
ಬೆಂಗಳೂರು, (ಆಗಸ್ಟ್ 31): ಸಾರ್ವಜನಿಕರು ತಮ್ಮ ಕುಂದುಕೊರತೆಗಳು ಹಾಗೂ ಯೋಜನೆಗಳ ಫಲಾನುಭವಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಪ್ರಜಾಸೇವಾ ಅಭಿಯಾನ (prajaseva abhiyan) ಎಂಬ ವಿನೂತನ ಯೋಜನೆ ಜಾರಿಗೆ ತರುತ್ತಿದೆ. ಪ್ರಜಾಸೇವಾ ಇಲಾಖೆಯಡಿ ಜಾರಿಯಾಗುತ್ತಿರುವ ಈ ಅಭಿಯಾನ ಸೆಪ್ಟೆಂಬರ್ 5 ರಿಂದ ವಿಜಯನಗರ (Vijayanagara) ಜಿಲ್ಲೆಯ ಕೂಡ್ಲಿಗಿಯಿಂದ ಪ್ರಾರಂಭವಾಗಲಿದೆ. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸುವ ಉದ್ದೇಶದಿಂದ ಪ್ರತಿ ಶನಿವಾರ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಕ್ಷಣಾರ್ಧದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಸಾರ್ವಜನಿಕರು ಈ ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಇದ್ದಾಗ ಅಥವಾ ಯೋಜನೆಯ ಪ್ರಯೋಜನಗಳು ತಲುಪದೇ ಇದ್ದ ಸಂದರ್ಭದಲ್ಲಿ ಕುಂದುಕೊರತೆಯನ್ನು ಅಧಿಕಾರಿಗಳ, ಜನಪ್ರತಿನಿಧಿಗಳ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಹಾಗಿಲ್ಲ. ಕ್ಷಣಾರ್ಧದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಪ್ರತಿ ಶನಿವಾರ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜಂಟಿ ಸಭೆಗಳು ನಡೆಯಲಿದ್ದು, ಸ್ಥಳದಲ್ಲೇ ತ್ವರಿತ ಪರಿಹಾರ ಸಿಗಲಿದೆ.
ಸರ್ಕಾರದ ಕ್ಯಾರೆಂಡರ್ ಆಫ್ ಈವೆಂಟ್ಸ್ ಪ್ರಕಾರ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಗಳು ನಡೆಯಲಿವೆ. ಸಭೆಯ ಬಗ್ಗೆ ಸಾರ್ವಜನಿಕರಿಗೆ 15 ದಿನ ಮುಂಚಿತವಾಗಿ ಕರಪತ್ರಗಳನ್ನು ತಲುಪಿಸಲಾಗುತ್ತದೆ. ಅಲ್ಲದೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಕಾಲ್ ಸೆಂಟರ್ ಮೂಲಕ ಸಾರ್ವಜನಿಕರಿಗೆ ಆಡಿಯೋ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಸಭೆಗಳಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ. ಬೆಳಿಗ್ಗೆ 9 ರಿಂದ 11 ರವರೆಗೆ ತಾಲ್ಲೂಕು ಮಟ್ಟದಲ್ಲಿ, 11 ರಿಂದ 1 ಗಂಟೆಯವರೆಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3 ರಿಂದ 5 ರವರೆಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪರಿಶೀಲನೆ ನಡೆಯಲಿದೆ. ಕಾಲಮಿತಿಯಲ್ಲಿ ಪರಿಹಾರ ಸಿಗದ ಅರ್ಜಿಗಳು ಸ್ವಯಂಚಾಲಿತವಾಗಿ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ವರ್ಗಾವಣೆಯಾಗುತ್ತವೆ. ಕುಂದುಕೊರತೆಗಳಿಗಾಗಿ ಸಾರ್ವಜನಿಕರು 1902 ಸಹಾಯವಾಣಿ ಅಥವಾ ವೆಬ್‌ಸೈಟ್ ಬಳಸಬಹುದಾಗಿದೆ.
ಒಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಪ್ರಜಾಪ್ರಭುತ್ವದ ಆಶಯದಂತೆ ಜನರ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜಾರಿಯಾಗುತ್ತಿರುವ ಈ ಅಭಿಯಾನ ರಾಜ್ಯಕ್ಕೆ ಮಾದರಿಯಾಗುವ ನಿರೀಕ್ಷೆಯಿದೆ.