರದಲ್ಲೇ 24ನೇ ಕಂತಿನ ಹಣ ಹಾಕ್ತೀನಿ ಎಂದು ಮಹಿಳೆಯರಿಗೆ ಮಾತು ಕೊಟ್ಟಿದ್ದರು. ಆದ್ರೆ, ಇದೀಗ ಕೊಟ್ಟ ಮಾತು ತಪ್ಪಿದ್ದಾರೆ. ಇನ್ನು ಹಣದ ಗೊಂದಲದ ಬಗ್ಗೆ ಫಲಾನುಭವಿಗಳಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ.

ಬೆಂಗಳೂರು, (ಡಿಸೆಂಬರ್ 29): ರಾಜ್ಯ ಸರ್ಕಾರದ (Karnataka Congress Government) ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ (gruhalakshmi scheme) ಬಾಕಿ ಕಂತಿನ ಹಣಕ್ಕಾಗಿ ಮಹಿಳೆಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಿಗೆ ಇದೀಗ ತಾಂತ್ರಿಕ ವಿಘ್ನಗಳು ಎದುರಾಗಿದ್ದು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದ ಡೆಡ್ಲೈನ್ ಮುಗಿದು ಇವತ್ತಿಗೆ ಎರಡು ದಿನಗಳಾಗಿವೆ. ಆದ್ರೆ ಗೃಹಲಕ್ಷ್ಮೀಯರ ಅಕೌಂಟ್ಗಳಿಗೆ ಇನ್ನೂ ಹಣ ಬಂದಿಲ್ಲ. ಸಚಿವೆಯ ತವರು ಜಿಲ್ಲೆಯಲ್ಲೇ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.
ತಡವಾಗುತ್ತಿರುವುದಕ್ಕೆ ಗೃಹಲಕ್ಷ್ಮಿಯರು ಆಕ್ರೋಶ
ಬೆಳಗಾವಿ ಸೇರಿದಂತೆ ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯ ಈ ಬಗ್ಗೆ ಕಿಡಿಕಾರಿದ ಮಹಿಳೆಯರು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೂಡ ಹಾಕಿಲ್ಲ. ಕೆಲವರಿಗೆ 19ನೇ ಕಂತಿನ ಹಣವನ್ನ ಕೊಟ್ಟಿದ್ದಾರೆ. ಕೆಲವರಿಗೆ 22ನೇ ಕಂತಿನ ಹಣ ಮಾತ್ರ ಬಂದಿದೆ. ಕೊಡುವುದಾದ್ರೆ ಎಲ್ಲರಿಗೂ ಸಮಾನವಾಗಿ ಕೊಡಿ ಎಂದು ಆಕ್ರೋಶಗೊಂಡಿದ್ದು,ಸರ್ಕಾರವು ಆದಷ್ಟು ಬೇಗ ಬಾಕಿ ಕಂತುಗಳನ್ನು ಬಿಡುಗಡೆ ಮಾಡಿ ಹೊಸ ವರ್ಷದ ಕೊಡುಗೆ ನೀಡಲಿ ಎಂಬುದು ಲಕ್ಷಾಂತರ ಗೃಹಲಕ್ಷ್ಮಿಯರ ಒತ್ತಾಯವಾಗಿದೆ.
ಇದನ್ನೂ ನೋಡಿ: ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ಲಕ್ಷ್ಮೀ ಬರ್ತಾಳೆ
5500 ಕೋಟಿ ರೂಪಾಯಿ ಬಾಕಿ
ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5500 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹಣ ಫಲಾನುಭವಿಗಳಿಗೆ ಇನ್ನೂ ಪಾವತಿಯಾಗಿಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿಯೂ ಈ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಸದನ ಮುಗಿದು ವಾರ ಕಳೆದರೂ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು-ನಾಳೆ ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸರ್ಕಾರವು ಬಾಕಿ ಹಣವನ್ನು ಪಾವತಿಸಲು ಶತಪ್ರಯತ್ನ ನಡೆಸುತ್ತಿದೆ. ಆದರೆ, ಬೃಹತ್ ಮೊತ್ತದ ಹಣದ ಹರಿವು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿ ಪ್ರತಿ ತಿಂಗಳು 2000 ರೂಪಾಯಿ ನಂಬಿಕೊಂಡಿದ್ದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಹಣಕ್ಕಾಗಿ ದಾರಿ ಕಾಯುವಂತಾಗಿದೆ.
ಪರಿಹಾರಕ್ಕೆ ಬಂತು ‘181’ ಸಹಾಯವಾಣಿ
ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದೀಗ ‘181’ ಸಹಾಯವಾಣಿಯನ್ನು ಆರಂಭಿಸಿದೆ. ಹೀಗಾಗಿ ಇನ್ಮುಂದೆ ಹಣ ಜಮೆಯಾಗದ ಬಗ್ಗೆ ಮಹಿಳೆಯರು ಕಚೇರಿಗೆ ಹೋಗಬೇಕಿಲ್ಲ. 181 ಕ್ಕೆ ಕರೆ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ತಾಲೂಕಿನ ಮಾಹಿತಿ ಪಡೆದು ಸಮಸ್ಯೆಗೆ ಇರುವ ಕಾರಣ ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಘೋಷಿಸಲಾದ ಗೃಹಲಕ್ಷ್ಮೀ ಗ್ಯಾರಂಟಿಗೆ ಹಲವು ಬಾರಿ ಗ್ರಹಣ ಬಡಿದಿದೆ. ಇದೀಗ ಮತ್ತೆ ಹಲವು ತಿಂಗಳ ಹಣವನ್ನೂ ನೀಡಿಲ್ಲ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.




