
ಬೆಂಗಳೂರು, ನವೆಂಬರ್ 27: ಕಸ್ತೂರಿ ರಂಗನ್ ವರದಿ ನೂನ್ಯತೆಯ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ. ಯುನೆಸ್ಕೋ (UNESCO) ಜೀವವೈವಿಧ್ಯ ತಾಣವಾದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ (ESA) ವ್ಯಾಪ್ತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಹಾಗೂ ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಅವರ ಅಧ್ಯಕ್ಷತೆಯ ಒಂಬತ್ತು ಸದಸ್ಯರ ಸಮಿತಿಯು ಕಸ್ತೂರಿರಂಗನ್ ವರದಿಯ ಅಂಶಗಳನ್ನು ಪರಿಶೀಲಿಸಿ, ಸೂಕ್ತ ಮಾರ್ಪಾಡುಗಳು ಮತ್ತು ಸರಿಪಡಿಸುವ ಕ್ರಮಗಳನ್ನು ಶಿಫಾರಸು ಮಾಡಲಿದೆ. ಈ ಸಮಿತಿಯು ವಾಸ್ತವಿಕ ಸ್ಥಿತಿಗತಿಗಳ ಪರಿಶೀಲನೆ, ವಿವರಗಳು, ಭೂ ಮಂಜೂರಾತಿ ಮತ್ತು ಹಕ್ಕುಪತ್ರಗಳ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಭೌತಿಕ ಪರಿಶೀಲನೆ ನಡೆಸಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳನ್ನು ಸಹ ಈ ಅಧಿಸೂಚನೆಯ ಮೂಲಕ ರಚಿಸಲಾಗಿದೆ. ಈ ನಾಲ್ವರು ಸದಸ್ಯರ ಸಮಿತಿಯು ಗ್ರಾಮ ಮಟ್ಟದ ನಕ್ಷೆಗಳನ್ನು ಅಂತಿಮಗೊಳಿಸಿ ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ಸಮಿತಿಯು ಸಲ್ಲಿಸಿದ ವರದಿಯ ಆಧಾರದ ಮೇಲೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಪರಿಸರ ಸೂಕ್ಷ್ಮ ಪ್ರದೇಶವನ್ನು (ESA) ಘೋಷಿಸಲು ಕರಡು ಅಧಿಸೂಚನೆಗಳನ್ನು ಹೊರಡಿಸುತ್ತಿದೆ. 2014ರಲ್ಲಿ ಹೊರಡಿಸಲಾದ ಮೊದಲ ಅಧಿಸೂಚನೆಯಿಂದ ಹಿಡಿದು ಈ ವರ್ಷದ ಜುಲೈನಲ್ಲಿ ಹೊರಡಿಸಲಾದ ಆರನೇ ಅಧಿಸೂಚನೆಯವರೆಗೆ, ಕೇಂದ್ರದ ಈ ಪ್ರಯತ್ನಗಳನ್ನು ಕರ್ನಾಟಕ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳು ವಿರೋಧಿಸುತ್ತಲೇ ಬಂದಿದ್ದಾರೆ.
ಇಡೀ ಪಶ್ಚಿಮ ಘಟ್ಟಗಳಿಗೆ ಪ್ರಸ್ತಾಪಿಸಲಾದ ಒಟ್ಟು 56,825.7 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಕರ್ನಾಟಕವು 20,668 ಚದರ ಕಿಲೋಮೀಟರ್ (36.3%) ಪಾಲನ್ನು ಹೊಂದಿದೆ. ಆರನೇ ಕರಡು ಅಧಿಸೂಚನೆಯ ಕುರಿತು ಚರ್ಚಿಸಲು ರಾಜ್ಯ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನವನ್ನು ನಡೆಸಿತು. ಪರಿಸರ ಸೂಕ್ಷ್ಮ ಪ್ರದೇಶವನ್ನು ಅಧಿಸೂಚಿತ ಅರಣ್ಯಗಳಿಗೆ ಮಾತ್ರ ಸೀಮಿತಗೊಳಿಸಬೇಕು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು ಹಾಗೂ ಹಕ್ಕುಪತ್ರಗಳ ಅರ್ಜಿಗಳು ಬಾಕಿ ಇರುವ ಭೂಮಿಯನ್ನು ಇದರಿಂದ ಕೈಬಿಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಲು ವಿಧಾನಸಭೆ ಮತ್ತು ವಿಧಾನಪರಿಷತ್ತು ಎರಡೂ ಸದನಗಳು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದವು.
ರಾಜಕೀಯ ವರ್ಗವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಪರಿಸರವಾದಿಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಆರೋಪಿಸಿವೆ. ಕಸ್ತೂರಿರಂಗನ್ ವರದಿಯ ಕನ್ನಡ ಪ್ರತಿಯನ್ನು ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಇದು ಪಟ್ಟಭದ್ರ ಹಿತಾಸಕ್ತಿಗಳು ಜನರ ದಾರಿ ತಪ್ಪಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ನಾಗರಿಕ ಸಮಾಜದ ಸಂಘಟನೆಗಳು ಬೆಟ್ಟು ಮಾಡಿವೆ. ಉದಾಹರಣೆಗೆ, ಅಧಿಸೂಚನೆಯು ಈಗಾಗಲೇ ಕೃಷಿ ಮತ್ತು ತೋಟಗಾರಿಕೆಯನ್ನು ನಿರ್ಬಂಧಗಳಿಂದ ಹೊರಗಿಟ್ಟಿದ್ದರೂ, ಇಂತಹ ಚಟುವಟಿಕೆಗಳ ಮೇಲಿನ ನಿರ್ಬಂಧಗಳಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂಬ ಭಯ ರೈತರಲ್ಲಿದೆ.
ಕೇಂದ್ರ ಸರ್ಕಾರವು, ಪಶ್ಚಿಮ ಘಟ್ಟದ 57 ಸಾವಿರ ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿತ್ತು. ಈ ಸಂಬಂಧ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಕರಡು ವರದಿ ಪ್ರಕಾರ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಗುಜರಾತ್ ರಾಜ್ಯ ವ್ಯಾಪ್ತಿಯ 56,826 ಚದರ ಕಿ.ಮೀ. ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಇನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ, ಕಟ್ಟಡ ನಿರ್ಮಾಣ, ಶಾಖೋತ್ಪನ್ನ ವಿದ್ಯುತ್ ಘಟಕಗಳು, ನಿಷೇಧಿತ (ರೆಡ್ ಇಂಡಸ್ಟ್ರೀಸ್) ಕೈಗಾರಿಕೆಗಳ ಚಟುವಟಿಕೆಗೆ ನಿರ್ಬಂಧಿಸಲಾಗಿದೆ.
Published On - 3:39 pm, Fri, 27 November 26