ದೇವಾಲಯಗಳ ದುರಸ್ತಿ, ಜೀರ್ಣೋದ್ಧಾರಗಳ ಮೇಲ್ವಿಚಾರಣೆ ನಡೆಸುವಂತೆ ವಾಸ್ತುಶಿಲ್ಪ ಸಮಿತಿಗೆ ಶೀಘ್ರದಲ್ಲೇ ಸೂಚಿಸಲಿರುವ ಸರ್ಕಾರ
ಕರ್ನಾಟಕದಲ್ಲಿರುವ ಪುರಾತನ ದೇವಾಲಯಗಳ ದುರಸ್ತಿ ಮತ್ತು ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ವಾಸ್ತುಶಿಲ್ಪ ಸಮಿತಿಗೆ ರಾಜ್ಯ ಸರ್ಕಾರವು ಶೀಘ್ರದಲ್ಲೇ ಸೂಚನೆ ನೀಡಲಿದೆ. ಪ್ರಸ್ತುತ, ಸುಮಾರು 50 ದೇವಾಲಯಗಳ ದುರಸ್ತಿ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಮುಜರಾಯಿ ಇಲಾಖೆ ತಡೆದಿದೆ.
ಬೆಂಗಳೂರು ಅ.15: ಕರ್ನಾಟಕದಲ್ಲಿರುವ ಪುರಾತನ ದೇವಾಲಯಗಳ ದುರಸ್ತಿ ಮತ್ತು ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ವಾಸ್ತುಶಿಲ್ಪ (Architectural committee) ಸಮಿತಿಗೆ ರಾಜ್ಯ ಸರ್ಕಾರವು (Karnataka Government) ಶೀಘ್ರದಲ್ಲೇ ಸೂಚನೆ ನೀಡಲಿದೆ. ಪ್ರಸ್ತುತ, ಸುಮಾರು 50 ದೇವಾಲಯಗಳ ದುರಸ್ತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳನ್ನು ಮುಜರಾಯಿ ಇಲಾಖೆ ತಡೆದಿದೆ. 1997 ರ ಸೆಕ್ಷನ್ 69 ಡಿ ಅಡಿ ವಾಸ್ತುಶಿಲ್ಪ ಸಮಿತಿಯನ್ನು ಕಡ್ಡಾಯಗೊಳಿಸಲಾಗಿದೆ. ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು. ವಾಸ್ತುಶಿಲ್ಪ ವಿಭಾಗದ ಸೂಪರಿಂಟೆಂಡಿಂಗ್ ಇಂಜಿನಿಯರ್ ಅನ್ನು ವಾಸ್ತುಶಿಲ್ಪ ಸಮಿತಿಗೆ ಪದನಿಮಿತ್ತ ಅಧ್ಯಕ್ಷರನ್ನಾಗಿ ನೇಮಕ ಮಡಲಾಗುತ್ತದೆ. ಶಿಲ್ಪಕಲಾ ಪರಿಷತ್ತಿನ ಅಧ್ಯಕ್ಷರು, ಒಬ್ಬರು ಶಿಲ್ಪಿ, ಒಬ್ಬರು ಆಗಮ ತಜ್ಞರು ಮತ್ತು ಒಬ್ಬರು ವಾಸ್ತು ತಜ್ಞರು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಮುಜರಾಯಿ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ ತಿಳಿಸಿದರು.
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಇನ್ಮುಂದೆ ದೇವಸ್ಥಾನಗಳ ದುರಸ್ತಿ ಅಥವಾ ಜೀರ್ಣೋದ್ಧಾರ ಕೈಗೊಳ್ಳುವ ಮುನ್ನ ಅನುಮತಿ ಪಡೆಯಬೇಕು. ಅನುಮತಿ ನೀಡುವ ಮೊದಲು ವಾಸ್ತುಶಿಲ್ಪ ಸಮಿತಿ ದುರಸ್ತಿ ಅಥವಾ ಜೀರ್ಣೋದ್ಧಾರ ಕಾರ್ಯ ಅಗತ್ಯವಿದೆಯೇ ಎಂದು ಪರಿಶೀಲನೆ ಮಾಡುತ್ತದೆ ಎಂದರು.
ದುರಸ್ತಿ ಅಥವಾ ಜೀರ್ಣೋದ್ಧಾರಕ್ಕೆ ಈಗಾಗಲೆ ಬಂದಿರುವ ಸುಮಾರು 50 ಅರ್ಜಿಗಳನ್ನು ತೀರಸ್ಕರಿಸಲಾಗಿದೆ. ಒಟ್ಟಾರೆಯಾಗಿ, 205 ದೇವಸ್ಥಾನಗಳನ್ನು ‘ಎ’ ವರ್ಗದ ದೇವಸ್ಥಾನಗಳು ಎಂದು, 195 ‘ಬಿ’ ಕೆಟಗರಿ ದೇವಸ್ಥಾನಗಳು ಮತ್ತು 34,151 ದೇವಸ್ಥಾನಗಳು ‘ಸಿ’ ಕೆಟಗರಿ ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಕಳಪೆ ನಿರ್ವಹಣೆಯಲ್ಲಿರುವ ಬಹುತೇಕ ‘ಸಿ’ ವರ್ಗದ ದೇವಾಲಯಗಳು ಗ್ರಾಮೀಣ ಪ್ರದೇಶದಲ್ಲಿವೆ. ಈಗ ಸ್ವೀಕರಿಸಿರುವ ಬಹುತೇಕ ಅರ್ಜಿಗಳು ‘ಸಿ’ ವರ್ಗದ ದೇವಸ್ಥಾನಗಳದ್ದಾಗಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಯುನೆಸ್ಕೋ ಪಟ್ಟಿಗೆ ಸೇರಿದ ಹೊಯಸ್ಸಳರ ವಾಸ್ತುಶಿಲ್ಪ: ಇವರ ಕಾಲದ 3 ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ತಿಳಿಯಿರಿ
ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದ್ದರಿಂದ ಅನೇಕ ಸಂದರ್ಭಗಳಲ್ಲಿ ಮೂಲ ಕಲ್ಲಿನ ಕೆತ್ತನೆಗಳು, ಸ್ತಂಭಗಳು, ವಿಗ್ರಹಗಳು ಮತ್ತು ಇತರ ದೇವಾಲಯ ರಚನೆಗಳು ಕಣ್ಮರೆಯಾಗಿವೆ. ಇಂದಿನಿಂದ, ಪ್ರತಿಯೊಂದು ಕಲ್ಲಿನ ರಚನೆಯನ್ನು ದಾಖಲಿಸಬೇಕು ಮತ್ತು ಅವುಗಳನ್ನು ಮತ್ತೆ ಬಳಸಬಹುದೇ ಎಂದು ಪರಿಶೀಲಿಸಬೇಕು. ಪುರಾತನ ವಸ್ತುಗಳು ಕಳ್ಳತನವಾಗದಂತೆ ರಕ್ಷಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಆಯುಕ್ತರು ಹೇಳಿದರು. ಜೀರ್ಣೋದ್ಧಾರದ ಹೆಸರಿನಲ್ಲಿ ಖಾಸಗಿ ಟ್ರಸ್ಟ್‌ಗಳು ಮತ್ತು ಸಮಿತಿಗಳು ದೇವಸ್ಥಾನಗಳನ್ನು ವಶಪಡಿಸಿಕೊಂಡಿವೆ. 34,151 ದೇವಸ್ಥಾನಗಳ ಪೈಕಿ 17,000 ಕ್ಕೂ ಹೆಚ್ಚು ‘ಸಿ’ ಕೆಟಗರಿ ದೇವಸ್ಥಾನಗಳಿಗೆ ತುರ್ತು ದುರಸ್ತಿ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ರಾಜ್ಯದಲ್ಲಿನ ದೇವಾಲಯಗಳ ಸರ್ವಾಂಗೀಣ ಅಭಿವೃದ್ಧಿಯನ್ನು ತರಲು ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡ ವಿಷನ್ ಗ್ರೂಪ್ ಸ್ಥಾಪಿಸಲು ನಿರ್ಧರಿಸಿದೆ. ದುರಸ್ತಿ ಅಥವಾ ಜೀರ್ಣೋದ್ಧಾರ ಸೇರಿದಂತೆ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಬೇಕಾದ ಹಣಕಾಸಿನ ನೆರವನ್ನು ಈ ವಿಷನ್ ಗ್ರೂಪ್ ನೀಡುತ್ತದೆ ಎಂದು ತಿಳಿಸಿದರು.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Sun, 15 October 23